ಅಮೆರಿಕಾದಲ್ಲಿ ಕೆಲವೇ ತಿಂಗಳಲ್ಲಿ ಚುನಾವಣೆ ಇರುವಾಗ ಟ್ರಂಪ್ ಭೇಟಿ ಅಗತ್ಯವಿತ್ತೆ: ಹೆಚ್.ಡಿ.ಕುಮಾರಸ್ವಾಮಿ

ಅಮೆರಿಕಾದಲ್ಲಿ ಕೆಲವೇ ತಿಂಗಳಲ್ಲಿ ಚುನಾವಣೆ ಇರುವಾಗ ಡೊನಾಲ್ಡ್ ಟ್ರಂಪ್ ಭೇಟಿ ಅಗತ್ಯವಿತ್ತೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ವಿಜಯಪುರ: ಅಮೆರಿಕಾದಲ್ಲಿ ಕೆಲವೇ ತಿಂಗಳಲ್ಲಿ ಚುನಾವಣೆ ಇರುವಾಗ ಡೊನಾಲ್ಡ್ ಟ್ರಂಪ್ ಭೇಟಿ ಅಗತ್ಯವಿತ್ತೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಭೇಟಿಯಿಂದ ಅನುಕೂಲವಾಗಬೇಕೇ‌ ಹೊರತು ಲೂಟಿ ಹೊಡೆಯಲು ಅವಕಾಶವಾಗಬಾರದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ‌ ದೇಶಕ್ಕೆ ಅಮೆರಿಕ ಅಧ್ಯಕ್ಷರ ಭೇಟಿ ಇದೇ ಹೊಸದೇನಲ್ಲ. ಈವರೆಗೆ ಏಳು ಅಮೆರಿಕ ಅಧ್ಯಕ್ಷರು ಬಂದು ಹೋಗಿದ್ದಾರೆ. ಬೇರೆಬೇರೆ ದೇಶಗಳ ನಡುವೆ ಉತ್ತಮ ಸಂಬಂಧ ವೃದ್ಧಿಸಬೇಕು. ಬಾಂಧವ್ಯ ಬಲವರ್ಧನೆಗೆ ಆದ್ಯತೆ ನೀಡಬೇಕು. ಆದರೆ ಕೆಲವೇ ತಿಂಗಳುಗಳಲ್ಲಿ ಅಮೆರಿಕಾ ಚುನಾವಣೆ ಇರುವಾಗ ಭೇಟಿ ನೀಡುವುದರ ಔಚಿತ್ಯವೇನು ಎಂದು ಪ್ರಶ್ನಿಸಿದರು.

ಮೋದಿ ಹಾಗೂ ಟ್ರಂಪ್‌ ಪರಸ್ಪರ‌ ಹೊಗಳಿ ಭಾಷಣ ಮಾಡುತ್ತಾರೆ. ಅವರಿಬ್ಬರಲ್ಲಿ ಏನೇನು ವ್ಯತ್ಯಾಸ ಇಲ್ಲ‌. ಭಾರತ ಅತ್ಯಂತ ಸಮೃದ್ಧ ದೇಶ. ಇಲ್ಲಿ ವ್ಯಾಪಾರ ವಹಿವಾಟು ಮಾಡಲು ಸೂಕ್ತವಾದ ಜಾಗ ಎಂದು ಟ್ರಂಪ್ ಹೇಳಿದ್ದಾರೆ. ಹೀಗಾಗಿ ಅವರ ಭೇಟಿಯಿಂದ ದೇಶಕ್ಕೆ ಒಳ್ಳೆಯದಾಗಬೇಕು. ಅದರ ಬದಲಾಗಿ ಲೂಟಿ ಹೊಡೆಯಲು ಅವಕಾಶವಾಗಬಾರದು. ಈ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಮಾರ್ಮಿಕವಾಗಿ ಸಲಹೆ ನೀಡಿದರು.

ರಾಜ್ಯದಲ್ಲಿ ಜನ ಮಾತನಾಡಿಕೊಳ್ಳುವಂತಹ ಕೆಲಸಗಳನ್ನೇನೂ ಯಡಿಯೂರಪ್ಪ ನೇತೃತ್ವದ ಸರ್ಕಾರ ಮಾಡುತ್ತಿಲ್ಲ. ರಾಜ್ಯದ ಅಭಿವೃದ್ಧಿಗೆ ಯಡಿಯೂರಪ್ಪ ಇನ್ನೂ 6  ತಿಂಗಳ ಕಾಲವಾಕಾಶ ಕೇಳಿದ್ದರು. ಆರು ತಿಂಗಳ ಬಳಿಕ ಜನ ಬಡಿಗೆ ತೆಗೆದುಕೊಂಡು ವಿಪಕ್ಷಕ್ಕೆ ಹೊಡೆಯುತ್ತಾರೆ ಎಂದಿದ್ದರು. ನೋಡೋಣ ಆರು ತಿಂಗಳು ಸಮಯದಲ್ಲಿ ಅವರು ಅದೇನು ಸಾಧನೆ ಮಾಡುತ್ತಾರೆಯೋ ಎಂದು ಸವಾಲು ಹಾಕಿದರು.

ಇನ್ನು ಮುಂಬರುವ ನವೆಂಬರ್ 3ರಂದು ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, 2ನೇ ಬಾರಿಗೆ ಸ್ಪರ್ಧಿಸಿರುವ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2ನೇ ಬಾರಿಗೂ ಆಯ್ಕೆಯಾಗುವ ವಿಶ್ವಾಸದಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com