ಬಳ್ಳಾರಿ: ಪ್ರತ್ಯೇಕ ಪ್ರಕರಣ-ಜನತಾ ಕರ್ಫ್ಯೂ ಕಡೆಗಣಿಸಿ ಕೆರೆಯಲ್ಲಿ ಈಜಲು ಹೋದ ಇಬ್ಬರು ಯುವಕರು ನೀರುಪಾಲು
ಪ್ರತ್ಯೇಕ ಪ್ರಕರಣದಲ್ಲಿ ಭಾನುವಾರದ ಜನತಾ ಕರ್ಫ್ಯೂವನ್ನು ಕಡೆಗಣಿಸಿ ಕೆರೆಯಲ್ಲಿ ಈಜಲು ಹೋದ ಇಬ್ಬರು ಯುವಕರು ನೀರುಪಾಲಾಗಿರುವ ಘಟನೆ ಬಳ್ಲಾರಿಯ ಸಿರಗುಪ್ಪ ಹಾಗೂ ಕೂಡ್ಲಗಿ ತಾಲೂಕಿನಲ್ಲಿ ನಡೆದಿದೆ.
Published: 23rd March 2020 01:31 PM | Last Updated: 23rd March 2020 01:31 PM | A+A A-

ಸಂಗ್ರಹ ಚಿತ್ರ
ಬಳ್ಳಾರಿ: ಪ್ರತ್ಯೇಕ ಪ್ರಕರಣದಲ್ಲಿ ಭಾನುವಾರದ ಜನತಾ ಕರ್ಫ್ಯೂವನ್ನು ಕಡೆಗಣಿಸಿ ಕೆರೆಯಲ್ಲಿ ಈಜಲು ಹೋದ ಇಬ್ಬರು ಯುವಕರು ನೀರುಪಾಲಾಗಿರುವ ಘಟನೆ ಬಳ್ಲಾರಿಯ ಸಿರಗುಪ್ಪ ಹಾಗೂ ಕೂಡ್ಲಗಿ ತಾಲೂಕಿನಲ್ಲಿ ನಡೆದಿದೆ.
ಬಳ್ಳಾರಿಯ ಸಿರಗುಪ್ಪ ತಾಲೂಕಿನ ಬೈರಾಪುರ ಗ್ರಾಮದ ವಿನೋದ್ (24) ಮೃತ ದುರ್ದೈವಿ.
ಜನತಾ ಕರ್ಫ್ಯೂ ಹಾಗೂ ಭಾನುವಾರದಂದು ಜನರು ಮನೆಯಲ್ಲೇ ಇರಬೇಕೆಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದನ್ನು ಧಿಕ್ಕರಿಸಿ ಯುವಕ ಕೆರೆಯಲ್ಲಿ ಸ್ನಾನಕ್ಕೆ, ಈಜಾಡಲು ಹೋಗಿದ್ದನು.
ಈಜು ಬಾರದ ಯುವಕ ನೀರಲ್ಲಿ ಮುಳುಗಿದ್ದು ಯುವಕನ ಮೃತದೇಹ , ದರೂರು ಗ್ರಾಮದ ಕಾಲುವೆಯಲ್ಲಿ ಮೃತ ದೇಹ ಪತ್ತೆಯಾಗಿದೆ.ಘಟನೆ ಸಂಬಂಧ ಸಿರಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೂಡ್ಲಗಿ: ಇನ್ನೊಂದೆಡೆ ಜನತಾ ಕರ್ಫ್ಯೂ ಉಲ್ಲಂಘಿಸಿ ಕೂಡ್ಲಗಿ ತಾಲೂಕು ರಾಮದುರ್ಗದಲ್ಲಿ ಸಂಜೆ ವೇಳೆ ಕೆರೆಯಲ್ಲಿ ಈಜಲು ಹೋದ ಯುವಕ ಚೋರನೂರು ಗ್ರಾಮದ ಚೇತು (22) ಸಾವನ್ನಪ್ಪಿದ್ದಾರೆ.
ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಭಾನುವಾರ ಜನತಾ ಕರ್ಫ್ಯೂ ಕಾರಣ ರಜೆ ಇದ್ದು ಕೆರೆಯಲ್ಲಿ ಸ್ನೇಹಿತರೊಡನೆ ಈಜಲು ತೆರಳಿದ್ದಾನೆ. ಮೂವರಲ್ಲಿ ಇಬ್ಬರು ಮೇಲೆ ಬಂದಿದ್ದು ಚೇತು ನೀರುಪಾಲಾಗಿದ್ದಾನೆ.
ಘಟನೆ ಸಂಬಂಧ ಗುಡೇಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.