ನಾಳೆಯಿಂದ 1 ವಾರ ರಾಜ್ಯಾದ್ಯಂತ ಮಾಲ್, ಚಿತ್ರಮಂದಿರ, ಪಬ್ ಗಳು ಬಂದ್; ಮದುವೆ, ಸಭೆ-ಸಮಾರಂಭಗಳಿಗೆ ನಿರ್ಬಂಧ

ಮಾರಣಾಂತಿಕ ಕೊರೋನಾ ವೈರಸ್ ಹರಡದಂತೆ ತಡೆಯಲು ನಾಳೆಯಿಂದ ಒಂದು ವಾರ ರಾಜ್ಯಾದ್ಯಂತ ಮಾಲ್, ಚಿತ್ರಮಂದಿರ, ಶಾಲಾ, ಕಾಲೇಜುಗಳು, ವಿಶ್ವವಿದ್ಯಾಲಯಗಳನ್ನು ಬಂದ್ ಮಾಡುವಂತೆ....
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

ಬೆಂಗಳೂರು: ಮಾರಣಾಂತಿಕ ಕೊರೋನಾ ವೈರಸ್ ಹರಡದಂತೆ ತಡೆಯಲು ನಾಳೆಯಿಂದ ಒಂದು ವಾರ ರಾಜ್ಯಾದ್ಯಂತ ಮಾಲ್, ಚಿತ್ರಮಂದಿರ, ಶಾಲಾ, ಕಾಲೇಜುಗಳು, ವಿಶ್ವವಿದ್ಯಾಲಯಗಳನ್ನು ಬಂದ್ ಮಾಡುವಂತೆ ಮತ್ತು ಮದುವೆ, ಸಭೆ-ಸಮಾರಂಭಗಳಲ್ಲಿ 100ಕ್ಕಿಂತಲೂ ಹೆಚ್ಚು ಜನ ಸೇರದಂತೆ ನಿರ್ಬಂಧ ವಿಧಿಸಿ ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ.

ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು, ಒಂದು ವಾರಗಳ ಕಾಲ ಕ್ರೀಡಾ ಕಾರ್ಯಕ್ರಮಗಳು, ನೈಟ್ ಕ್ಲಬ್, ಪಬ್, ಮೇಳ, ಸೆಮಿನಾರ್ ಗಳು ಮತ್ತು ಜಾತ್ರೆಗಳನ್ನು ಬಂದ್ ಮಾಡಲಾಗುತ್ತಿದೆ. ಒಂದು ವಾರದ ನಂತರ ಪರಿಸ್ಥಿತಿ ನೋಡಿಕೊಂಡು ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಸರ್ಕಾರ ನಡೆಸುತ್ತಿರುವ ವಿದ್ಯಾರ್ಥಿನಿಲಯಗಳು, ಸರ್ಕಾರಿ ವಸತಿ ಶಾಲೆಗಳಲ್ಲಿ ಹೆಚ್ಚಿನ ಕಾಳಜಿ ವಹಿಸುವಂತೆ ಸೂಚಿಸಲಾಗಿದೆ.  ಪರೀಕ್ಷೆಗಳು, ಸರ್ಕಾರಿ ಕಚೇರಿಗಳು, ಅಧಿವೇಶನ ಅಬಾಧಿತವಾಗಿ ನಡೆಯಲಿವೆ. ವಿಶ್ವವಿದ್ಯಾಲಯ, ಕಾಲೇಜುಗಳಿಗೂ ಒಂದು ವಾರ ರಜೆ ಘೋಷಿಸಲಾಗುವುದು. ಸಾರ್ವಜನಿಕರು ಸಹಕರಿಸಬೇಕು ಎಂದು ಮುಖ್ಯಮಂತ್ರಿಗಳು ಮನವಿ ಮಾಡಿದರು.

ಕರೊನಾ ವೈರಸ್ ಸೋಂಕಿನಿಂದ ಕಲಬುರಗಿಯ ವ್ಯಕ್ತಿಯೊಬ್ಬರು ದುರದೃಷ್ಟವಶಾತ್ ಮೃತಪಟ್ಟ ಹಿನ್ನೆಲೆಯಲ್ಲಿ ಇಂದು ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ಹಾಗೂ ಡಾ. ದೇವಿ ಶೆಟ್ಟಿ ಹಾಗೂ ವಿವಿಧ ವೈದ್ಯಕೀಯ ಸಂಘಟನೆಗಳೊಂದಿಗೆ ಸಭೆ ನಡೆಸಿದ ನಂತರ ಮುಖ್ಯಮಂತ್ರಿ ಈ ನಿರ್ಧಾರವನ್ನು ಪ್ರಕಟಿಸಿದರು.

