ವಿಜಯಪುರ: ಕಾಲೇಜು ಆರಂಭವಾದ ಬೆನ್ನಲ್ಲೇ ವಿದ್ಯಾರ್ಥಿಗಳಿಗೆ, ಪ್ರಾಧ್ಯಾಪಕರಿಗೆ ಕೋವಿಡ್ ಪಾಸಿಟಿವ್!

ಮಾರಕ ಕೊರೋನಾ ಸಾಂಕ್ರಾಮಿಕದ ನಡುವೆಯೇ ಕಾಲೇಜುಗಳ ಪುನಾರಂಭಿಸಿದ ಕೆಲವೇ ವಾರಗಳ ಅಂತರದಲ್ಲಿ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರಿಗೂ ಸೋಂಕು ಒಕ್ಕರಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ವಿಜಯಪುರ: ಮಾರಕ ಕೊರೋನಾ ಸಾಂಕ್ರಾಮಿಕದ ನಡುವೆಯೇ ಕಾಲೇಜುಗಳ ಪುನಾರಂಭಿಸಿದ ಕೆಲವೇ ವಾರಗಳ ಅಂತರದಲ್ಲಿ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರಿಗೂ ಸೋಂಕು ಒಕ್ಕರಿಸಿದೆ.

ಹೌದು.. ರಾಜ್ಯದಲ್ಲಿ ಶಾಲಾ ಕಾಲೇಜುಗಳ ಪುನಾರಂಭ ಮಾಡಬೇಕೋ, ಬೇಡವೋ ಎಂಬ ಚರ್ಚೆಗಳು ವ್ಯಾಪಕವಾಗಿ ನಡೆಯುತ್ತಿವೆ. ಇದರ ಬೆನ್ನಲ್ಲೇ, ಕಳೆದ ಮಂಗಳವಾರದಿಂದ ಪದವಿ, ಸ್ನಾತಕೋತ್ತರ ಪದವಿ ಹಾಗೂ ಡಿಪ್ಲೋಮಾ ಕಾಲೇಜ್‌ಗಳನ್ನು ಪುನಾರಂಭ ಮಾಡಲಾಗಿತ್ತು. ಕಳೆದ ಮಾರ್ಚ್‌ನಿಂದ ಮುಚ್ಚಿದ್ದ  ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳ ಪುನರಾರಂಭಕ್ಕೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಒಪ್ಪಿಗೆ ಸೂಚಿಸಿತ್ತು. ಅಲ್ಲದೆ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಕಾಲೇಜುಗಳಿಗೆ ಸೂಚನೆ ಕೂಡ ನೀಡಿತ್ತು. ಅಲ್ಲದೆ ವಿದ್ಯಾರ್ಥಿಗಳು ಕಾಲೇಜು ಪ್ರವೇಶಕ್ಕೂ ಮುನ್ನ ಕೋವಿಡ್  ಪರೀಕ್ಷೆ ಕಡ್ಡಾಯ ಮಾಡಿತ್ತು.

