4ನೇ ಬಾರಿ ಮುಖ್ಯಮಂತ್ರಿಯಾಗಲು ಅನಂತಕುಮಾರ್ ಪರಿಶ್ರಮವೇ ಕಾರಣ: ಸಿಎಂ ಯಡಿಯೂರಪ್ಪ

ನಾಲ್ಕನೇ ಬಾರಿಗೆ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯಲು ಸ್ನೇಹಿತ ಅನಂತಕುಮಾರ್ ಅವರ ಪರಿಶ್ರಮವೇ ಕಾರಣ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಹೇಳಿದ್ದಾರೆ.
ಸಿಎಂ ಯಡಿಯೂರಪ್ಪ
ಸಿಎಂ ಯಡಿಯೂರಪ್ಪ

ಬೆಂಗಳೂರು: ನಾಲ್ಕನೇ ಬಾರಿಗೆ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯಲು ಸ್ನೇಹಿತ ಅನಂತಕುಮಾರ್ ಅವರ ಪರಿಶ್ರಮವೇ ಕಾರಣ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಹೇಳಿದ್ದಾರೆ.

ದಿವಗಂತ ಅನಂತಕುಮಾರ್ ಅವರ 61 ನೇ ಜನ್ಮದಿನಾಚರಣೆಯ ಅಂಗವಾಗಿ ಅನಂತಕುಮಾರ್ ಪ್ರತಿಷ್ಠಾನದಿಂದ ಆಯೋಜಿಸಲಾಗಿದ್ದ ಅನಂತ ನಮನ ಕಾರ್ಯಕ್ರಮದಲ್ಲಿ ಅನಂತಪಥ ಮಾಸಪತ್ರಿಕೆ ಬಿಡಗಡೆ ಮಾಡಿ ಅವರು ಮಾತನಾಡಿದರು.

ನನ್ನ ಆತ್ಮೀಯ ಸ್ನೇಹಿತ ಅನಂತ್ ಕುಮಾರ್ ಅವರನ್ನು ಕಳೆದುಕೊಂಡು ಆಗಲೇ ಎರಡು ವರ್ಷಗಳು ಕಳೆದಿವೆ. ಅವರನ್ನು ನಾನು ನೆನಪಿಸಿಕೊಳ್ಳದ ದಿನವೇ ಇಲ್ಲ. ನಮ್ಮ ಸ್ನೇಹ 30 ವರ್ಷಗಳಿಗಿಂತ ಹೆಚ್ಚಿನದು. ಆಗ ವಿದ್ಯಾರ್ಥಿ ಪರಿಷತ್ತಿನ ಸಕ್ರಿಯ ಕಾರ್ಯಕರ್ತರಾಗಿದ್ದ ಅನಂತಕುಮಾರ್ ಅವರಲ್ಲಿ ನಾಯಕತ್ವದ ಆದರ್ಶ ಲಕ್ಷಣಗಳನ್ನು ಎಲ್ಲರೂ ಗುರುತಿಸಿದ್ದರು. ರಾಜ್ಯದಲ್ಲಿ ಬಿಜೆಪಿಯನ್ನು ಈ ಮಟ್ಟದಲ್ಲಿ ಬೆಳೆಸುವಲ್ಲಿ ಅವರ ಕೊಡುಗೆ ಅಪಾರ. ಅನಂತಕುಮಾರ್ ಅವರ ಪರಿಶ್ರಮದಿಂದ 4 ನೇ ಬಾರಿ ಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕಿದೆ. ನಾನು ರಾಜ್ಯದ ಮುಖ್ಯಮಂತ್ರಿಯಾಗಿ ಈ ಸ್ಥಾನದಲ್ಲಿ ಕುತಿದ್ದರೆ ಅದಕ್ಕೆ ಅನಂತಕುಮಾರ್ ಅವರ ಕೊಡುಗೆಯೇ ಕಾರಣ ಎಂದು ನೆನಪಿಸಿಕೊಂಡರು.

6 ಬಾರಿ ಸಂಸದರಾಗಿ, ಕೇಂದ್ರದ ಮಂತ್ರಿಯಾಗಿ ವಿವಿಧ ಖಾತೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದ ಎತ್ತರದ ನಾಯಕ ಎಂದು ಎಲ್ಲರೂ ಅನಂತಕುಮಾರ್ ಅವರನ್ನು ಗುರುತಿಸುತ್ತಾರೆ, ಮಾತನಾಡುತ್ತಾರೆ. ಆದರೆ ನನ್ನ ಮಟ್ಟಿಗೆ, ಅವರು ಅತ್ಯಂತ ಮಾನವೀಯತೆಯಿದ್ದ ಸರಳ ಮನುಷ್ಯ. ಅವರು ಯಾವಾಗಲೂ ಸಮಾಜದ ಕೊನೆಯ ವ್ಯಕ್ತಿಯ ಹಿತಾಸಕ್ತಿ ಕಾಪಾಡುವ ಆದರ್ಶ ಹೊಂದಿದ್ದರು. ಕರ್ನಾಟಕ ಮತ್ತು ಕನ್ನಡದ ಜನರು ಸದಾ ಅವರ ಹೃದಯದಲ್ಲಿದ್ದರು ಎಂದರು.