ಈ ಸೋಂಕು ತಗುಲದೆ ಇರುವಂತೆ ಮುನ್ನೆಚ್ಚರಿಕೆ ವಹಿಸಲು ಸೂಕ್ತ ಮಾರ್ಗಸೂಚಿಗಳನ್ನು ಹೊರಡಿಸಲಾಗುವುದು. ಎಲ್ಲ ಖಾಸಗಿ ಆಸ್ಪತ್ರೆಯವರು ಈ ಸೋಂಕಿನ ಲಕ್ಷಣ ಇರುವ ರೋಗಿಗಳು ಬಂದಲ್ಲಿ ಕಡ್ಡಾಯವಾಗಿ ಆರೋಗ್ಯ ಇಲಾಖೆಯ ಗಮನಕ್ಕೆ ತರಬೇಕು. ಈ ಬಗ್ಗೆ ಖಾಸಗಿ ಆಸ್ಪತ್ರೆಗಳ ಸಂಘಟನೆಯವರಿಗೂ ಸೂಚನೆ ನೀಡಲಾಗಿದೆ. ವಿದೇಶ ಪ್ರಯಾಣದಿಂದ ಬಂದ ಪ್ರಯಾಣಿಕರು ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು ಮತ್ತು ಅವರ ಕುಟುಂಬದವರು ಅವರು ಯಾವುದೇ ದೇಶದಿಂದ ಹಿಂದಿರುಗಿದರೂ, ಕಡ್ಡಾಯವಾಗಿ 14 ದಿನಗಳ ಕಾಲ ಅವರ ಮನೆಯಲ್ಲಿಯೇ ಪ್ರತ್ಯೇಕವಾಗಿರಬೇಕು(ಐಸೋಲೇಷನ್). ಎಲ್ಲ ಆಸ್ಪತ್ರೆಗಳು, ಚಿಕಿತ್ಸಾಲಯಗಳು, ಖಾಸಗಿ ಕ್ಲಿನಿಕ್‍ನವರು ಕಳೆದ 14 ದಿನಗಳಿಂದ ವಿದೇಶದಿಂದ ಹಿಂದಿರುಗಿ ಚಿಕಿತ್ಸೆ ಪಡೆದವರು ಇದ್ದಲ್ಲಿ ಆರೋಗ್ಯ ಇಲಾಖೆಯ ಗಮನಕ್ಕೆ ತರಬೇಕು.  ಖಾಸಗಿ ಆಸ್ಪತ್ರೆಗಳು ಎಲ್ಲ ರೀತಿಯಲ್ಲೂ ಸಹಕರಿಸಬೇಕು.

ಐಎಂಎ, ಡಾ. ದೇವಿ ಶೆಟ್ಟಿ, ಖಾಸಗಿ ಆಸ್ಪತ್ರೆಗಳ ಸಂಘದ ಅಧ್ಯಕ್ಷ ಡಾ. ರವೀಂದ್ರ ಅವರು ಸೇರಿದಂತೆ ಖಾಸಗಿ ಆಸ್ಪತ್ರೆಯವರು, ತಜ್ಞ ವೈದ್ಯರೊಂದಿಗೆ ಮುಖ್ಯಮಂತ್ರಿಗಳು ಸಮಾಲೋಚನೆ ನಡೆಸಿದರು. ಕೋವಿಡ್ 19 ಸೋಂಕು ಹರಡದಂತೆ ಸಹಕಾರ ನೀಡಲು ಮುಂದೆ ಬಂದಿದ್ದಾರೆ. ಅವರ ಜೊತೆಗೆ ಸಮಾಲೋಚನೆ ನಡೆಸಿದ್ದೇನೆ. ಸುಧಾ ಮೂರ್ತಿಯವರು ಇನ್‍ಫೋಸಿಸ್ ಫೌಂಡೇಷನ್ ವತಿಯಿಂದ ಈ ಸೋಂಕು ತಡೆಗಟ್ಟುವಲ್ಲಿ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ಕನಿಷ್ಠ 6 ಅಡಿ ಅಂತರ ಕಾಯ್ದುಕೊಳ್ಳಿ. ಯಾರನ್ನೂ ಮುಟ್ಟಬೇಡಿ(ಸೋಷಿಯಲ್ ಡಿಸ್ಟೆನ್ಸಿಂಗ್) ಸೋಂಕು ಪರೀಕ್ಷೆಗೆ ಹೆಚ್ಚುವರಿ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುವುದು. ಖಾಸಗಿ ಆಸ್ಪತ್ರೆಗಳೊಂದಿಗೆ ಸಮನ್ವಯ ವಹಿಸಲು ಒಂದು ಸಮಿತಿ ರಚಿಸಲಾಗುವುದು ಎಂದು ತಿಳಿಸಿದರು.

