ಮುಖ್ಯಮಂತ್ರಿಗಳನ್ನು ಭೇಟಿಯಾದ ಸರ್ವಪಕ್ಷಗಳ ನಿಯೋಗ: ಸರ್ಕಾರದ ಕ್ರಮಗಳನ್ನು ವಿವರಿಸಿದ ಯಡಿಯೂರಪ್ಪ

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ವಿರೋಧ ಪಕ್ಷದ ಮುಖಂಡರೊಂದಿಗೆ ಸಭೆ ನಡೆಸಿ ಕೋವಿಡ್ 19 ಪರಿಸ್ಥಿತಿ ಕುರಿತು ಚರ್ಚಿಸಿದರು.
ಮುಖ್ಯಮಂತ್ರಿಗಳನ್ನು ಭೇಟಿಯಾದ ಸರ್ವಪಕ್ಷಗಳ ನಿಯೋಗ
ಮುಖ್ಯಮಂತ್ರಿಗಳನ್ನು ಭೇಟಿಯಾದ ಸರ್ವಪಕ್ಷಗಳ ನಿಯೋಗ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ವಿರೋಧ ಪಕ್ಷದ ಮುಖಂಡರೊಂದಿಗೆ ಸಭೆ ನಡೆಸಿ ಕೋವಿಡ್ 19 ಪರಿಸ್ಥಿತಿ ಕುರಿತು ಚರ್ಚಿಸಿದರು.

ಈ ಸಂದರ್ಭದಲ್ಲಿ ವಿರೋಧ ಪಕ್ಷಗಳ ಮುಖಂಡರು ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸೋಂಕು ನಿಯಂತ್ರಣಕ್ಕೆ ಸರ್ಕಾರದ ಜೊತೆ ಇರುವುದಾಗಿ ಭರವಸೆ ನೀಡಿದರು. ಜೊತೆಗೆ ವಿವಿಧ ವಿಷಯಗಳ ಕುರಿತು ಮುಖ್ಯಮಂತ್ರಿಗಳ ಗಮನ ಸೆಳೆದರು. ವಿರೋಧ ಪಕ್ಷಗಳು ಸಿದ್ಧಪಡಿಸಿದ ಬೇಡಿಕೆಗಳ ಪಟ್ಟಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು. ಈ ಸಂದರ್ಭದಲ್ಲಿ ವಿರೋಧ ಪಕ್ಷಗಳಿಗೆ ಮುಖ್ಯಮಂತ್ರಿಯವರು ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ವಿವರ ನೀಡಿದರು.

ಇತರ ರಾಜ್ಯಗಳಿಗೆ ಹೋಲಿಸಿದರೆ, ರಾಜ್ಯದಲ್ಲಿ ಕೋವಿಡ್ 19 ಪರಿಸ್ಥಿತಿ ನಿಯಂತ್ರಣದಲ್ಲಿದೆ. ರಾಜ್ಯದಲ್ಲಿ ಎಲ್ಲ ರೀತಿಯ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇದಲ್ಲದೆ, ಮೇ 3 ರ ನಂತರ ಕೇಂದ್ರ ಸರ್ಕಾರದ ಮಾರ್ಗಸೂಚಿಗಳಂತೆ ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ರೈತ ಮುಖಂಡರು, ಕೈಗಾರಿಕೋದ್ಯಮಿಗಳು, ಬಿಲ್ಡರುಗಳು, ಹೋಟೆಲ್ ಮಾಲೀಕರು, ಹೀಗೆ ವಿವಿಧ ವಲಯದ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ, ಅವರ ಸಲಹೆಗಳನ್ನು ಪಡೆದು ಕ್ರಮ ವಹಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ವಿವರಿಸಿದರು. ಕೃಷಿ ಚಟುವಟಿಕೆಗಳಿಗೆ ಲಾಕ್ ಡೌನ್ ನಿಂದ ವಿನಾಯಿತಿ ನೀಡಲಾಗಿತ್ತು. ಆಹಾರ ಮತ್ತು ಇತರ ಅಗತ್ಯ ವಸ್ತುಗಳ ಸರಬರಾಜು ಸರಪಳಿ ನಿರ್ವಹಣೆಗಾಗಿ ಟಾಸ್ಕ್ ಫೋರ್ಸ್ ರಚನೆ, ಅಗ್ರಿ ವಾರ್ ರೂಂ ಸ್ಥಾಪನೆ ಮೂಲಕ ಕೃಷಿ ಚಟುವಟಿಕೆಗಳು ಅವ್ಯಾಹತವಾಗಿ ನಡೆಯುವಂತೆ ಎಚ್ಚರ ವಹಿಸಲಾಗಿತ್ತು. ಕೃಷಿ ಸಚಿವರು ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿ ವಸ್ತು ಸ್ಥಿತಿಯನ್ನು ಅರಿತಿದ್ದಾರೆ. ಬೇಸಿಗೆ ಬೆಳೆ ಕಟಾವಿಗೆ ಅಗತ್ಯ ಯಂತ್ರೋಪಕರಣಗಳನ್ನು ಹೊರ ರಾಜ್ಯಗಳಿಂದ ತರಿಸಿ ಅನುಕೂಲ ಕಲ್ಪಿಸಲಾಗಿದೆ. ಮುಂಗಾರು ಹಂಗಾಮಿಗೆ ಬಿತ್ತನೆ ಬೀಜ, ರಸ ಗೊಬ್ಬರ ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿರುವುದನ್ನು ಖಾತರಿ ಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಲಾಕ್ ಡೌನ್ ನಿಂದಾಗಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾದವರಿಗಾಗಿ 1610 ಕೋಟಿ ರೂ. ಗಳ ವಿಶೇಷ ಪ್ಯಾಕೇಜ್ ಘೋಷಿಸಲಾಗಿದೆ. ಹೂ ಬೆಳೆಗಾರರು, ಹಣ್ಣು ಮತ್ತು ತರಕಾರಿ ಬೆಳೆಗಾರರು, ನೇಕಾರರು, ಅಗಸರು, ಕ್ಷೌರಿಕರು, ಕಟ್ಟಡ ಕಾರ್ಮಿಕರು, ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ನೆರವು ಘೋಷಿಸಲಾಗಿದೆ. ಇದೇ ರೀತಿ ಸಂಕಷ್ಟಕ್ಕೆ ಒಳಗಾಗಿರುವ ವಿವಿಧ ಸಮುದಾಯಗಳ ಮಾಹಿತಿ ನನಗಿದೆ. ಇವರಿಗೂ ನೆರವು ನೀಡುವ ಕುರಿತು ಮುಂದಿನ ದಿನಗಳಲ್ಲಿ ಪರಿಶೀಲಿಸಲಾಗುವುದು. ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಮೂಲಕ ಕಾರ್ಮಿಕರಿಗೆ ಉದ್ಯೋಗ ದೊರಕಿಸುವುದು ನಮ್ಮ ಆದ್ಯತೆಯ ವಿಷಯವಾಗಿದೆ. ಸರ್ಕಾರದ ಇತಿಮಿತಿಯಲ್ಲಿ ಜನರ ಸಂಕಷ್ಟಕ್ಕೆ ಅತ್ಯಂತ ಮಾನವೀಯತೆಯಿಂದ ಸ್ಪಂದಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದರು. ಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್, ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿ, ಮಾಜಿ ಸಚಿವ ಎಚ್. ಡಿ.ರೇವಣ್ಣ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಡಾ: ಸಿ.ಎನ್.ಅಶ್ವತ್ಥ್ ನಾರಾಯಣ್, ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com