ಕಾರಜೋಳ ಬೆಂಬಲಿಗರಲ್ಲಿ ತಳಮಳ: ಆತಂಕ, ಭರವಸೆ ಎರಡನ್ನೂ ಸೃಷ್ಟಿಸಿರುವ 'ಡಿಸಿಎಂ’ ಪದವಿ

ಉಪಮುಖ್ಯಮಂತ್ರಿ ಹುದ್ದೆಯ ಕುರಿತು ಮಾತನಾಡುವುದು ಬೇಡ ಎಂದು ಸ್ವತಃ ಮುಖ್ಯಮಂತ್ರಿಯೇ ಫರ್ಮಾನು ಹೊರಡಿಸಿದ್ದರೂ ಬಿಜೆಪಿ ರಾಷ್ಟಾçಧ್ಯಕ್ಷ ಅಮಿತಾ ರಾಜ್ಯ ಭೇಟಿ ನೀಡಿದ ಬಳಿಕ ಮತ್ತೆ “ಡಿಸಿಎಂ ಹುದ್ದೆ” ಸಾಕಷ್ಟು ಸದ್ದು ಮಾಡಲಾರಂಭಿಸಿದೆ.
ಕಾರಜೋಳ ಬೆಂಬಲಿಗರಲ್ಲಿ ತಳಮಳ: ಆತಂಕ, ಭರವಸೆ ಎರಡನ್ನೂ ಸೃಷ್ಟಿಸಿರುವ 'ಡಿಸಿಎಂ’ ಪದವಿ
ಕಾರಜೋಳ ಬೆಂಬಲಿಗರಲ್ಲಿ ತಳಮಳ: ಆತಂಕ, ಭರವಸೆ ಎರಡನ್ನೂ ಸೃಷ್ಟಿಸಿರುವ 'ಡಿಸಿಎಂ’ ಪದವಿ

ಬಾಗಲಕೋಟೆ: ಉಪಮುಖ್ಯಮಂತ್ರಿ ಹುದ್ದೆಯ ಕುರಿತು ಮಾತನಾಡುವುದು ಬೇಡ ಎಂದು ಸ್ವತಃ ಮುಖ್ಯಮಂತ್ರಿಯೇ ಫರ್ಮಾನು ಹೊರಡಿಸಿದ್ದರೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರಾಜ್ಯ ಭೇಟಿ ನೀಡಿದ ಬಳಿಕ ಮತ್ತೆ “ಡಿಸಿಎಂ ಹುದ್ದೆ” ಸಾಕಷ್ಟು ಸದ್ದು ಮಾಡಲಾರಂಭಿಸಿದೆ.

ಕಳೆದ ಎರಡು ದಿನಗಳಲ್ಲಿ ಡಿಸಿಎಂ ಹುದ್ದೆಯಲ್ಲಿದ್ದವರನ್ನು ಕೈ ಬಿಟ್ಟು, ಹೊಸಬರಿಗೆ ಅವಕಾಶ ಸಿಗಲಿದೆ ಎನ್ನುವ ಊಹಾಪೋಹ ದಟ್ಟವಾಗಿ ಹರಡಿದೆ. ಸ್ವತಃ ಶಾ ಅವರೇ ಈ ರೀತಿಯ ಸಲಹೆ ನೀಡಿದ್ದಾರೆ ಎನ್ನುವ ಮಾತು ಬಿಜೆಪಿ ಪಾಳೆಯದಲ್ಲಿ ಓಡಾಡುತ್ತಿದೆ. 

ಪರಿಣಾಮವಾಗಿ ಈಗಾಗಲೇ ಡಿಸಿಎಂ ಹುದ್ದೆಯಲ್ಲಿದ್ದವರು ತಮ್ಮ ಹುದ್ದೆಗೆ ಭಂಗವಿಲ್ಲವೆಂದು ಎಷ್ಟೇ ಸಮರ್ಥಿಸಿಕೊಂಡರೂ ಆತಂಕದ ಅಳಕು ಶುರುವಾಗಿರುತ್ತದೆ.  ಅದೇ ರೀತಿ ಡಿಸಿಎಂ ಹುದ್ದಾಕಾಂಕ್ಷಿಗಳಲ್ಲಿ ಹೊಸ ಭರವಸೆ ಸಹಜವಾಗಿಯೇ ಹುಟ್ಟಿಕೊಂಡಿರುತ್ತದೆ. 

