ನಿಮ್ಮದು ಹೋರಾಟವಲ್ಲ ಸ್ವಾರ್ಥ ರಾಜಕಾರಣ: ಸಿಡಿದೆದ್ದ ಸುಮಲತಾ ಅಂಬರೀಷ್!

ಮೈಷುಗರ್ ಸಕ್ಕರೆ ಕಾರ್ಖಾನೆ ಆರಂಭಿಸಲು ಆಗ್ರಹಿಸಿ ರೈತರು ಹಾಗೂ ವಿವಿಧ ಪಕ್ಷದ ಮುಖಂಡರ ಪ್ರತಿಭಟನೆ ಹಿನ್ನೆಲೆ ಸಂಸದೆ ಸುಮಲತಾ ಅಂಬರೀಶ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಸುಮಲತಾ ಅಂಬರೀಷ್
ಸುಮಲತಾ ಅಂಬರೀಷ್

ಮಂಡ್ಯ: ಮೈಷುಗರ್ ಸಕ್ಕರೆ ಕಾರ್ಖಾನೆ ಆರಂಭಿಸಲು ಆಗ್ರಹಿಸಿ ರೈತರು ಹಾಗೂ ವಿವಿಧ ಪಕ್ಷದ ಮುಖಂಡರ ಪ್ರತಿಭಟನೆ ಹಿನ್ನೆಲೆ ಸಂಸದೆ ಸುಮಲತಾ ಅಂಬರೀಶ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಗುರುವಾರ ನಗರದಲ್ಲಿ ನಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು,ಕಾರ್ಖಾನೆ ಬಂದ್ ಆಗಿದ್ದಾಗ, ಪಾಳು ಬಿದ್ದ ಸಮಯದಲ್ಲಿ ಬಾಯಿ ಮುಚ್ಚಿಕೊಂಡಿದ್ದವರು ಕಾರ್ಖಾನೆ ಆರಂಭವಾಗುತ್ತಿರುವ ಹೊತ್ತಿನಲ್ಲಿ ಕೋಪ, ರೋಷ, ಆವೇಶದೊಂದಿಗೆ ಹೋರಾಟಕ್ಕಿಳಿದಿದ್ದಾರೆ. ಇದು ಅವರ ಸ್ವಾರ್ಥ ರಾಜಕಾರಣಕ್ಕೆ ಸಾಕ್ಷಿಯಾಗಿದೆ. ಹೋರಾಟದ ನೆಪದಲ್ಲಿ ಕಾರ್ಖಾನೆ ಆರಂಭವಾಗುವುದನ್ನು ತಡೆಯುವುದು ಅವರ ಮೂಲ ಉದ್ದೇಶವೆಂದು ಕಿಡಿಕಾರಿದರು. 

ಸ್ವಾರ್ಥ ರಾಜಕಾರಣದಿಂದ ಏನನ್ನೂ ಸಾಧಿಸಿದಂತಾಗುವುದಿಲ್ಲ, ಸರ್ಕಾರಿ ಸ್ವಾಮ್ಯದಲ್ಲಿ ಕಾರ್ಖಾನೆ ಆರಂಭವಾಗದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಹೇಳುತ್ತಿದ್ದಾರೆ. ಉಗ್ರ ಹೋರಾಟ ಎಂಬ ಮಾತನ್ನು ಹೇಳುವ ನೈತಿಕತೆ ನಿಮಗಿಲ್ಲ. ಗಡಿಯಲ್ಲಿ ಶತ್ರು ಸೈನ್ಯದೊಂದಿಗೆ ನಮ್ಮ ಸೈನಿಕರು ನಡೆಸುತ್ತಿರುವುದು ನಿಜವಾದ ಹೋರಾಟ. ಆ ಮಾತನ್ನು ನೀವು ಹೇಳಿದರೆ ಸೈನಿಕರಿಗೆ ಮಾಡುವ ಅವಮಾನ ಹಾಗೂ ರೈತರಿಗೆ ಮಾಡುವ ದ್ರೋಹ ಎಂದು ಹೇಳಿದರು.

ಸದ್ಯ ಈಗ ಯಾವ ಚುನಾವಣೆ ಸಹ ಇಲ್ಲ. ಆಗಿದ್ದರೂ ಕಾರ್ಖಾನೆ ತೆರೆಯಲು ನೀವು ಬಿಡುತ್ತಿಲ್ಲ. ನಿಮಗೇಕೆ ಈ ವಿಚಾರದಲ್ಲಿ ಆತಂಕ ಎಂದರು. ಜಿಲ್ಲೆಯ ಶಾಸಕರು ಓ ಅಂಡ್ ಎಂ ಮೂಲಕ ಕಾರ್ಖಾನೆ ತೆರೆಯಲು ವಿರೋಧಿಸುತ್ತಿದ್ದಾರೆ. ಖಾಸಗೀಕರಣ ಮಾಡಿ ಕಾರ್ಖಾನೆ ತೆರೆದರೆ ಉಗ್ರ ಹೋರಾಟ ಮಾಡುವ  ಎಚ್ಚರಿಕೆ ಕೊಡುತ್ತಾರೆ. ನಿಮ್ಮದು ಉಗ್ರ ಹೋರಾಟವಲ್ಲ. ಸ್ವಾರ್ಥ ರಾಜಕಾರಣ ಎಂದರು.

ದ್ವಂದ್ವ ನಿಲುವಿನ ಹೋರಾಟದಿಂದ ಯಾರನ್ನೂ ಮೋಸಗೊಳಿಸುವುದಕ್ಕೆ ಸಾಧ್ಯವಿಲ್ಲ. ಇದನ್ನು ಹೋರಾಟಗಾರರು ಅರ್ಥ ಮಾಡಿಕೊಳ್ಳಬೇಕು. ಮೈಶುಗರ್ ಕಾರ್ಖಾನೆ ಆರಂಭವಾಗದೆ ಹಲವು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೀವು ಮಾಡುವ ಅಡಚಣೆಯಿಂದ ಕಾರ್ಖಾನೆ ಈಗಲೂ ಆರಂಭಗೊಳ್ಳದೆ ಇನ್ನಷ್ಟು ರೈತರು ಆತ್ಮಹತ್ಯೆಗೆ ಶರಣಾದರೆ ಅದಕ್ಕೆ ನೀವೇ ಹೊಣೆಯಾಗುತ್ತೀರಿ ಎಂದು ಎಚ್ಚರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com