ಬಿಬಿಎಂಪಿ ವ್ಯಾಪ್ತಿಗೆ ಮತ್ತಷ್ಟು ಗ್ರಾಮಗಳ ಸೇರ್ಪಡೆ, ಚುನಾವಣೆ ಮುಂದೂಡಲು ತಂತ್ರ

ಬಿಬಿಎಂಪಿ ವಾರ್ಡಗಳ ಮರು ವಿಂಗಡನೆ ಮಾಡಿ ಚುನಾವಣೆ ಮುಂದೂಡುವ ಹುನ್ನಾರಿನಲ್ಲಿರುವ ಸರ್ಕಾರಕ್ಕೆ ಒಂದೆಡೆ ಹೈಕೋರ್ಟ್ ತೀರ್ಪು ಚುನಾವಣೆ ನಡೆಸುವ ಅನಿವಾರ್ಯತೆ ಸೃಷ್ಟಿಸಿದೆ.
ಬಿಬಿಎಂಪಿ ಕಚೇರಿ
ಬಿಬಿಎಂಪಿ ಕಚೇರಿ

ಬೆಂಗಳೂರು: ಬಿಬಿಎಂಪಿ ವಾರ್ಡಗಳ ಮರು ವಿಂಗಡನೆ ಮಾಡಿ ಚುನಾವಣೆ ಮುಂದೂಡುವ ಹುನ್ನಾರಿನಲ್ಲಿರುವ ಸರ್ಕಾರಕ್ಕೆ ಒಂದೆಡೆ ಹೈಕೋರ್ಟ್ ತೀರ್ಪು ಚುನಾವಣೆ ನಡೆಸುವ ಅನಿವಾರ್ಯತೆ ಸೃಷ್ಟಿಸಿದೆ. ಹೀಗಾಗಿ ಬಿಬಿಎಂಪಿಗೆ ಮತ್ತಷ್ಟು ಗ್ರಾಮಗಳನ್ನು ಸೇರ್ಪಡೆಗೊಳಿಸುವ ಮೂಲಕ ವಾರ್ಡ ಮರು ವಿಂಗಡಣೆ ಮಾಡಿ ಹೈಕೋರ್ಟ್ ಆದೇಶವನ್ನು ಜಾರಿಗೊಳಿಸದಂತೆ ತಡೆಯಲು ತಂತ್ರ ರೂಪಿಸಿದೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಬಿಬಿಎಂಪಿಗೆ ಬೆಂಗಳೂರು ಉತ್ತರ ತಾಲೂಕು ಯಶವಂತಪುರ ಹೋಬಳಿಯ ಸೋಮಶೆಟ್ಟಿಹಳ್ಳಿ ಗ್ರಾಮ ಪಂಚಾಯತ್ ಗೆ ಸೇರಿದ ಲಕ್ಷ್ಮೀಪುರ ಕಂದಾಯ ಗ್ರಾಮ, ಕಾನ್ಷರಾಂ ನಗರ, ಲಕ್ಷ್ಮೀಪುರದ ಎಲ್ಲಾ ಬಡಾವಣೆಗಳನ್ನು ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರದ ಶೆಟ್ಟಿಹಳ್ಳಿ ವಾರ್ಡ್ ನಂ 12ಕ್ಕೆ ಸೇರ್ಪಡೆ, ಮಲ್ಲಸಂದ್ರ ಹಾಗೂ ಉತ್ತರಹಳ್ಳಿ ಮನವರ್ತೆ ಕಾವಲ್ ಗ್ರಾಮದ ಭಾಗಶಃ ಪ್ರದೇಶಗಳನ್ನು ಬಿಬಿಎಂಪಿಗೆ ಸೇರ್ಪಡೆ ಮಾಡಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ,

ಈ ಮೂಲಕ ಹೈಕೋರ್ಟ್ ಹಾಲಿ 198 ವಾರ್ಡಗಳಿಗೆ ಚುನಾವಣೆ ನಡೆಸುವಂತೆ ಆದೇಶ ನೀಡಿದರೂ ಹೊಸ ಆದೇಶವನ್ನು ಮುಂದಿಟ್ಟುಕೊಂಡು ಹಾಗೂ ಬಿಬಿಎಂಪಿ ವಾರ್ಡ್ ಗಳ ಮರು ವಿಂಗಡಣೆ ಮಾಡಲು ಸರ್ಕಾರ ಕಾರ್ಯೋನ್ಮುಖವಾಗಿದೆ. ವಿಧಾನ ಮಂಡಲ ಉಪ ಸಮಿತಿ ವರದಿ ಆಧಾರದ ಮೇಲೆ ವಾರ್ಡ್ ಮರು ವಿಂಗಡಣೆ ಮಾಡುವ ಕಾರ್ಯಕ್ಕೆ ಚಾಲನೆ ನೀಡಿ ಚುನಾವಣೆಯನ್ನು ಮುಂದೂಡುವುದು ಸರ್ಕಾರದ ಮುಂದಿರುವ ಲೆಕ್ಕಾಚಾರವಾಗಿದೆ.