ಇಷ್ಟೆಲ್ಲಾ ಮುಂಜಾಗ್ರತಾ ಕ್ರಮಗಳ ಹೊರತಾಗಿಯೂ ಶಾಕಿಂಗ್ ಸುದ್ದಿ ಹೊರಬಿದ್ದಿದ್ದು, ರಾಜ್ಯದಲ್ಲಿ ಕಾಲೇಜುಗಳು ಆರಂಭವಾದ ಬಳಿಕ ವಿಜಯಪುರ ಜಿಲ್ಲೆಯೊಂದರಲ್ಲಿಯೇ 13 ಪ್ರಾಧ್ಯಾಪಕರು ಮತ್ತು 12 ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಬಗ್ಗೆ ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್  ಅವರು ಮಾಹಿತಿ ನೀಡಿದ್ದು, ವಿದ್ಯಾರ್ಥಿಗಳು ಕಾಲೇಜಿಗೆ ಪ್ರವೇಶಿಸುವ ಮುನ್ನ ಕೋವಿಡ್ ನೆಗೆಟಿವ್ ವರದಿ ನೀಡಬೇಕಿತ್ತು ಹಾಗೂ ಪೋಷಕರಿಂದ ಮುಚ್ಚಳಿಕೆ ಪ್ರಮಾಣ ಪತ್ರವನ್ನೂ ಕಡ್ಡಾಯವಾಗಿ ನೀಡಬೇಕಿತ್ತು. ಮಂಗಳವಾರದಿಂದ ಇಲ್ಲಿಯವರೆಗೆ ವಿಜಯಪುರ ಜಿಲ್ಲೆಯಾದ್ಯಂತ 3,541 ವಿದ್ಯಾರ್ಥಿಗಳು ಕೊರೊನಾ  ಸೋಂಕು ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ವಿಜಯಪುರ ಜಿಲ್ಲೆಯ ನಾನಾ ಕಾಲೇಜ್‌ಗಳ 373 ಉಪನ್ಯಾಸಕರೂ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಈ ಪೈಕಿ 12 ವಿದ್ಯಾರ್ಥಿಗಳಿಗೆ ಮತ್ತು 13 ಪ್ರಾಧ್ಯಾಪಕರಿಗೆ ಸೋಂಕು ದೃಢಪಟ್ಟಿದೆ. ಇನ್ನೂ 1 ಸಾವಿರ ಮಂದಿಯ ಕೋವಿಡ್ ಪರೀಕ್ಷಾ ವರದಿಗಾಗಿ ಕಾಯಲಾಗುತ್ತಿದೆ  ಎಂದು ತಿಳಿಸಿದ್ದಾರೆ. 

ಇನ್ನು ಸೋಂಕಿತ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಯಾವ ಕಾಲೇಜಿಗೆ ಸೇರಿದವರು ಎಂಬ ಮಾಹಿತಿಯನ್ನು ಜಿಲ್ಲಾಧಿಕಾರಿಗಳು ನೀಡಿಲ್ಲ. 

ಈ ಬಗ್ಗೆ ಮಾತನಾಡಿರುವ ಕೆಎಸ್‌ಎಡಬ್ಲ್ಯುಯುನ ಕಾರ್ಯಕಾರಿ ಉಪಕುಲಪತಿ ಪ್ರೊಫೆಸರ್ ಓಂಕಾರ್ ಕಾಕಡೆ ಅವರು, ಎಷ್ಟು ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಸೋಂಕಿಗೆ ತುತ್ತಾಗಿದ್ದಾರೆ ಎಂಬ ವಿವರಗಳನ್ನು ನಾವು ಇನ್ನೂ ಪಡೆಯಬೇಕಾಗಿಲ್ಲ. ಆದರೆ ನಾವು ಪ್ರತಿದಿನ ತರಗತಿ ಕೊಠಡಿಗಳನ್ನು ಸ್ಯಾನಿಟೈಜ್  ಮಾಡುತ್ತಿದ್ದೇವೆ. ಹೀಗಾಗಿ ವಿದ್ಯಾರ್ಥಿಗಳಿಗೆ ಹಿಂಜರಿಕೆ ಬೇಡ ಎಂದು ಹೇಳಿದ್ದಾರೆ.

ಇನ್ನು ಈಗಲೂ ಸಾಕಷ್ಟು ಕಾಲೇಜುಗಳು ವಿದ್ಯಾರ್ಥಿಗಳ ಕೊರತೆಯಿಂದಾಗಿ ಆನ್ ಲೈನ್ ಕ್ಲಾಸ್ ಗಳ ಮೊರೆ ಹೋಗುತ್ತಿವೆ. ಈ ಬಗ್ಗೆ ಮಾತನಾಡಿರುವ ಖಾಸಗಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ಅಶೋಕ್ ಪೂಜಾರಿ, ಕಾಲೇಜು ಪುನಃ ಪ್ರಾರಂಭವಾದಾಗಿನಿಂದ ಕೇವಲ ಐದು ವಿದ್ಯಾರ್ಥಿಗಳು ಬಂದಿದ್ದಾರೆ.  ಅನೇಕರು ತಮ್ಮ ಪರೀಕ್ಷಾ ವರದಿಗಳನ್ನು ಇನ್ನೂ ಪಡೆದೇ ಇಲ್ಲ. ಆದ್ದರಿಂದ ನಾವು ಆನ್‌ಲೈನ್ ತರಗತಿಗಳನ್ನು ಮುಂದುವರಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com