ಹಿರೇಬಾಗೇವಾಡಿಯಲ್ಲಿ ರಾಣಿ ಚೆನ್ನಮ್ಮ ವಿವಿ ಕ್ಯಾಂಪಸ್: ಡಾ. ಸಿ.ಎನ್. ಅಶ್ವತ್ಥ ನಾರಾಯಣ

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್ ಅನ್ನು ಹಿರೇಬಾಗೇವಾಡಿಯಲ್ಲಿಯೇ ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ. ಮೊದಲ ಹಂತದಲ್ಲಿ ನೂರು ಕೋಟಿ ರೂಪಾಯಿ ಒದಗಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ ನಾರಾಯಣ ಹೇಳಿದ್ದಾರೆ. 

Published: 24th October 2020 07:00 PM  |   Last Updated: 24th October 2020 07:00 PM   |  A+A-


For representation purpose only

ಸಂಗ್ರಹ ಚಿತ್ರ

Posted By : Vishwanath S
Source : UNI

ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್ ಅನ್ನು ಹಿರೇಬಾಗೇವಾಡಿಯಲ್ಲಿಯೇ ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ. ಮೊದಲ ಹಂತದಲ್ಲಿ ನೂರು ಕೋಟಿ ರೂಪಾಯಿ ಒದಗಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ ನಾರಾಯಣ ಹೇಳಿದ್ದಾರೆ. 

ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಹಿರೇಬಾಗೇವಾಡಿ ಗ್ರಾಮದ ಬಳಿ ಮಂಜೂರು ಮಾಡಲಾಗಿರುವ ಜಮೀನನ್ನು ಪರಿಶೀಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿ ಜತೆ ಅವರು ಮಾತನಾಡಿದರು. ಈಗಾಗಲೇ 127 ಎಕರೆ ಜಮೀನು ಮಂಜೂರು ಮಾಡಲಾಗಿದೆ. ಇಲ್ಲಿ ಅಕಾಡೆಮಿಕ್ ಮತ್ತು ಆಡಳಿತ ಕೇಂದ್ರ ಎರಡೂ ಕಾರ್ಯನಿರ್ವಹಿಸಲಿವೆ. ಸ್ಥಳೀಯ ರೈತರು ಸ್ವ ಇಚ್ಛೆಯಿಂದ ಜಮೀನು ನೀಡಲು ಮುಂದಾದರೆ ಮಾತ್ರ ಖರೀದಿಸಲಾಗತ್ತದೆ. ಆದರೆ ಜಮೀನು ನೀಡುವಂತೆ ಯಾರನ್ನೂ ಒತ್ತಾಯಿಸುವುದಿಲ್ಲ ಎಂದರು.

ವಿಶ್ವ ವಿದ್ಯಾಲಯದ ಪ್ರಗತಿಗೆ ಸ್ವಂತ ಕ್ಯಾಂಪಸ್ ನಿರ್ಮಿಸಬೇಕು ಎಂಬುದು ಅನೇಕ ವರ್ಷಗಳ ಬೇಡಿಕೆಯಾಗಿತ್ತು. ಆ ಪ್ರಕಾರ ಸ್ಥಳ ನಿಗದಿ ಮಾಡಲಾಗಿದೆ. ನಗರಕ್ಕೆ ಸಮೀಪ ಜಮೀನು ಸಿಗುವುದು ಕಷ್ಟ. ಸ್ಥಳ ನಿಗದಿಗೆ ಪ್ರತಿಷ್ಠೆ ಬೇಡ. ಶಿಕ್ಷಣ ವ್ಯವಸ್ಥೆ ಅಭಿವೃದ್ಧಿಗೆ ಎಲ್ಲರೂ ಸಹಕರಿಸಬೇಕು ಎಂದರು. 

ಬಹುಗ್ರಾಮ ಕುಡಿಯುವ ನೀರಿನ ಯೋಜನೆ: ಪರ್ಯಾಯ ಸ್ಥಳದ ಸಾಧ್ಯತೆ: ವಿಶ್ವ ವಿದ್ಯಾಲಯದ ಸ್ಥಾಪನೆಗೆ ನಿಗದಿಪಡಿಸಿರುವ ಸ್ಥಳದಲ್ಲಿಯೇ ನಡೆಯುತ್ತಿರುವ ಬಹುಗ್ರಾಮ ಕುಡಿಯುವ ನೀರು ಯೋಜನೆ ರದ್ದಾಗುವುದಿಲ್ಲ. ಆದರೆ ಪರ್ಯಾಯ ವ್ಯವಸ್ಥೆಯ ಬಗ್ಗೆ ಪರಿಶೀಲಿಸಲು ಅವಕಾಶಗಳು ಕೂಡ ಇವೆ ಎಂದು ಉಪ ಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ತಿಳಿಸಿದರು.

