ಬಾಗಲಕೋಟೆ ಜಿಲ್ಲಾ ಸಹಕಾರಿ ಬ್ಯಾಂಕ್‌ನಿಂದ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ವಿತರಣೆ

ಜಿಲ್ಲೆಯ ೬೬೭ ಆಶಾ ಕಾರ್ಯಕರ್ತೆಯರಿಗೆ ಇಲ್ಲಿನ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ಪ್ರೋತ್ಸಾಹ ಧನದ ಚೆಕ್ ವಿತರಿಸಲಾಯಿತು.
ಪ್ರೋತ್ಸಾಹ ಧನ ಚೆಕ್ ವಿತರಣೆ ಸಮಾರಂಭದಲ್ಲಿ ಆಶಾ ಕಾರ್ಯಕರ್ತೆಯರು
ಪ್ರೋತ್ಸಾಹ ಧನ ಚೆಕ್ ವಿತರಣೆ ಸಮಾರಂಭದಲ್ಲಿ ಆಶಾ ಕಾರ್ಯಕರ್ತೆಯರು

ಬಾಗಲಕೋಟೆ: ಜಿಲ್ಲೆಯ ೬೬೭ ಆಶಾ ಕಾರ್ಯಕರ್ತೆಯರಿಗೆ ಇಲ್ಲಿನ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ಪ್ರೋತ್ಸಾಹ ಧನದ ಚೆಕ್ ವಿತರಿಸಲಾಯಿತು.

ನವನಗರದ ಬಿಡಿಸಿಸಿ ಬ್ಯಾಂಕ್ ಮುಖ್ಯ ಕಚೇರಿಯ ಸಭಾಭವನದಲ್ಲಿ ಬುಧವಾರ ಸಾಂಕೇತಿಕವಾಗಿ ೨೨ ಆಶಾ ಕಾರ್ಯಕರ್ತೆಯರಿಗೆ ೩ ಸಾವಿರ ರೂ. ಗಳ ಪ್ರೋತ್ಸಾಹಧನ ಚೆಕ್ ವಿತರಿಸಲಾಯಿತು.

ಚೆಕ್ ವಿತರಿಸಿದ ಮೇಲ್ಮನೆ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ, ಬಿಡಿಸಿಸಿ ಬ್ಯಾಂಕ್ ಪ್ರಾರಂಭದಲ್ಲಿಯೇ ಕೋವಿಡ್-೧೯ ಪರಿಹಾರ ನಿಧಿಗೆ ೫೦ ಲಕ್ಷ ರೂ. ಗಳನ್ನು ನೀಡಿದೆ. ಬ್ಯಾಂಕಿನಿಂದ ಕೊಡಮಾಡಿದ ಈ ೫೦ ಲಕ್ಷ ರೂ. ಗಳಲ್ಲಿ ಬ್ಯಾಂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ಸಹ ಪರಿಹಾರಧನಕ್ಕಾಗಿ ತಮ್ಮ ಒಂದು ದಿನದ ವೇತನದಿಂದ ಒಟ್ಟು ೧೦ ಲಕ್ಷ ರೂ.ಗಳನ್ನು ಸಂಗ್ರಹಿಸಿ ನೀಡಿರುವುದನ್ನು ಸ್ಮರಿಸಿದರು.

