400 ವರ್ಷಗಳ ಪುರಾತನ ಎಡನೀರು ಮಠದ ಪೀಠಾಧಿಪತಿಯಾಗಿ ಸಚ್ಚಿದಾನಂದ ಭಾರತಿ ಶ್ರೀ ಪೀಠಾರೋಹಣ

400 ವರ್ಷಗಳ ಪ್ರಾಚೀನ ಇತಿಹಾಸ ಹೊಂದಿರುವ ಎಡನೀರು ಸಂಸ್ಥಾನದ ಪೀಠಾಧಿಪತಿಯಾಗಿ ಸಚ್ಚಿದಾನಂದ ಭಾರತಿ (52) ಶ್ರೀಗಳ ಪೀಠಾರೋಹಣ ಮಹೋತ್ಸವ ಅ.28 ರಂದು ಕಾಸರಗೋಡಿನ ಎಡನೀರು ಮಠದಲ್ಲಿ ನೆರವೇರಿತು.
ಸಚ್ಚಿದಾನಂದ ಭಾರತಿ ಶ್ರೀ ಪೀಠಾರೋಹಣ
ಸಚ್ಚಿದಾನಂದ ಭಾರತಿ ಶ್ರೀ ಪೀಠಾರೋಹಣ

ಎಡನೀರು: 400 ವರ್ಷಗಳ ಪ್ರಾಚೀನ ಇತಿಹಾಸ ಹೊಂದಿರುವ ಎಡನೀರು ಸಂಸ್ಥಾನದ ಪೀಠಾಧಿಪತಿಯಾಗಿ ಸಚ್ಚಿದಾನಂದ ಭಾರತಿ (52) ಶ್ರೀಗಳ ಪೀಠಾರೋಹಣ ಮಹೋತ್ಸವ ಅ.28 ರಂದು ಕಾಸರಗೋಡಿನ ಎಡನೀರು ಮಠದಲ್ಲಿ ನೆರವೇರಿತು.

ಪಟ್ಟಾಭಿಷೇಕ ಮಹೋತ್ಸವದಲ್ಲಿ 16 ಯತಿಗಳು, ವಿವಿಧ ಮಠ, ದೇವಸ್ಥಾನಗಳ ಪ್ರತಿನಿಧಿಗಳು ಭಾಗಿಯಾಗಿದ್ದರು ಎಂದು ಎಡನೀರು ಸಂಸ್ಥಾನ ತಿಳಿಸಿದೆ.

ಎಡನೀರು ಮಠದ ಈ ಹಿಂದಿನ ಪೀಠಾಧಿಪತಿಗಳಾಗಿದ್ದ ಕೇಶವಾನಂದ ಭಾರತಿ ಶ್ರೀಗಳು ತಮ್ಮ ಅಕ್ಕನ ಮಗನಾಗಿರುವ ಜಯರಾಮ ಮಂಜತ್ತಾಯ ಅವರನ್ನು ತಮ್ಮ ಉತ್ತರಾಧಿಕಾರಿಯಾಗಿ ಘೋಷಿಸಿದ್ದರು. ಆದರೆ ಸಂನ್ಯಾಸ ದೀಕ್ಷೆ ನೀಡುವ ಮುನ್ನವೇ ಬೃಂದಾವನಸ್ಥರಾದ್ದರಿಂದ ಜಯರಾಮ ಮಂಜತ್ತಾಯ ಅವರಿಗೆ ಕಂಚಿ ಕಾಮಕೋಟಿ ಪೀಠದ ಶಂಕರಾಚಾರ್ಯ ವಿಜಯೇಂದ್ರ ಸರಸ್ವತಿ ಶ್ರೀಗಳು ಕಾಂಚಿಪುರಂ ನಲ್ಲಿ ಅ.26 ರಂದು ಸಂನ್ಯಾಸ ದೀಕ್ಷೆ ನೀಡಿ ಸಚ್ಚಿದಾನಂದ ಭಾರತಿ ಎಂಬ ಯೋಗಪಟ್ಟ ನೀಡಿದ್ದರು.

ಕಾಸರಗೋಡಿನ ಎಡನೀರು ಮಠಕ್ಕೆ ಮಂಜತ್ತಯ ಕುಟುಂಬದವರು ಪೀಠಾಧಿಪತಿಗಳಾಗುತ್ತಿದ್ದು, ಸಚ್ಚಿದಾನಂದ ಭಾರತಿಗಳು ಈ ಮಠಕ್ಕೆ ಪೀಠಾಧಿಪತಿಗಳಾಗುತ್ತಿರುವ ಮಂಜತ್ತಾಯ ಕುಟುಂಬದ ಕೊನೆಯ ಸದಸ್ಯರಾಗಿದ್ದಾರೆ.

ಕೇಶವಾನಂದ ಭಾರತಿ ಶ್ರೀಗಳಿಗೂ ಮುನ್ನ ಅವರ ಪೂರ್ವಾಶ್ರಮದ ತಂದೆಯ ಹಿರಿಯ ಸಹೋದರ ಈಶ್ವರಾನಂದ ಭಾರತಿ ಶ್ರೀಗಳು ಎಡನೀರು ಮಠದ ಮುಖ್ಯಸ್ಥರಾಗಿದ್ದರು. 1968 ರಲ್ಲಿ ಈಶ್ವರಾನಂದ ಭಾರತಿ ಶ್ರೀಗಳು ಬೃಂದಾವನಸ್ಥರಾದ ಬಳಿಕ ಕೇಶವಾನಂದ ಭಾರತಿಗಳು 52 ವರ್ಷಗಳವರೆಗೆ ಮಠದ ಮುಖ್ಯಸ್ಥರಾಗಿದ್ದರು. ಸೆ.06 ರಂದು ಕೇಶವಾನಂದ ಭಾರತಿ ಶ್ರೀಗಳು ಇಹಲೋಕ ತ್ಯಜಿಸಿದ್ದರು.

ಕೇಶವಾನಂದ ಭಾರತಿಗಳು ಸಂನ್ಯಾಸ ಸ್ವೀಕರಿಸಿದ ಬಳಿಕ ಮಂಜತ್ತಾಯ ಕುಟುಂಬಕ್ಕೆ ಉತ್ತರಾಧಿಕಾರಿಗಳಿರಲಿಲ್ಲ. ಆಗ ಕೇಶವಾನಂದ ಭಾರತಿ ಶ್ರೀಗಳ ತಾಯಿ ತಮ್ಮ ಮಗಳ ಪುತ್ರ ಜಯರಾಮ ಮಂಜತ್ತಾಯರನ್ನು ದತ್ತು ಸ್ವೀಕರಿಸಿದ್ದರು. ಈಗ ಜಯರಾಮ ಮಂಜತ್ತಾಯ (ಸಚ್ಚಿದಾನಂದ ಭಾರತಿ ಶ್ರೀ)ಗಳು ಸಂನ್ಯಾಸ ಸ್ವೀಕರಿಸಿದ್ದು, ಮಂಜತ್ತಾಯ ಕುಟುಂಬದಲ್ಲಿ ಬದುಕಿ ಉಳಿದಿರುವ ಕೊನೆಯ ಉತ್ತರಾಧಿಕಾರಿಯಾಗಿದ್ದಾರೆ. ಮುಂದ ಎಡನೀರು ಮಠಕ್ಕೆ ಬರುವ ಯತಿಗಳು ಮಂಜತ್ತಾಯ ಕುಟುಂಬದ ಹೊರತಾಗಿರುವವರಾಗಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com