ಎಸ್ ಟಿಪಿಐ ಸಹಯೋಗದಲ್ಲಿ ಉತ್ಕೃಷ್ಟತಾ ಕೇಂದ್ರವನ್ನು 26 ಕೋಟಿ ರೂ. ಮೊತ್ತದಲ್ಲಿ ಬೆಂಗಳೂರಿನಲ್ಲಿ ಸ್ಥಾಪಿ ಸುವುದು, ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಬೆಳಗಾವಿ ಸಂಸ್ಥೆಯ ಕೇಂದ್ರ ಕಚೇರಿಯ ಹಾಗೂ ಪ್ರಾದೇಶಿಕ ಕಚೇರಿ ಅಭಿವೃದ್ದಿ ಕೈಗೊಳ್ಳಲು 42 ಕೋಟಿರೂ ಆಡಳಿತಾತ್ಮಕ ಅನುಮೋದನೆ ನೀಡುವ, ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದ ಕರ್ಪೆ ಗ್ರಾಮದ ದೋಟದಲ್ಲಿ ಕಿಂಡಿ ಅಣ್ಣೆಕಟ್ಟು ನಿರ್ಮಾಣಕ್ಕೆ 36 ಕೋಟಿರೂ ಯೋಜನೆಗೆ ಒಪ್ಪಿಗೆ ನೀಡುವ ಪ್ರಸ್ತಾವನೆಗಳಿಗೂ ಸಹ ಅನುಮೋದನೆ ನೀಡಲಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಗ್ರಾಮ ಪಂಚಾಯ್ತಿಯನ್ನು ಪಟ್ಟಣ ಪಂಚಾಯಿತಿಯಾಗಿ, ಕೋಲಾರ ಜಿಲ್ಲೆ ವೇಮಗಲ್ ಮತ್ತು ಕುರುಗಲ್ ಗ್ರಾಮ ಪಂಚಾಯಿತಿ, ಶೆಟ್ಟಿ ಹಳ್ಳಿ, ಚೌಡೇನಹಳ್ಳಿ ಗ್ರಾಮಗಳನ್ನು ಒಗ್ಗೂಡಿಸಿ ವೇಮಗಲ್-ಕುರುಗಲ್ ಪಟ್ಟಣ ಪಂಚಾಯಿತಿ ಮೇಲ್ದರ್ಜೆಗೆ ಏರಿಸುವುದು. ಹೊನ್ನಾಳಿ ಪಟ್ಟಣ ಪಂಚಾಯಿತಿಯನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸುವುದು. ಬೆಳಗಾವಿಯ ಪೀರನವಾಡಿ ಗ್ರಾಮ ಪಂಚಾಯಿತಿ ಮತ್ತು ಮಚ್ಚೆ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಗೆ ಮೇಲ್ದರ್ಜೆಗೆ ಏರಿಸುವುದು. ದೇವದುರ್ಗ ತಾಲೂಕಿನ ಜಾಲಹಳ್ಳಿ ಮತ್ತು ಕರಡಿಗುಡ್ಡ ಗ್ರಾಮ ಪಂಚಾಯಿತಿ ಹಾಗೂ ಕೆಲವು ಗ್ರಾಮಗಳನ್ನು ಜಾಲಹಳ್ಳಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸಲು ತೀರ್ಮಾನಿಸಲಾಗಿದೆ.

ಯಲಹಂಕ ತಾಲೂಕಿನ ಜಾಲಹೋಬಳಿಯ ಹುಣಸಮಾರನಹಳ್ಳಿ ಮತ್ತು ಸೊಣ್ಣಪ್ಪನಹಳ್ಳಿ ಗ್ರಾಮ ಪಂಚಾಯ್ತಿಯಗಳನ್ನು ಒಟ್ಟುಗೂಡಿಸಿ ಪುರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸುವುದು, ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕಾಗವಾಡ ಗ್ರಾಮ ಪಂಚಾಯ್ತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೆ ಏರಿಸುವುದು ಸೇರಿದಂತೆ ಹಲವು ಪ್ರಮುಖ ಹಾಗು ಮಹತ್ವದ ನಿರ್ಣಯಗಳನ್ನು ಸಚಿವ ಸಂಪುಟ ಸಭೆ ಕೈಗೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com