ಪಿಯು ಉಪನ್ಯಾಸಕರಿಂದ ಪ್ರತಿಭಟನೆ, ಪರೀಕ್ಷೆ ವೇಳೆ ಕಪ್ಪು ಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರು

ವೇತನ ತಾರತಮ್ಯ ಹಾಗೂ ಮುಂಬಡ್ತಿ ಮೂಲಕ ಪ್ರಾಂಶುಪಾಲರು ನೇಮಕ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯದ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು ಗುರುವಾರ ನಗರದ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಉಪನ್ಯಾಸಕರ ಪ್ರತಿಭಟನೆ
ಉಪನ್ಯಾಸಕರ ಪ್ರತಿಭಟನೆ

ಬೆಂಗಳೂರು: ವೇತನ ತಾರತಮ್ಯ ಹಾಗೂ ಮುಂಬಡ್ತಿ ಮೂಲಕ ಪ್ರಾಂಶುಪಾಲರು ನೇಮಕ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯದ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು ಗುರುವಾರ ನಗರದ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳ ಉಪನ್ಯಾಸಕರು ಹಾಗೂ ಪ್ರಾಂಶುಪಾಲರು ಪಾಲ್ಗೊಂಡಿದ್ದರು. ‘ವೇತನ ತಾರತಮ್ಯ ಸರಿಪಡಿಸಬೇಕು. ಪ್ರಾಂಶುಪಾಲರ ಹುದ್ದೆಗೆ ಮುಂಬಡ್ತಿ ಮೂಲಕ ನೇಮಕಾತಿ ಮಾಡಿಕೊಳ್ಳಬೇಕು. ಉಪನ್ಯಾಸಕರ ಕಾರ್ಯಭಾರ ಕುರಿತು ಸಮಿತಿ ರಚಿಸಬೇಕು’ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.

‘ಉಪನ್ಯಾಸಕರು ಎದುರಿಸುತ್ತಿರುವ ಸಮಸ್ಯೆಗಳ ಇತ್ಯರ್ಥಕ್ಕಾಗಿ 8 ವರ್ಷಗಳಿಂದ ಹೋರಾಟ ಮಾಡಲಾಗುತ್ತಿದೆ. ಆಯಾ ಸರ್ಕಾರಗಳಿಗೂ ಮನವಿ ಸಲ್ಲಿಸಲಾಗಿದ್ದು, ಪರಿಹಾರ ಮಾತ್ರ ಸಿಕ್ಕಿಲ್ಲ’ ಎಂದು ಕರ್ನಾಟಕ ಪದವಿಪೂರ್ವ ಕಾಲೇಜ್ ಗಳ ಉಪನ್ಯಾಸಕರ ಸಂಘದ ಉಪಾಧ್ಯಕ್ಷ ಎಸ್ ಆರ್ ವೆಂಕಟೇಶ್ ಅವರು ಹೇಳಿದ್ದಾರೆ.

‘2011ರಲ್ಲಿ ಮೌಲ್ಯಮಾಪನ ಬಹಿಷ್ಕರಿಸಿ ಪ್ರತಿಭಟನೆ ನಡೆಸಲಾಗಿತ್ತು. ಅಂದು ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರು ಪಿಯು ಉಪನ್ಯಾಸಕರ ಹಾಗೂ ಪ್ರಾಂಶುಪಾಲರ ಸಮಸ್ಯೆ ಪರಿಹಾರಕ್ಕಾಗಿ ಅಂದು ಇಲಾಖೆಯ ಕಾರ್ಯದರ್ಶಿಯಾಗಿದ್ದ ಕುಮಾರ್ ನಾಯ್ಕ ನೇತೃತ್ವದಲ್ಲಿ ಸಮಿತಿ ರಚಿಸಿದ್ದರು. ಆ ಸಮಿತಿ ನೀಡಿರುವ ವರದಿಯನ್ನು ಇದುವರೆಗೂ ಜಾರಿಗೆ ತಂದಿಲ್ಲ’ ಎಂದು ದೂರಿದರು.

‘ಸರ್ಕಾರದ ನಿರ್ಲಕ್ಷ್ಯ ವನ್ನು ಖಂಡಿಸಿ ಪ್ರತಿಭಟನೆ ಮುಂದುವರಿಸಲಿದ್ದೇವೆ. ಕೆಲವೇ ದಿನಗಳಲ್ಲಿ ಪಿಯು ಪರೀಕ್ಷೆಗಳು ಬರಲಿದ್ದು, ಕೈಗೆ ಕಪ್ಪು ಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾಗಲಿದ್ದೇವೆ. ಅದಕ್ಕೂ ಸರ್ಕಾರಸ್ಪಂದಿಸದಿದ್ದರೆ ಅನಿವಾರ್ಯವಾಗಿ ಮೌಲ್ಯಮೌಪನ ಬಹಿಷ್ಕರಿಸಬೇಕಾಗುತ್ತದೆ’ ಎಂದು ಪ್ರತಿಭಟನಕಾರರು ಎಚ್ಚರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com