ಮುಖ್ಯಮಂತ್ರಿ  ಬಿಎಸ್‌ವೈ ಮತ್ತು ಅಮಿತ್ ಶಾ ಭೇಟಿ ವೇಳೆ ಡಿಸಿಎಂ ಹುದ್ದೆಯಿಂದ ಇಬ್ಬರನ್ನು ಮುಕ್ತಗೊಳಿಸಿ ಹೊಸದಾಗಿ ಮೂವರಿಗೆ ಅವಕಾಶ ಕಲ್ಪಿಸಿ ಎನ್ನುವ ಸಲಹೆಯನ್ನು ನೀಡಿದ್ದಾರೆ ಎನ್ನುವ ಊಹಾಪೋಹದಿಂದಾಗಿ ರಮೇಶ ಜಾರಕಿಹೊಳಿ, ಶ್ರೀರಾಮುಲು ಇತರರಲ್ಲಿ ಉತ್ಸಾಹ ಇಮ್ಮಡಿಗೊಂಡಿದೆ.

ಇರುವ ಮೂವರ ಡಿಸಿಎಂಗಳ ಪೈಕಿ ಇಬ್ಬರನ್ನು ಕೈಬಿಟ್ಟು ಹೊಸದಾಗಿ ಮೂವರನ್ನು ಸೇರಿಸಿಕೊಳ್ಳುವುದು ಸಣ್ಣ ಸಂಗತಿ ಏನಲ್ಲ. ಸದ್ಯ ಬಿಎಸ್‌ವೈ ಸಂಪುಟದಲ್ಲಿ ಇರುವ ಮೂವರೂ ಪಕ್ಷದಲ್ಲಿ ಮೂವರು ಸಾಕಷ್ಟು ಪ್ರಭಾವವನ್ನು ಹೊಂದಿದವರಾಗಿದ್ದಾರೆ. 

ಶಾಸಕರೇ ಅಲ್ಲದ ಲಕ್ಷö್ಮಣ ಸವದಿ ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದು, ಮುಧೋಳ ಮೀಸಲು ವಿಧಾನಸಭೆ ಕ್ಷೇತ್ರದಿಂದ ೫ ನೇ ಬಾರಿಗೆ ಆಯ್ಕೆಗೊಂಡಿರುವ ಹಿರಿಯ ಶಾಸಕ ಗೋವಿಂದ ಕಾರಜೋಳ ಎಸ್ಸಿ ಸಮುದಾಯಕ್ಕೆ ಸೇರಿದವರಾಗಿದ್ದು, ಅತ್ಯಂತ ಹಿರಿಯ ಸಚಿವರಾಗಿದ್ದಾರೆ. ಇನ್ನು ಡಾ. ಅಶ್ವಥ ನಾರಾಯಣ ಕೂಡ ಪಕ್ಷದಲ್ಲಿ ಸಾಕಷ್ಟು ವರ್ಚಸ್ಸು ಹೊಂದಿದವರಾಗಿದ್ದಾರೆ. ಈ ಮೂವರ ಪೈಕಿ ಯಾರನ್ನು ಕೈಬಿಡಬೇಕು ಎನ್ನುವ ನಿರ್ಧಾರಕ್ಕೆ ಬರುವುದು ಸುಲಭಸಾಧ್ಯದ ಕೆಲಸವಲ್ಲ.

ಮೂಲಗಳ ಪ್ರಕಾರ ಸಂಪುಟದಲ್ಲಿನ ಹಿರಿಯರನ್ನು ಕೈಬಿಡಿ ಎಂದಾಗ ಅತ್ಯಂತ ಹಿರಿಯ ಸಚಿವರಾಗಿರುವ ಗೋವಿಂದ ಕಾರಜೋಳ ಮೊದಲಿಗರಾಗಲಿದ್ದಾರೆ. ಇನ್ನು ಅಶ್ವತ್ಥ ನಾರಾಯಣ ಮತ್ತು ಲಕ್ಷ್ಮಣ ಸವದಿ ಬಳಿಕ ಬರುತ್ತಾರೆ. ಬಿಎಸ್‌ವೈ ಸದ್ಯದ ಊಹಾಪೋಹದ ಪ್ರಕಾರ ಇಬ್ಬರನ್ನು ಬಿಡಲೇ ಬೇಕಾದ ಅನಿವಾರ್ಯತೆ ಬಂದಾಗ ಗೋವಿಂದ ಕಾರಜೋಳರನ್ನು ಎಲ್ಲಿ ಕೈ ಬಿಡುತ್ತಾರೋ ಎನ್ನುವ ಆತಂಕ ಬಾಗಲಕೋಟೆ ಜಿಲ್ಲೆಯಲ್ಲಿನ ಅವರ ಬೆಂಬಲಿಗರಲ್ಲಿ ಹೆಚ್ಚಾಗುತ್ತಿದೆ. ಹಾಲಿ ಉಪಮುಖ್ಯಮಂತ್ರಿಗಳ ಕೈ ಬಿಡುವ ವಿಚಾರ ಊಹಾಪೋಹವಾಗಿಯೇ ಉಳಿಯಬೇಕು. ಕಾರಜೋಳರನ್ನು ಕೈ ಬಿಡುವ ಕೆಲಸ ಆಗಬಾರದು ಎಂದು ಪ್ರಾರ್ಥಿಸುತ್ತಿದ್ದಾರೆ.

