ಬಾಗಲಕೋಟೆಯಲ್ಲಿ ಹೋಳಿ ಸಂಭ್ರಮ: ರೇನ್ ಡಾನ್ಸ್ ಗೆ ಹೆಜ್ಜೆ ಹಾಕಿದ ಯುವಪಡೆ

ಹೋಳಿಯ ಬಣ್ಣದಾಟದ ಎರಡನೇ ದಿನವಾದ ಬುಧವಾರ ನಗರದ ಬಸವೇಶ್ವರ ವೃತ್ತದಲ್ಲಿ ಆಯೋಜಿಸಿದ್ದ ಮಳೆನೃತ್ಯ ಕಾರ್ಯಕ್ರಮಕ್ಕೆ ಸಹಸ್ರಾರು ಯುವಕರು ಸಾಕ್ಷಿಯಾದರು.
ಬಾಗಲಕೋಟೆ ನಗರದಲ್ಲಿ ಕಂಡು ಬಂದ ರೇನ್ ಡಾನ್ಸ್ ಚಿತ್ರ
ಬಾಗಲಕೋಟೆ ನಗರದಲ್ಲಿ ಕಂಡು ಬಂದ ರೇನ್ ಡಾನ್ಸ್ ಚಿತ್ರ

ಬಾಗಲಕೋಟೆ: ಹೋಳಿಯ ಬಣ್ಣದಾಟದ ಎರಡನೇ ದಿನವಾದ ಬುಧವಾರ ನಗರದ ಬಸವೇಶ್ವರ ವೃತ್ತದಲ್ಲಿ ಆಯೋಜಿಸಿದ್ದ ಮಳೆನೃತ್ಯ ಕಾರ್ಯಕ್ರಮಕ್ಕೆ ಸಹಸ್ರಾರು ಯುವಕರು ಸಾಕ್ಷಿಯಾದರು.

ಹೋಳಿ ಅಂಗವಾಗಿ ಏರ್ಪಡಿಸಿದ್ದ ರೇನ್ ಡಾನ್ಸ್ ನಲ್ಲಿ ಭಾಗವಹಿಸಿದ್ದ ಯುವಕರು, ಯುವತಿಯರು ಹಾಗೂ ಜನಸಮೂಹದ ಉತ್ಸಾಹ ಮುಗಿಲು ಮುಟ್ಟಿತ್ತು.

ಬೆಳಗ್ಗೆ ೧೧ರ ಸುಮಾರಿಗೆ ರೇನ್ ಡ್ಯಾನ್ಸ್ ಆರಂಭಗೊಳ್ಳುತ್ತಿದ್ದಂತೆ ಯುವಕ, ಯುವತಿಯರು ರಂಗುರಂಗಿನ ಹಾಡುಗಳಿಗೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು. ಮಧ್ಯಾಹ್ನದವರೆಗೂ ನಡೆದ ಕಾರ್ಯಕ್ರಮ ಹೋಳಿ ಹಬ್ಬಕ್ಕೆ ವಿಶೇಷ ಮೆರಗನ್ನು ತಂದುಕೊಟ್ಟಿತು
.
ಬಳಿಕ ನಡೆದ ಬಣ್ಣದ ಬಂಡಿಯಲ್ಲಿ ಚಕ್ಕಡಿ ಮತ್ತು ಟ್ರಾಕ್ಟರ್‌ಗಳಲ್ಲಿ ಬಣ್ಣದ ಬ್ಯಾರಲ್‌ಗಳನ್ನು ತುಂಬಿಕೊಂಡು ಆಕರ್ಷಕ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಯುವಕರ ಬಣ್ಣದ ನೀರಿನಿಂದ ಆಕಾಶದಲ್ಲಿ ಮೂಡುತ್ತಿದ್ದ ಆಕರ್ಷಕ ಚಿತ್ತಚಿತ್ತಾರದ ರಂಗೋಲಿಗಳು ನೋಡುಗರ ಹೃನ್ಮಗಳನ್ನು ಸೆಳೆದವು.

ಸಂಜೆ ನಡೆದ ಸೋಗಿನ ಬಂಡೆ ಮೆರವಣಿಗೆಯಲ್ಲೂ ಜನತೆ ಉತ್ಸಾಹದಿಂದ ಭಾಗವಹಿಸಿದ್ದರು. ಮೆರವಣಿಗೆಯಲ್ಲಿ ಇತಿಹಾಸ ಪುರುಷರ, ರಾಷ್ಟ ನಾಯಕರ ವೇಷದಲ್ಲಿ ಯುವಕರು ಕಾಣಿಸಿಕೊಂಡು ಸೋಗಿನ ಬಂಡಿಗೆ ವಿಶೇಷ ಮೆರಗು ತರುವ ಜತೆಗೆ ರಾಷ್ಟಭಕ್ತಿಯನ್ನು ಸಾರಿ ಹೇಳಿದರು.

ಎರಡು ದಿನಗಳ ಬಣ್ಣದಾಟದಲ್ಲಿ ಮಿಂದೆದ್ದ ಜನತೆ ಗುರುವಾರ ನಡೆಯಲಿರುವ ಬಣ್ಣದಾಟದಲ್ಲಿ ಸಂಭ್ರಮಿಸಲು ಉತ್ಸಾಹ ತೋರುತ್ತಿದ್ದರು. ಎರಡು ದಿನಗಳ ಕಾಲ ಹಳೆ ಪಟ್ಟಣದಲ್ಲಿ ನಡೆದ ಬಣ್ಣದ ಸಂಭ್ರಮ ಕೊನೆಯ ದಿನ ವಿದ್ಯಾಗಿರಿ ಮತ್ತು ನವನಗರದಲ್ಲಿ ಆಚರಿಸಲು ಸಜ್ಜಾಗಿದ್ದಾರೆ. ಇದೇ ಮೊದಲ ಬಾರಿಗೆ ವಿದ್ಯಾಗಿರಿ ಮತ್ತು ನವನಗರದಲ್ಲಿ ಹೋಳಿ ಬಣ್ಣದ ಗಮ್ಮತ್ತು ಕಾಣಿಸಿಕೊಳ್ಳಲಿದೆ.

ಗುರುವಾರದ ಬಣ್ಣದ ಸಂಭ್ರಮದೊಂದಿಗೆ ಪ್ರಸಕ್ತ ವರ್ಷದ ಹೋಳಿ ಹಬ್ಬ ರಾತ್ರಿ ಸೋಗಿನ ಬಂಡಿ ಮೆರವಣಿಗೆಯೊಂದಿಗೆ ಸಂಪನ್ನಗೊಳ್ಳಲಿದೆ.

-ವಿಠ್ಠಲ ಆರ್. ಬಲಕುಂದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com