ಕಳೆದ 1980ರ ದಶಕದ ದಿನಗಳಿಂದಲೂ ನಾನೂ ಅನಂತಕುಮಾರ್ ರಾಜ್ಯದಲ್ಲಿ ಪಕ್ಷವನ್ನು ಮೊದಲ ಹೆಜ್ಜೆಯಿಂದ ಪ್ರಾರಂಭಿಸಿ ಕಟ್ಟಿದ್ದೇವೆ. ನಾವು ಪ್ರಯಾಣಿಸದೆ ಇದ್ದ ಒಂದು ಊರು, ತಾಲೂಕು ಇರಲಿಲ್ಲ ಎನ್ನುವಷ್ಟರ ಮಟ್ಟಿಗೆ ಓಡಾಡಿದ್ದೇವೆ. ಕೆಂಪು ಬಸ್, ಸೈಕಲ್ ಸೇರಿದಂತೆ ಎಲ್ಲಾ ರೀತಿಯ ಸಾರಿಗೆ ಬಳಸಿ ತಿರುಗಾಡಿದ್ದೇವೆ. ಯಾರೋ ಸ್ನೇಹಿತರ ಮನೆಯಲ್ಲೋ, ಕಾರ್ಯಕರ್ತರ ಮನೆಯಲ್ಲೋ ನಮ್ಮ ಊಟವಾಗುತ್ತಿತ್ತು. ಆ ದಿನಗಳನ್ನು ನೆನೆದರೆ ನನ್ನ ಕಣ್ಣುಗಳನ್ನು ಇನ್ನೂ ಮಿಂಚುವಂತೆ ಮಾಡುತ್ತದೆ. ಈಗ ಅನಂತಕುಮಾರರ ಅಗಲಿಕೆಯನ್ನು ನೆನೆದು ಕಣ್ಣುಗಳು ಕಣ್ಣೀರಿನಿಂದ ತೇವವಾಗುತ್ತವೆ ಎಂದು ಹೇಳಿದರು.

ತೇಜಸ್ವಿನಿ ಅನಂತ್ ಕುಮಾರ್ ಮತ್ತು ಅನಂತ್ ಕುಮಾರ್ ಅವರ ನೂರಾರು ಹಿತೈಷಿಗಳು ಅವರ ಪರಂಪರೆಯನ್ನು ಮುಂದುವರಿಸುತ್ತಿದ್ದಾರೆ. ಸಮಾಜಸೇವೆಯ ವಿಶಿಷ್ಟಕಾರ್ಯದಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಅವರ ಸೇವಾಮನೋಭಾವವನ್ನು ಕಂಡು ನನಗೆ ತುಂಬ ಸಂತೋಷವಾಗಿದೆ ಎಂದು ಹೇಳಿದರು.

ತೇಜಸ್ವೀನಿ ಅನಂತಕುಮಾರ್ ಅವರು ಅನಂತಕುಮಾರ್ ಅವರ ಆದರ್ಶಗಳನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಬಡಮಕ್ಕಳಿಗೆ ಊಟ ನೀಡುವಂತಹ ಆದರ್ಶ ಕೆಲಸ ಮಾಡುತ್ತಿದ್ದಾರೆ. ಇಂತಹ ಕಾರ್ಯಗಳಿಗೆ ನಮ್ಮ ಬೆಂಬಲ ಸದಾ ಇರುತ್ತದೆ ಎಂದು ಹೇಳಿದರು.

ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಮಾತನಾಡಿ, ಅನಂತಕುಮಾರ್ ಅವರು ನನ್ನ ರಾಜಕೀಯ ಗುರುಗಳು. ನನ್ನ ಕ್ಷಮತೆಯನ್ನು ಗಮನಿಸಿದ ಅವರು ವಕೀಲನಾಗಿದ್ದ ನನ್ನನ್ನು ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವಂತೆ ಮಾಡಿದರು. ಅನಂತಕುಮಾರ್ ನಮ್ಮ ಕುಟುಂಬದ ಸ್ನೇಹಿತರು. ಸ್ನೇಹ ಜೀವಿಯಾಗಿದ್ದ ಅವರು ಕೇಂದ್ರ ಹಾಗೂ ರಾಜ್ಯ ಸರಕಾರದ ನಡುವಿನ ಕೊಂಡಿಯಾಗಿದ್ದರು. ಅಂತಹ ಮಹಾನ್ ವ್ಯಕ್ತಿಯನ್ನು ಕಳೆದುಕೊಂಡಿರುವುದು ನಮಗಷ್ಟೇ ಅಲ್ಲ ರಾಜ್ಯಕ್ಕೂ ತುಂಬಲಾರದ ನಷ್ಟ. ಅವರನ್ನು ನೆನಪಿಸಿಕೊಳ್ಳದ ದಿನಗಳೇ ಇಲ್ಲ ಎಂದು ಹೇಳಿದರು.

ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ರವಿ ಸುಬ್ರಮಣ್ಯ, ಆನ್ ಲೈನ್ ಮೂಲಕ ಸಂಸದ ರಾಜೀವ್ ಚಂದ್ರಶೇಖರ್, ತಾರಾ ಅನುರಾಧ, ವಿಜಯಲಕ್ಷ್ಮಿ ಬಾಳೇಕುಂದ್ರಿ, ಅನಂತ ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಪಿ ವಿ ಕೃಷ್ಣ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com