ಜಮೀನು ನಿಗದಿಗೆ ಸಂಬಂಧಿಸಿದಂತೆ ರಾಜಕೀಯ ಚರ್ಚೆ ಮಾಡುವುದಿಲ್ಲ. ಆದರೆ ವಿಶ್ವ ವಿದ್ಯಾಲಯದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ.ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಸೇರಿದಂತೆ ಎಲ್ಲ ಜನಪ್ರತಿನಿಧಿಗಳ ಪ್ರಯತ್ನದ ಮೇರೆಗೆ ಈ‌ ಜಮೀನು ಮಂಜೂರು ಮಾಡಲಾಗಿರುತ್ತದೆ. 

ವಿಶ್ವವಿದ್ಯಾಲಯದ ನೂತನ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ಸೌಕರ್ಯಗಳನ್ನು ಕಲ್ಪಿಸಲಾಗುವುದು. ಅದೇ ರೀತಿ ಕಿತ್ತೂರಿನಲ್ಲಿ ಕೂಡ ಇತರೆ ಅಗತ್ಯ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುವುದು ಎಂದು ಹೇಳಿದರು. ಈ ಭಾಗದಲ್ಲಿ ಇನ್ನೂ ಹೆಚ್ಚಿನ ಶೈಕ್ಷಣಿಕ ಪ್ರಗತಿಗೆ ಕ್ರಮ‌ಕೈಗೊಳ್ಳಲಾಗುವುದು. ಎಲ್ಲ ಬಗೆಯ ಶೈಕ್ಷಣಿಕ ಕೋರ್ಸ್ ಆರಂಭಿಸುವ ಮೂಲಕ ಸರ್ವಾಂಗೀಣ ಅಭಿವೃದ್ಧಿಗೆ ಸಂಕಲ್ಪ ಮಾಡಲಾಗಿದೆ. ಪ್ರಸ್ತಾವಿತ ಜಮೀನಿನಲ್ಲಿ ಇರುವ ಮಲ್ಲಯ್ಯಜ್ಜನ ದೇವಸ್ಥಾನವನ್ನು ಖಂಡಿತವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಗ್ರಾಮಸ್ಥರಿಗೆ ಭರವಸೆಯನ್ನು ನೀಡಿದರು. 

ಈ ಸಂದರ್ಭದಲ್ಲಿ ಸಚಿವರ ಜತೆ ಚರ್ಚೆ ನಡೆಸಿದ ಹಿರೇಬಾಗೇವಾಡಿ ಗ್ರಾಮಸ್ಥರು, ವಿಶ್ವವಿದ್ಯಾಲಯ ಸ್ಥಾಪನೆಗೆ ಅಗತ್ಯರುವ ಹೆಚ್ಚುವರಿ ಜಮೀನು ನೀಡಲು ಸಿದ್ಧವಾಗಿರುವುದಾಗಿ ತಿಳಿಸಿದರು. ಸರ್ಕಾರ ಮಂಜೂರು ಮಾಡಿರುವ ಜಮೀನಿನ ಕುರಿತು ಸಚಿವರಿಗೆ ಮಾಹಿತಿ ನೀಡಿದ ಮಾಜಿ ಶಾಸಕ ಸಂಜಯ ಪಾಟೀಲ, "ಗುಡ್ಡದ ಮೇಲೆ ಸಮತಟ್ಟಾಗಿರುವ ಜಮೀನು ಇದೆ. ಹೆಚ್ಚುವರಿ ಜಮೀನು ನೀಡಲು ಗ್ರಾಮಸ್ಥರು ಒಪ್ಪಿಗೆ ನೀಡಿದ್ದಾರೆ" ಎಂದು ತಿಳಿಸಿದರು.

ಕಾಲೇಜು ಆರಂಭಕ್ಕೆ ಎಲ್ಲ ಸುರಕ್ಷತಾ ಕ್ರಮ: ಕೋವಿಡ್ ಹಿನ್ನೆಲೆಯಲ್ಲಿ ಸ್ವ ಇಚ್ಛೆಯಿಂದ ಬರುವ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಿ‌ ಕಾಲೇಜುಗಳನ್ನು ಆರಂಭಿಸಲಾಗುತ್ತಿದೆ. ಆನ್ ಲೈನ್ ಮತ್ತು ಆಫ್ ಲೈನ್ ಶಿಕ್ಷಣ ಮುಂದುವರಿಯಲಿದ್ದು, ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಎಲ್ಲ ಬಗೆಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ ತಿಳಿಸಿದರು.

Stay up to date on all the latest ರಾಜ್ಯ news
Poll
Narendra Singh Tomar

ಕೃಷಿ ಕಾನೂನು ಸಂಬಂಧ ರೈತರು ಮತ್ತು ಕೇಂದ್ರದ ನಡುವಣ ಬಿಕ್ಕಟ್ಟಿಗೆ ಹೊರಗಿನ ಶಕ್ತಿಗಳು ಕಾರಣ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಹೇಳಿದ್ದಾರೆ.


Result
ಹೌದು
ಇಲ್ಲ
flipboard facebook twitter whatsapp