ಕೋವಿಡ್-೧೯ ನಿಯಂತ್ರಿಸುವ ಕಾರ್ಯಕ್ಕೆ ತಮ್ಮ ಜೀವನವನ್ನು ಲೆಕ್ಕಿಸದೇ ಶ್ರಮಿಸುತ್ತಿರುವ ಎಲ್ಲ ಆಶಾ ಕಾರ್ಯಕರ್ತೆಯರಿಗೆ ೩ ಸಾವಿರ ರೂ.ಗಳ ಪ್ರೋತ್ಸಾಹಧನ ನೀಡುವುದಾಗಿ ಘೋಷಿಸಿದೆ. ಸಹಕಾರ ಇಲಾಖೆಯ ಮೂಲಕ ಭರಿಸಲು ನಿರ್ಧರಿಸಿದ ಹಿನ್ನೆಲೆಯಲ್ಲಿ ಬಾಗಲಕೋಟೆ ಡಿಸಿಸಿ ಬ್ಯಾಂಕ್ ೨೦ ಲಕ್ಷ ರೂ.ಗಳನ್ನು ನೀಡಲು ಮುಂದಾಗಿದೆ. 
ಉಳಿದ ಹಣವನ್ನು ಬೇರೆ ಬೇರೆ ಸಹಕಾರಿ ಸಂಘಗಳ ಮೂಲಕ ಭರಿಸುವ ಕಾರ್ಯವನ್ನು ಸಹಕಾರ ಇಲಾಖೆ ಮಾಡುತ್ತಿದೆ. ಕೋವಿಡ್ ನಿಯಂತ್ರಣಕ್ಕೆ ಹಗಲಿರುಳು ಶ್ರಮಿಸುತ್ತಿರುವವರನ್ನು ಅವರು ಇದೇ ವೇಳೆ ಅಭಿನಂದಿಸಿದರು.

ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಮಾತನಾಡಿ, ಆಶಾ ಕಾರ್ಯಕರ್ತೆಯರಿಗೆ ನೀಡಿರುವ ಪ್ರೋತ್ಸಾಹಧನ ಕಡಿಮೆ ಎಂದು ಭಾವಿಸದೇ ನಿಮ್ಮ ಒಳ್ಳೆಯ ಕಾರ್ಯಕ್ಕೆ ಗೌರವ ಸೂಚಿಸುವ ನಿಟ್ಟಿನಲ್ಲಿ ಈ ಪ್ರೋತ್ಸಾಹಧನ ನೀಡಲಾಗುತ್ತಿದೆ. 
ಆಶಾ ಕಾರ್ಯಕರ್ತೆಯರು ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದು, ಮುಂದೆಯೂ ಈ ಕಾರ್ಯ ಮುಂದುವರಿಯಲಿ ಎಂದರು. 

ಬಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಅಜಕುಮಾರ ಸರನಾಯಕ ಮಾತನಾಡಿ, ರಾಜ್ಯ ಸರಕಾರ ತೀರ್ಮಾನಿಸಿದಂತೆ ಜಿಲ್ಲೆಯಲ್ಲಿರುವ ಒಟ್ಟು ೧೪೦೯ ಆಶಾ ಕಾರ್ಯಕರ್ತೆಯರ ಪೈಕಿ ೬೬೭ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನವನ್ನು ಬ್ಯಾಂಕಿನ ವತಿಯಿಂದ ನೀಡಲು ತೀರ್ಮಾನಿಸಿದ್ದು, ಸಾಂಕೇತಿಕವಾಗಿ ಕೆಲವರಿಗೆ ಚೆಕ್ ನೀಡಲಾಗಿದೆ. ಇನ್ನು ಎರಡು ದಿನಗಳಲ್ಲಿ ಅವರವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗುವುದು ಎಂದು ತಿಳಿಸಿದರು. 

ಬಿಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ಎಸ್.ಎಲ್.ಉದಪುಡಿ, ನಿರ್ದೇಶಕರಾದ ಆರ್.ಎಸ್. ತಳೇವಾಡ, ಕುಮಾರಗೌಡ ಜನಾಲಿ, ಬ್ಯಾಂಕಿನ ಸಿಇಓ ಎಸ್.ಎಂ. ದೇಸಾಯಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್. ದೇಸಾಯಿ, ಬಾಗಲಕೋಟೆ ಎ.ಆರ್.ಸಿ.ಎಸ್‌ನ ಶ್ರೀಮತಿ ಕಾಂಬಳೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

-ವಿಠ್ಠಲ ಆರ್. ಬಲಕುಂದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com