ಬಾಗಲಕೋಟೆ: ಜೋಳದ ಕಣಿಕೆಗೂ ಬಂತೂ ಬಲು ಕಿಮ್ಮತ್ತು

ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಕೆ ಸೀಸನ್ ಮುಗಿಯುತ್ತಿದ್ದಂತೆ ಕಳೆದೊಂದು ತಿಂಗಳಿನಿಂದ ಜೋಳದ ಕಣಿಕೆಯ ಸಾಗಣೆ ವ್ಯಾಪಾರ ಬಲು ಜೋರಾಗಿ ನಡೆದಿದೆ.
ಬಾಗಲಕೋಟೆ: ಜೋಳದ ಕಣಿಕೆಗೂ ಬಂತೂ ಬಲು ಕಿಮ್ಮತ್ತು
ಬಾಗಲಕೋಟೆ: ಜೋಳದ ಕಣಿಕೆಗೂ ಬಂತೂ ಬಲು ಕಿಮ್ಮತ್ತು

ಬಾಗಲಕೋಟೆ: ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಕೆ ಸೀಸನ್ ಮುಗಿಯುತ್ತಿದ್ದಂತೆ ಕಳೆದೊಂದು ತಿಂಗಳಿನಿಂದ ಜೋಳದ ಕಣಿಕೆಯ ಸಾಗಣೆ ವ್ಯಾಪಾರ ಬಲು ಜೋರಾಗಿ ನಡೆದಿದೆ.

ಜಿಲ್ಲೆಯ ಬಾಗಲಕೋಟೆ, ಹುನಗುಂದ, ಬಾದಾಮಿ,ಜಿಲ್ಲೆಯ ನೆರೆಯ ತಾಲೂಕುಗಳಾದ ಕುಷ್ಟಗಿ, ಲಿಂಗಸುಗೂರ ಭಾಗದದಿಂದ ನಿತ್ಯ ಟ್ರ್ಯಾಕ್ಟರ್, ಲಾರಿಗಳಲ್ಲಿ ಜೋಳದ ಕಣಿಕೆ ಸಾಗಣೆ ಆಗುತ್ತಿದೆ. ಪ್ರತಿ ಟ್ರ್ಯಾಕ್ಟರ್ ಕಣಿಕೆ ಕನಿಷ್ಠ 20 ರಿಂದ 25 ಸಾವಿರ ರೂ.ಗೆ ಮಾರಾಟವಾಗುತ್ತಿದೆ. 

ಇಷ್ಟೊಂದು ಬೆಲೆ ಇದ್ದರೂ ಜೋಳದ ಕಣಿಕೆ ಸಿಗುವುದು ಕಷ್ಟ ಎನ್ನುವ ಸ್ಥಿತಿ ಇದೆ. ಜೋಳ ಬೆಳೆಯುವ ಪ್ರದೇಶದಲ್ಲಿ ಕಣಿಕೆ ಹೇರಳವಾಗಿ ಸಿಕ್ಕುತ್ತಿದ್ದರೂ ಮಾರಾಟಕ್ಕೆಂದು ಸಿಗುವುದು ಬಲು ಕಡಿಮೆ. ಬಹುತೇಕ ರೈತರು ತಮ್ಮ ಮನೆಯ ಜಾನುವಾರುಗಳಿಗೆ ಬೇಕಾಗುತ್ತದೆ ಎಂದು ಬಣಿವೆಗಳನ್ನು ಕಟ್ಟಿಕೊಳ್ಳುತ್ತಾರೆ. ತಮ್ಮ ಅಗತ್ಯಕ್ಕಿಂತ ಹೆಚ್ಚಾದಲ್ಲಿ ಮಾತ್ರ ಮಾರಾಟಕ್ಕೆ ಮನಸ್ಸು ಮಾಡುತ್ತಾರೆ. 

