ಖ್ಯಾತ ಯಕ್ಷ ಕಲಾವಿದ ಮಲ್ಪೆ ವಾಸುದೇವ ಸಾಮಗರು ನಿಧನ

ಖ್ಯಾತ ಯಕ್ಷಗಾನ ಕಲಾವಿದ ಮಲ್ಪೆ ವಾಸುದೇವ ಸಾಮಗರು ನಿಧನರಾಗಿದ್ದಾರೆ ಎಂದು ತಿಳಿದುಬಂದಿದ್ದು, ಅವರಿಗೆ 71 ವರ್ಷ ವಯಸ್ಸಾಗಿತ್ತು.
ಮಲ್ಪೆ ವಾಸುದೇವ ಸಾಮಗರು
ಮಲ್ಪೆ ವಾಸುದೇವ ಸಾಮಗರು

ಉಡುಪಿ: ಖ್ಯಾತ ಯಕ್ಷಗಾನ ಕಲಾವಿದ ಮಲ್ಪೆ ವಾಸುದೇವ ಸಾಮಗರು ನಿಧನರಾಗಿದ್ದಾರೆ ಎಂದು ತಿಳಿದುಬಂದಿದ್ದು, ಅವರಿಗೆ 71 ವರ್ಷ ವಯಸ್ಸಾಗಿತ್ತು.

ಯಕ್ಷಗಾನ ತಾಳಮದ್ದಳೆಯ ಅರ್ಥದಾರಿ ಮಲ್ಪೆ ವಾಸುದೇವ ಸಾಮಗರು (71 ವರ್ಷ) ಶನಿವಾರ ನಿಧನರಾಗಿದ್ದಾರೆ. ಈ ಬಗ್ಗೆ ಪ್ರದೀಪ್ ಸಾಮಗ ಅವರು ಫೇಸ್ ಬುಕ್ ನಲ್ಲಿ ಮಾಹಿತಿ ನೀಡಿದ್ದು, ಸತತ ಪ್ರಯತ್ನಗಳ ನಡುವೆಯೇ ಅಪ್ಪಯ್ಯನನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಪೋಸ್ಟ್ ಮಾಡಿದ್ದಾರೆ.

ಯಕ್ಷಗಾನದ ಅಪೂರ್ವ ಕಲಾವಿದರಾಗಿದ್ದ ಮಲ್ಪೆ ರಾಮದಾಸ ಸಾಮಗರ ಪುತ್ರರಾದ ವಾಸುದೇವ ಸಾಮಗ ಕೋಟೇಶ್ವರ ನಿವಾಸಿಯಾಗಿದ್ದು ಧರ್ಮಸ್ಥಳ, ಕದ್ರಿ, ಕರ್ನಾಟಕ ಮೇಳ(ಸುರತ್ಕಲ್), ಸಾಲಿಗ್ರಾಮ ಮೇಳದ ಪ್ರಮುಖ ವೇಷಧಾರಿಯಾಗಿ ಜನ ಮನ ಸೆಳೆದಿದ್ದರು. ಸಂಯಮ ಸಂಸ್ಥೆ ಮೂಲಕ ತಾಳಮದ್ದಳೆಗೆ  ಹೊಸ ಆಯಾಮ, ಹೊಸ ಶಿಸ್ತು ನೀಡಿದ್ದ ಇವರು ತಾಳಮದ್ದಲೆಯಲ್ಲಿ ಇದ್ದಾರೆಂದರೆ ಜನರು ಹುಡುಕಿಕೊಂಡು ಕಾರ್ಯಕ್ರಮ ನೋಡಲು ಬರುತ್ತಿದ್ದರು.

ಮಲ್ಪೆ ವಾಸುದೇವ ಸಾಮಗರು ಪತ್ನಿ ಹಾಗೂ ಒಬ್ಬರು ಪುತ್ರರನ್ನು ಅಗಲಿದ್ದಾರೆ. ಮೂಲಗಳ ಪ್ರಕಾರ ಕೋವಿಡ್‌ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ ಸಾಮಗರು ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಬೆಳಗಿನ ಜಾವ 3 ಗಂಟೆಗೆ ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮಲ್ಪೆ ವಾಸುದೇವ ಸಾಮಗರು ಯಕ್ಷ ದಿಗ್ಗಜರೆರೆನಿಸಿಕೊಂಡಿದ್ದ ಪ್ರಸಿದ್ಧ ಹರಿದಾಸರಾದ ಮಲ್ಪೆ ರಾಮದಾಸ ಸಾಮಗರ ಪುತ್ರರು. ಮಲ್ಪೆ ಶಂಕರ ನಾರಾಯಣ ಸಾಮಗರು ಇವರ ದೊಡ್ಡಪ್ಪ ಹಾಗೂ ಗುರುಗಳು. ತೆಂಕು ಹಾಗೂ ಬಡಗು ಎರಡೂ ಯಕ್ಷಗಾನ ಪ್ರಕಾರಗಳಲ್ಲಿ ಹಿರಿಯ ಕಲಾವಿದರಾಗಿದ್ದ ವಾಸುದೇವ ಸಾಮಗರು  80 ಪ್ರಸಂಗಗಳ ಪುಸ್ತಕ ರಚಿಸಿದ್ದಾರೆ. ಅವರ ನಿಧನದಿಂದ ಯಕ್ಷಗಾನ ವಿದ್ವತ್ ಪರಂಪರೆಯ ಅಮೂಲ್ಯ ಕೊಂಡಿ ಕಳಚಿದಂತಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com