ಆರ್ ಆರ್ ನಗರ ಉಪ ಚುನಾವಣೆ: ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ದರ್ಶನ್ ಪ್ರಚಾರ, ಸಾವಿರಾರು ಅಭಿಮಾನಿಗಳ ದೌಡು!

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕಣಕ್ಕೆ ಸ್ಯಾಂಡಲ್ ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ ಎಂಟ್ರಿ ಕೊಟ್ಟಿದ್ದು, ಬಿಜೆಪಿ ಅಭ್ಯರ್ಥಿ ಹಾಗೂ ಖ್ಯಾತ ನಿರ್ಮಾಪಕ ಮುನಿರತ್ನ ಪರ ದರ್ಶನ್ ಪ್ರಚಾರ ನಡೆಸಿದ್ದಾರೆ.
ದರ್ಶನ್
ದರ್ಶನ್

ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕಣಕ್ಕೆ ಸ್ಯಾಂಡಲ್ ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ ಎಂಟ್ರಿ ಕೊಟ್ಟಿದ್ದು, ಬಿಜೆಪಿ ಅಭ್ಯರ್ಥಿ ಹಾಗೂ ಖ್ಯಾತ ನಿರ್ಮಾಪಕ ಮುನಿರತ್ನ ಪರ ದರ್ಶನ್ ಪ್ರಚಾರ ನಡೆಸಿದ್ದಾರೆ.

ಇಂದು ಬೆಳಗ್ಗೆ 10.30ಕ್ಕೆ ರಾಜರಾಜೇಶ್ವರಿ ನಗರ ರೈಲ್ವೇ ನಿಲ್ದಾಣದಿಂದ ಆರಂಭವಾಗಬೇಕಿದ್ದ ರೋಡ್ ಷೋ ತಡವಾಗಿ ಆರಂಭವಾಯಿತು. ಜಿಮ್ ವರ್ಕೌಟ್ ಗೆ ಹೋಗಿದ್ದ ದರ್ಶನ್ ಅರ್ಧ ಗಂಟೆ ತಡವಾಗಿ ಬಂದ ಹಿನ್ನಲೆಯಲ್ಲಿ ರೋಡ್ ಷೋ ಕೂಡ ತಡವಾಗಿ ಆರಂಭವಾಯಿತು. ಈ ಸಂಬಂಧ ದರ್ಶನ್ ಕೂಡ ಸ್ಪಷ್ಟನೆ  ನೀಡಿದರು. ರೋಡ್ ಶೋ ಆರಂಭಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ದರ್ಶನ್, ನಾನು ಪಕ್ಷ ನೋಡಿ ಪ್ರಚಾರ ಮಾಡುವುದಿಲ್ಲ. ವ್ಯಕ್ತಿ ನೋಡಿ ಪ್ರಚಾರ ಮಾಡುತ್ತೇನೆ. ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಅವರು ಮಾಡಿದ ಕಾರ್ಯವನ್ನು ನೋಡಿದ್ದೇನೆ. ಲಾಕ್ ಡೌನ್ ಸಂದರ್ಭದಲ್ಲಿ ಅವರು  ನಡೆಸಿದ ದಾಸೋಹ ಶ್ಲಾಘನೀಯ. ಹೀಗಾಗಿ ಮಾನವೀಯ ದೃಷ್ಟಿಯಿಂದ ಪ್ರಚಾರ ಮಾಡುತ್ತಿದ್ದೇನೆ ಎಂದು ಹೇಳಿದರು.