ಉಪ ಮುಖ್ಯಮಂತ್ರಿಗಳಾಗಿದ್ದವರು ಎಲ್ಲಿ ತಮ್ಮ ಹುದ್ದೆಗಳು ಕೈ ಬಿಡುತ್ತವೋ ಎನ್ನುವ ಚಿಂತೆಗೆ ಒಳಗಾಗಿದ್ದರೆ ಹೊಸಬರನ್ನು ಸೇರಿಸಿಕೊಳ್ಳಿ ಎಂದು ಅಧ್ಯಕ್ಷರೇ ಸಲಹೆ ಮಾಡಿದ್ದಾರೆ ಎನ್ನುವ ಊಹಾಪೋಹದಿಂದಾಗಿ ಡಿಸಿಎಂ ಹುದ್ದೆಯ ಆಕಾಂಕ್ಷಿಗಳಲ್ಲಿ ಆಸೆ ಮತ್ತಷ್ಟು ಗಟ್ಟಿಯಾಗತೊಡಗಿದೆ.

ಗೋವಿಂದ ಕಾರಜೋಳರ ಹಿರಿತನದಿಂದಾಗಿ ಜಿಲ್ಲೆಗೆ ಉಪಮುಖ್ಯಮಂತ್ರಿ ಸ್ಥಾನದ ಭಾಗ್ಯ ಲಭಿಸಿದ್ದು, ಅದನ್ನು ಉಳಿಸಿಕೊಳ್ಳುವುದಕ್ಕಾಗಿ ಜಿಲ್ಲೆಯ ಬಿಜೆಪಿ ಶಾಸಕರು ಮತ್ತು ಮುಖಂಡರು ಒಗ್ಗಟ್ಟಿನ ಬಲ ಪ್ರದರ್ಶಿಸಬೇಕಾದ ಪ್ರಸಂಗ ನಿರ್ಮಾಣವಾಗಬಹುದು. ಈ ವೇಳೆ ಜಿಲ್ಲೆಯ ಬಿಜೆಪಿ ಶಾಸಕರು ಮತ್ತು ಮುಖಂಡರು ಸಿಎಂ ಬಿಎಸ್‌ವೈ ಮೇಲೆ ಇನ್ನಿಲ್ಲದ ಒತ್ತಡ ತಂತ್ರಗಾರಿಕೆ ಅನುಸರಿಸುವ ಮೂಲಕ ಡಿಸಿಎಂ ಸ್ಥಾನ ಉಳಿಸಿಕೊಳ್ಳಬೇಕಿದೆ.

ಬಿಎಸ್‌ವೈ ಅವರು ವಿದೇಶ ಪ್ರವಾಸ ಕೈಗೊಂಡಿದ್ದರೂ ಡಿಸಿಎಂ ಸ್ಥಾನಕ್ಕಾಗಿ ಪೈಪೋಟಿ ಹೆಚ್ಚಳವಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷರೂ ಸೇರಿದಂತೆ ಪಕ್ಷದ ಹಿರಿಯ ಮುಖಂಡರ ಮುಂದೆ ಬಲಾಬಲಗಳ ಪ್ರದರ್ಶಗಳು ನಡೆಯುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.
ಡಿಸಿಎಂ ಸ್ಥಾನಗಳಲ್ಲಿ ಬದಲಾವಣೆ ಆಗಲಿದೆ ಎನ್ನುವ ಊಹಾಪೋಹದಿಂದಾಗಿ ಗೋವಿಂದ ಕಾರಜೋಳರ ಬೆಂಬಲಿಗರಲ್ಲಿ ಆತಂಕ ಮನೆ ಮಾಡಿರುವುದಂತೂ ನಿಜ. ಇದನ್ನು ಹುಸಿಗೊಳಿಸುವ ಕೆಲಸ ಈ ಭಾಗದ ಬಿಜೆಪಿ ಶಾಸಕರು ಮತ್ತು ಮುಖಂಡರಿಂದ ಆಗಬೇಕಷ್ಟೆ. ಅಂದಾಗ ಜಿಲ್ಲೆಗೆ ಸಿಕ್ಕಿರುವ ಡಿಸಿಎಂ ಸ್ಥಾನ ಅಬಾಧಿತವಾಗಿ ಮುಂದುವರಿಯಲಿದೆ. ಮುಂದುವರಿಯಬೇಕು ಎನ್ನುವುದು ಜಿಲ್ಲೆಯ ಜನತೆಯ ಆಶಯವೂ ಆಗಿದೆ.

ವಿಠ್ಠಲ ಆರ್. ಬಲಕುಂದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com