ಒಂದೊಮ್ಮೆ ಮಾರಾಟ ಮಾಡಿದರೂ ಅದನ್ನು ತಮ್ಮ ಬಂದು, ಬಳಗದವರಿಗೆ ಕೊಡುವ ಪದ್ಧತಿ ಈಗಲೂ ಇದೆ. ಒಂದು ಕಾಲವಿತ್ತು, ಜಮೀನುಗಳನ್ನು ಹೊಂದಿದ ಪ್ರತಿ ರೈತ ಜೋಳ ಬೆಳೆಯುತ್ತಿದ್ದ, ಜೋಳದ ರಾಶಿಯ ಬಳಿಕ ಮನೆಯಲ್ಲಿನ ದನಕರುಗಳಿಗಾಗಿ ಇರಲಿ ಎಂದು ದೊಡ್ಡ ದೊಡ್ಡ ಬಣಿವೆಗಳನ್ನು ನಿರ್ಮಿಸಿ ಜತನದಿಂದ ಅವುಗಳನ್ನು ಕಾಪಾಡಿಕೊಂಡು ಬರುತ್ತಿದ್ದ. ಗ್ರಾಮೀಣರ ಪಾಲಿಗೆ ಜೋಳದ ದಂಟಿನ ಬಣಿವೆ ಬದುಕಿನ ಜೀವಾಳವೇ ಆಗಿದ್ದವು. ವರ್ಷ, ಎರಡುವರ್ಷ ಮಳೆ ಆಗದೇ ಬೆಳೆ ಬಾರದೇ ಹೋದರೂ ಜಾನುವಾರುಗಳಿಗೆ ಆಹಾರದ ಕೊರತೆ ಆಗಬಾರದು ಎಂದು ಜೋಳದ ದಂಟು ಮತ್ತು ಶೇಂಗಾ ಹೊಟ್ಟಿನ ಬಣಿವೆಗಳನ್ನು ಒಟ್ಟುತ್ತಿದ್ದರು. ಇದರಿಂದಾಗಿ ಜಾನುವಾರುಗಳಿಗೆ ಆಹಾರದ ಕೊರತೆ ಎನ್ನುವುದೇ ಇರುತ್ತಿರಲಿಲ್ಲ. ಇಂದು ಬರ ಬಿದ್ದರೆ ದಂಟಿಗೂ ಬರೆ ಎನ್ನುವಂತಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಬಾಗಲಕೋಟೆ, ವಿಜಯಪುರ, ಬೆಳಗಾವಿ ಸೇರಿದಂತೆ ಬಹುತೇಕ ಭಾಗಗಳು ನೀರಾವರಿ ವ್ಯಾಪ್ತಿಗೆ ಒಳಪಡುತ್ತಿರುವುದರಿಂದ ಒಣ ಬೇಸಾಯ ಕಡಿಮೆ ಆಗಿ ನೀರಾವರಿ ಹೆಚ್ಚಾಗುತ್ತ ಬಂದಿದೆ. ಪರಿಣಾಮವಾಗಿ ರೈತರು ಜೋಳ ಬೆಳೆಯುವುದನ್ನು ಕಡಿಮೆ ಮಾಡಿ ಕಬ್ಬನ್ನೆ ಬೆಳೆಯುತ್ತಿದ್ದಾರೆ. ಆದರೆ ಹೈನುಗಾರಿಕೆ ಮರೆತಿಲ್ಲ. ಜಮೀನುಗಳನ್ನು ನೀರಾವರಿ ವ್ಯಾಪ್ತಿಗೆ ಒಳಪಡಿಸುವ ಜತೆಗೆ ಹೈನುಗಾರಿಕೆ ಕೂಡ ಆದಾಯಕರ ಉದ್ಯೋಗ ಆಗಿರುವುದರಿಂದ ಹೈನುಗಾರಿಕೆ ಕೂಡ ಸಾಕಷ್ಟು ದೊಡ್ಡ ಪ್ರಮಾಣದಲ್ಲಿದೆ. ಆದರೆ ಕಬ್ಬು ಬೆಳೆಯುವ ಪ್ರದೇಶದಲ್ಲಿ ಕಬ್ಬಿನ ಸ್ವಾಗಿ(ರವದಿ) ಬಿಟ್ಟರೆ, ಹಸಿ ಹುಲ್ಲು ಸಿಕ್ಕುತ್ತದೆ. ಆದರೆ ಜಾನುವಾರುಳಿಗೆ ಜೋಳದ ಕಣಿಕೆ ಬಲು ಇಷ್ಟ. ಕಬ್ಬು ಬೆಳೆಯಲಾರಂಭಿಸಿದಾಗಿನಿಂದ ಕಬ್ಬು ಬೆಳೆಗಾರರು ಜಿಲ್ಲೆಯಲ್ಲಿನ ಒಣ ಬೇಸಾಯದ ಪ್ರದೇಶಗಳತ್ತ ಮುಖ ಮಾಡಿ ಅಲ್ಲಿಂದ ಜೋಳದ ಕಣಿಕೆ ಖರೀದಿಸುವ ಪದ್ಧತಿ ಆರಂಭಿಸಿದ್ದಾರೆ. 