ಜನ ಸಾಧ್ಯವಾದಷ್ಟು ಪ್ರವಾಸ ಮಾಡಬಾರದು, ಸರ್ಕಾರಿ ಶಾಲೆ, ಕಚೇರಿ, ವಸತಿನಿಲಯ,  ವಿಶ್ವ ವಿದ್ಯಾಲಯ ಬಂದ್ ಆಗಲಿದೆ. ವೈದ್ಯಕೀಯ ಇಲಾಖೆ ಅಧಿಕಾರಿಗಳ ಜತೆ  ಚರ್ಚೆ ಮಾಡಿದ್ದೇವೆ. ಆಮೇಲೆ ಪರಿಸ್ಥಿತಿ ನೋಡಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ.  ರಾಜ್ಯದ ಜನರ ಹಿತದೃಷ್ಟಿಯಿಂದ  ಎಚ್ಚರಿಕೆ ಕ್ರಮ ಕೈಗೊಂಡಿದ್ದೇವೆ. ಜನ ಪ್ರವಾಸ ನಿಲ್ಲಿಸಬೇಕೆಂದು ಮನವಿ ಮಾಡುತ್ತೇವೆ  ಎಂದು ಹೇಳಿದರು.

ಪರೀಕ್ಷೆಗಳು ಎಸ್ಎಸ್ಎಲ್ಸಿ, ಪಿಯುಸಿ  ಪರೀಕ್ಷೆಗಳು, ವಿಧಾನ ಮಂಡಲ ಅಧಿವೇಶನ ಮುಂದುವರಿಯಲಿವೆ. ಪ್ರಾಥಮಿಕ ಶಾಲೆಗಳ ರಜೆ  ಮುಂದುವರಿಯಲಿದೆ. ಇತರೆ ರಾಷ್ಟ್ರಗಳು ಕೈಗೊಂಡ ಕ್ರಮವನ್ನೇ ನಾವೂ ಕೈಗೊಳ್ಳುತ್ತಿದ್ದೇವೆ.  ಕೇಂದ್ರ ಸರ್ಕಾರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸೂಚಿತ ಮಾರ್ಗದರ್ಶ ನವನ್ನು  ಪಾಲಿಸುತ್ತಿದ್ದೇವೆ. ಶೇ.70 ಕ್ಕಿಂತ ಹೆಚ್ಚು ಮಂದಿ ಸ್ವಯಂ ಜಾಗೃತಿ  ತೆಗೆದುಕೊಂಡಿದ್ದಾರೆ. ಇದರಿಂದ ರಾಜ್ಯಕ್ಕೆ ಅಂತಹ ಆತಂಕ ಬೇಡ. ಸಾಧ್ಯವಾದಷ್ಟು ಶೇಕ್  ಹ್ಯಾಂಡ್‌ ಮಾಡಬೇಡಿ, ಆರು ಅಡಿ ದೂರದಲ್ಲಿ ಇರಲು ಪ್ರಯತ್ನಿಸಿ ಎಂದು ಸಲಹೆ ನೀಡಿದರು.

ಖಾಸಗಿ,  ಸರ್ಕಾರಿ ಆಸ್ಪತ್ರೆಗಳಿಗೆ ಮನವಿ ಮಾಡಿದ್ದು ಸಹಕರಿಸಲು ಒಪ್ಪಿದ್ದಾರೆ. ಇಂದಿನ  ಸಭೆಯಲ್ಲಿ ನಾವು ಸಾಕಷ್ಟು ಮುಂಜಾಗ್ರತಾ ಕ್ರಮದ ಸೂಚನೆ ನೀಡಿದ್ದೇವೆ. ಈಗಾಗಲೇ ಸಮಾರಂಭ  ನಿಗದಿಪಡಿಸಿದವರು ಸರಳ ಆಚರಣೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ಕಲಬುರುಗಿ ಮೃತ ವ್ಯಕ್ತಿ 46 ಜನರ ಜೊತೆ ಅವನ ಸಂಪರ್ಕ ಇತ್ತು. 36 ಜನರ ಜೊತೆ ನೇರ ಸಂಪರ್ಕ  ಹೊಂದಿದ್ದ. ಆ ಎಲ್ಲಾ ವ್ಯಕ್ತಿಗಳನ್ನೂ ಪರೀಕ್ಷೆಗೆ ಒಳಪಡಿಸುತ್ತೇವೆ. ಇವರ ಬಗ್ಗೆ ಕೂಡ ನಿಗಾ ವಹಿಸಿದ್ದೇವೆ. ಸದ್ಯ ಕಲ್ಬುರ್ಗಿ ‌ಯಲ್ಲಿ ಅವರ ಕುಟುಂಬಸ್ಥರು 4 ಮಂದಿ ಸೇರಿ 25 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.

ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಹಾಗೂ ಡಾ. ಅಶ್ವತ್ಥನಾರಾಯಣ, ಆರೋಗ್ಯ ಸಚಿವ ಬಿ.  ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್, ಶಿಕ್ಷಣ ಸಚಿವರು ಎಸ್.ಸುರೇಶ್  ಕುಮಾರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಮತ್ತು ಸರ್ಕಾರದ ಇತರ  ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com