ಸ್ಯಾಂಡಲ್'ವುಡ್ ಡ್ರಗ್ಸ್ ದಂಧೆ ಪ್ರಕರಣಗಳ ಯಾರ ಮೇಲೂ ದಯೆ ಬೇಡ: ಸರ್ಕಾರಕ್ಕೆ ಸಿದ್ದರಾಮಯ್ಯ

ಸ್ಯಾಂಡಲ್'ವುಡ್ ಡ್ರಗ್ಸ್ ದಂಧೆ ಪ್ರಕರಣಗಳ ಸಂಬಂಧ ಆರೋಪಿಗಳ ವಿರುದ್ದ ನಿಷ್ಕರುಣೆಯಿಂದ ಕ್ರಮ ಕೈಗೊಳ್ಳಿ ಎಂದು ರಾಜ್ಯ ಸರ್ಕಾರಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ. 
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ಸ್ಯಾಂಡಲ್'ವುಡ್ ಡ್ರಗ್ಸ್ ದಂಧೆ ಪ್ರಕರಣಗಳ ಸಂಬಂಧ ಆರೋಪಿಗಳ ವಿರುದ್ದ ನಿಷ್ಕರುಣೆಯಿಂದ ಕ್ರಮ ಕೈಗೊಳ್ಳಿ ಎಂದು ರಾಜ್ಯ ಸರ್ಕಾರಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ. 

ಡ್ರಗ್ಸ್ ದಂಧೆ ಪ್ರಕರಣ ಸಂಬಂಧ ನಿಷ್ಪಕ್ಷಪಾತವಾಗಿ ತನಿಖೆ ನಡೆಯಬೇಕಿದೆ. ತನಿಖೆಯಲ್ಲಿ ಯಾವುದೇ ರೀತಿಯ ರಾಜಕೀಯ ದುರುದ್ದೇಶಗಳಿರಬಾರದು. ಮಾದಕ ವಸ್ತುಗಳ ಮಾರಾಟ ಸಮಾಜಕ್ಕೆ ದೊಡ್ಡ ಪಿಡುಗು ಇದ್ದಂತೆ. ಸಾಕಷ್ಟು ವರ್ಷಗಳಿಂದ ಮುಂದುವರೆದುಕೊಂಡು ಬಂದಿರುವ ಡ್ರಗ್ಸ್ ದಂಧೆಯನ್ನು ಮಟ್ಟಹಾಕಬೇಕಿದೆ ಎಂದು ಹೇಳಿದ್ದಾರೆ. 

ಇದೇ ವೇಳೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಜಮೀರ್ ಅಹ್ಮದ್ ಖಾನ್ ಅವರ ಹೆಸರು ಕೇಳಿಬಂದಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಪ್ರಕರಣದಲ್ಲಿ ಭಾಗಿಯಾಗಿದ್ದ ವ್ಯಕ್ತಿಯೊಬ್ಬರ ಜೊತೆಗಿದ್ದ ಫೋಟೋಗಳನ್ನು ನೋಡಿ ಜಮೀರ್ ಕೂಡ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂದು ಹೇಳಲಾಗುತ್ತಿದೆ. ಅವರನ್ನು ಕ್ರಿಮಿನಲ್ ರೀತಿ ನೋಡಬಾರದು. ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂದು ಹೇಳಲು ಸಾಕ್ಷ್ಯಾಧಾರವೇನಿದೆ? ವಿನಾಕಾರಣ ಅನ್ಯ ವ್ಯಕ್ತಿಗಳ ಹೆಸರನ್ನು ಎಳೆದು, ಕೆಟ್ಟ ಹೆಸರು ತರಬಾರದು ಎಂದು ತಿಳಿಸಿದ್ದಾರೆ. 

ಇದೇ ವೇಳೆ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿಯವರೂ ಕೂಡ ತಮ್ಮ ಶ್ರೀಲಂಕಾ ಭೇಟಿಯನ್ನು ಸಮರ್ಥಿಸಿಕೊಂಡಿದ್ದು, ಜಮೀರ್ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ. 

ಜೆಡಿಎಸ್ ಪಕ್ಷದ ಗೌಪ್ಯ ಕಾರ್ಯಸೂಚಿ ಮತ್ತು ಮುಂದಿನ ರಾಜಕೀಯ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲು ಶಾಸಕರು, ವಿಧಾನಪರಿಷತ್ ಸದಸ್ಯರು, ಮಾಜಿ ಶಾಸಕರು ಮತ್ತು ಪ್ರಮುಖ ನಾಯಕರೊಂದಿಗೆ ಶ್ರೀಲಂಕಾದ ಕೊಲಂಬೋಗೆ ಒಮ್ಮೆ ಪ್ರವಾಸ ಹೋಗಿದ್ದು ನಿಜ. ಕದ್ದು ಮುಚ್ಚಿ ಕೊಲಂಬೋ ಯಾತ್ರೆ ಮಾಡಿರಲಿಲ್ಲ. ಒಂದಾನೊಂದು ಕಾಲದಲ್ಲಿ ನಮ್ಮ ಪಕ್ಷದಲ್ಲಿದ್ದ ರಾಜಕಾರಣಿಯೊಬ್ಬರು ಜೆಡಿಎಸ್ ಶಾಸಕರು ಮತ್ತು ನಾನು ಕೊಲಂಬೋ ಪ್ರವಾಸ ಕೈಗೊಂಡಿದ್ದಾಗಿ ನೀಡಿರುವ ಹೇಳಿಕೆ ಎತ್ತಣ ಮಾಮರ ಎತ್ತಣ ಕೋಗಿಲೆ ಎಂಬಂತಿದೆ. 

2014ರ ಜೂನ್ ತಿಂಗಳಿನಲ್ಲಿ ಪಕ್ಷದ ಸಂಘಟನೆ ಬಗ್ಗೆ ವಿಸ್ತೃತವಾಗಿ ಚರ್ಚಿಸಲು ಕೊಲಂಬೋಗೆ ಪ್ರವಾಸ ಹೋಗುವುದಾಗಿ ಬಹಿರಂಗವಾಗಿಯೇ ಮಾಧ್ಯಮಗಳಿಗೆ ಹೇಳಿ ಹೋಗಿದ್ದೆವು. ಅಲ್ಲಿ ನಡೆದ ಶಾಸಕರ ಜೊತೆಗಿನ ಚರ್ಚೆಯ ದೃಶ್ಯಾವಳಿಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದೆವು. ಇದರಲ್ಲಿ ಯಾವುದೇ ಗುಟ್ಟು ಇರಲಿಲ್ಲ ಎಂದು ಕಿಡಿಕಾರಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com