ಪರಿಣಾಮವಾಗಿ ಕಳೆದೊಂದು ದಶಕದಲ್ಲಿ ಜೋಳದ ಕಣಿಕೆ ಸಾಗಣೆ ಬಲುದೊಡ್ಡ ಉದ್ಯೋಗವಾಗಿ ಬಿಟ್ಟಿದೆ. ಬಾಗಲಕೋಟೆ, ವಿಜಯಪುರ, ಬೆಳಗಾವಿ ಜಿಲ್ಲೆಗಳು ಸೇರಿದಂತೆ ಪಕ್ಕದ ಮಹಾರಾಷ್ಟ್ರದಲ್ಲಿನ ಗಡಿ ಭಾಗಗಳಲ್ಲಿ ಕಬ್ಬನ್ನು ಬೆಳೆಯುತ್ತಿರುವುದರಿಂದ ಇಲ್ಲಿನ ಬಾಗಲಕೋಟೆ, ಹುನಗುಂದ ಮತ್ತು ಬಾದಾಮಿ ತಾಲೂಕಿನಲ್ಲಿ ಸಿಗುವ ಜೋಳದ ಕಣಿಕೆಗೆ ಇನ್ನಿಲ್ಲದ ಬೇಡಿಕೆ ಬಂದು ಬಿಟ್ಟಿದೆ.

ಜಿಲ್ಲೆಯ ರೈತರು ಕಣಿಕೆ ಖರೀದಿಸುವ ಜತೆಗೆ ನೆರೆಯ ಮಹಾರಾಷ್ಟçದ ಕಬ್ಬು ಬೆಳೆಗಾರರು ಇಲ್ಲಿನ ಕಣಿಕೆ ಖರೀದಿಸುತ್ತಾರೆ. ಏತನ್ಮಧ್ಯೆ ಜಿಲ್ಲೆಯ ಮುಧೋಳ ತಾಲೂಕಿನ ಗಡಿ ಭಾಗ ಮತ್ತು ಗೋಕಾಕ ತಾಲೂಕಿನ ಗಡಿ ಭಾಗದಲ್ಲಿ ಬರುವ ಯಾದವಾಡ ಸುತ್ತ ಜೋಳದ ಕಣಿಕೆಯನ್ನು ಖರೀದಿಸಿ, ಅಲ್ಲಿ ಕಣಿಕೆಯನ್ನು ಪುಡಿ(ಪೌಡರ್) ಮಾಡಿ ಮಾಹಾರಾಷ್ಟ್ರಕ್ಕೆ ಕಳುಹಿಸುವ ಬಹುದ್ದೊಡ್ಡ ವ್ಯಾಪಾರ ನಡೆಯುತ್ತಿದೆ.

ವರ್ಷದಿಂದ ವರ್ಷಕ್ಕೆ ಜೋಳದ ಕಣಿಕೆಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಜೋಳದ ಬೆಳೆಗಾರರು ಕಣಿಕೆ ಮಾರಾಟಕ್ಕೆ ಮನಸ್ಸು ಮಾಡುತ್ತಿದ್ದಾರೆ. ಬಣಿವೆಗಳನ್ನು ಕಟ್ಟುವುದನ್ನು ಕಡಿಮೆ ಮಾಡಿದ್ದಾರೆ. ತಮ್ಮ ಜಾನುವಾರುಗಳಿಗೆ ಕಣಿಕೆ ಬೇಕೋ ಬೇಡವೋ ಎನ್ನುವುದನ್ನು ಮರೆತು ಕಣಿಕೆ ಮಾರುತ್ತಿದ್ದಾರೆ. ಕಣಿಕೆ ಮಾರಾಟಗಾರರು ರೈತರ ಮನೆ ಬಾಗಿಲಿಗೆ ಹೋಗಿ ಕಣಿಕೆ ಖರೀದಿಸುತ್ತಿದ್ದಾರೆ. ಒಂದೊಮ್ಮೆ ಬರ ಸ್ಥಿತಿ ಉಂಟಾದಲ್ಲಿ ಜೋಳ ಬೆಳೆಯುವ ಪ್ರದೇಶದ ರೈತರೂ ಕಣಿಕೆ ಇಲ್ಲದೆ ಪರದಾಡುವ ಸ್ಥಿತಿ ಎನ್ನುವಷ್ಟರ ಮಟ್ಟಿಗೆ ಅದನ್ನು ಮಾರಾಟ ಮಾಡಲಾಗುತ್ತಿದೆ.

- ವಿಠ್ಠಲ ಆರ್. ಬಲಕುಂದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com