ಇದೇ ವೇಳೆ ಕೊರೋನಾ ಹಿನ್ನಲೆಯಲ್ಲಿ ಪ್ರಚಾರದ ಕುರಿತು ಮಾತನಾಡಿದ ದರ್ಶನ್, ನಿಜ ಈಗ ಸಾಕಷ್ಟು ಮುಂಜಾಗ್ರತೆ ಕೈಗೊಳ್ಳಬೇಕು. ನಾವು ಕೂಡ ಮಾಸ್ಕ್ ಹಾಕಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಚಾರ ಮಾಡುತ್ತೇವೆ. ಅಭಿಮಾನಿಗಳು ಕೂಡ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು  ಮನವಿ ಮಾಡಿದರು. ಇದೇ ವೇಳೆ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ನಡೆಸಲಿರುವ ನಿಖಿಲ್ ಕುಮಾರಸ್ವಾಮಿ ಅವರ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ದರ್ಶನ್, ನಿಖಿಲ್ ಅವರು ತಮ್ಮ ಅಭ್ಯರ್ಥಿ ಪ್ರಚಾರ ನಡೆಸಲಿದ್ದಾರೆ. ನಾನು ಮುನಿರತ್ನ ಅವರ ಪರ ಪ್ರಚಾರ ನಡೆಸುತ್ತೇನೆ ಎಂದು ಹೇಳಿದರು.

ಇನ್ನು ನಟ ದರ್ಶನ್ ಆರ್ ಆರ್ ನಗರ ಕ್ಷೇತ್ರದಲ್ಲಿ ಇಡೀ ದಿನ ಭರ್ಜರಿ ರೋಡ್ ಶೋ ನಡೆಸಲಿದ್ದಾರೆ. ಆರ್ ಆರ್ ನಗರ ವ್ಯಾಪ್ತಿಯ 9 ವಾರ್ಡ್‍ಗಳಲ್ಲಿ ಮುನಿರತ್ನ ಜೊತೆಯಲ್ಲಿ ದರ್ಶನ್ ರೋಡ್ ಶೋ ನಡೆಸಲಿದ್ದು, ದರ್ಶನ್‍ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವ ಆರ್ ಅಶೋಕ್ ಸಾಥ್  ಕೊಡಲಿದ್ದಾರೆ. ಯಶವಂತಪುರ ರೈಲ್ವೆ ನಿಲ್ದಾಣದ ಮುಂಭಾಗದಿಂದ ರೋಡ್ ಶೋ ಆರಂಭವಾಗಲಿದ್ದು, ರಾಜರಾಜೇಶ್ವರಿನಗರದ ಪ್ರಮುಖ ರಸ್ತೆಗಳಲ್ಲಿ ರೋಡ್ ಶೋ ನಡೆಯಲಿದೆ. ಬಳಿಕ ಜೆ.ಪಿ.ಪಾರ್ಕ್ ವಾರ್ಡ್, ಜಾಲಹಳ್ಳಿ ವಿಲೇಜ್, ಹೆಚ್‍ಎಂಟಿ, ಪೀಣ್ಯಾ ಮಾರ್ಗವಾಗಿ ಗೊರಗುಂಟೆಪಾಳ್ಯ ಮತ್ತು ಲಕ್ಷ್ಮಿದೇವಿನಗರದ  ಕೂಲಿನಗರ ಸೇತುವೆಯಿಂದ ರೋಡ್ ಶೋ ನಡೆಸಲಿದ್ದಾರೆ. ಅಂತೆಯೇ ಲಗ್ಗೆರೆಯ ಆಲದಮರ ಸರ್ಕಲ್, ಕೊಟ್ಟಿಗೆಪಾಳ್ಯದ ಪೈಪ್‍ಲೈನ್, ಸುಂಕದಕಟ್ಟೆ, ಕೊಟ್ಟಿಗೆಪಾಳ್ಯದ ಬಿಡಿಎ ಕಾಂಪ್ಲೆಕ್ಸ್, ಜ್ಞಾನಭಾರತಿಯ ಕೆಂಗುಂಟೆ, ಮಲ್ಲತ್ತಹಳ್ಳಿಯಲ್ಲಿ ರೋಡ್ ಶೋ ನಡೆಯಲಿದೆ.

ರೋಡ್‍ಶೋ ಜೊತೆಗೆ ಹಲವು ಕಡೆ ಸಾರಥಿ ಪ್ರಚಾರ ಭಾಷಣ ಸಹ ಮಾಡಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com