ಕೊರೋನಾ: ಪೂರ್ಣ ಬಿಲ್ ಪಾವತಿ ಮಾಡದ ಹೊರತು ಮೃತದೇಹ ನೀಡಲ್ಲ ಎಂದ ಆಸ್ಪತ್ರೆ, ಕುಟುಂಬಸ್ಥರ ಪರದಾಟ

ಕೊರೋನಾದಿಂದ ವ್ಯಕ್ತಿ ಸಾವನ್ನಪ್ಪಿದ್ದಕ್ಕೆ ಆಸ್ಪತ್ರೆಯವರು ಬಾಕಿ ಬಿಲ್ ಪಾವತಿಸಿ ಶವ ತೆಗೆದುಕೊಂಡು ಹೋಗಲು ತಿಳಿಸಿದ್ದರಿಂದ ಕುಟುಂಬಸ್ಥರು ಹಾಗೂ ಸಂಬಂಧಿಕರು ಬಾಕಿ ಬಿಲ್ ಕಟ್ಟಲು ಪರದಾಟಿದ ಘಟನೆ ಪಟ್ಟಣದಲ್ಲಿ ನಡೆಯಿತು. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ವಿಜಯಪುರ: ಕೊರೋನಾದಿಂದ ವ್ಯಕ್ತಿ ಸಾವನ್ನಪ್ಪಿದ್ದಕ್ಕೆ ಆಸ್ಪತ್ರೆಯವರು ಬಾಕಿ ಬಿಲ್ ಪಾವತಿಸಿ ಶವ ತೆಗೆದುಕೊಂಡು ಹೋಗಲು ತಿಳಿಸಿದ್ದರಿಂದ ಕುಟುಂಬಸ್ಥರು ಹಾಗೂ ಸಂಬಂಧಿಕರು ಬಾಕಿ ಬಿಲ್ ಕಟ್ಟಲು ಪರದಾಟಿದ ಘಟನೆ ಪಟ್ಟಣದಲ್ಲಿ ನಡೆಯಿತು. 

ನಗರ ಬಂಜಾರಾ ಕ್ರಾಸ್ ಬಳಿಯ ಖಾಸಗಿ ಆಸ್ಪತ್ರೆಯಲ್ಲಿ ಬೆಳಗಾವಿ ಜಿಲ್ಲೆ ಸಂಕೇಶ್ವರ ಮೂಲದ ವ್ಯಕ್ತಿಯೊಬ್ಬರು ಕಳೆದ 12 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. 

ಕೊರೋನಾದಿಂದ ಬಳಲುತ್ತಿದ್ದ 45 ವರ್ಷದ ರಾಜೇಶ್ ಭೋವಿ ಎಂಬ ರೋಗಿ ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಸಂಜೆ ಮೃತಪಟ್ಟಿದ್ದಾರೆ. ಆಸ್ಪತ್ರೆಗೆ ಮೃತನ ಸಂಬಂಧಿಕರು ಈಗಾಗಲೇ ರೂ.4.87 ಲಕ್ಷ ಬಿಲ್ ಪಾವತಿ ಮಾಡಿದ್ದಾರೆ. ಇನ್ನೂ ಬಾಕಿ ರೂ.3 ಲಕ್ಷ ಬಿಲ್ ಭರಿಸಿ ಮೃತದೇಹ ತೆಗೆದುಕೊಂಡು ಹೋಗುವಂತೆ ವೈದ್ಯರು ಸೂಚಿಸಿದ್ದಾರೆ. 

ವೈದ್ಯರ ಈ ನಡೆ ಖಂಡಿಸಿದ ಮೃತನ ಕುಟುಂಬಸ್ಥರು ಹಾಗೂ ಸಂಬಂಧಿಕರು ಆಸ್ಪತ್ರೆ ಎದುರು, ಭಿಕ್ಷಾಟನೆ ಜೊತೆಗೆ ತಮಟೆ ಬಾರಿಸುವುದರ ಮೂಲಕ ಆಸ್ಪತ್ರೆಯ ವೈದ್ಯರ ವಿರುದ್ಧ ಹೋರಾಟ ನಡೆಸಿದರು. 

ಪೂರ್ಣ ಪ್ರಮಾಣದ ಬಿಲ್ ಪಾವತಿ ಮಾಡಿಯೇ ಮೃತದೇಹ ತೆಗೆದುಕೊಂಡು ಹೋಗುವಂತೆ ತಿಳಿಸಿರಲಿಲ್ಲ. ಆ್ಯಂಬುಲೆನ್ಸ್ ಬಿಲ್ ಪಾವತಿ ಮಾಡುವಂತೆ ತಿಳಿಸಿದ್ದೆವು. ಅದೂ ಕೂಡ ಸರ್ಕಾರದ ಮಾರ್ಗಸೂಚಿಯನ್ವಯವೇ ತಿಳಿಸಲಾಗಿತ್ತು. ಆದರೆ, ಅದಕ್ಕೆ ನಿರಾಕರಿಸಿದ ಮೃತನ ಕುಟುಂಬಸ್ಥರು ಆಸ್ಪತ್ರೆಯ ಸಿಬ್ಬಂದಿಗಳ ಮೇಲೆಯೇ ಹಲ್ಲೆ ನಡೆಸಿದ್ದರು ಎಂದು ಆಸ್ಪತ್ರೆಯ ವೈದ್ಯ ಅಯ್ಯನ್ ಗೌಡ ಬಿರಾದರ್ ಅವರು ಹೇಳಿದ್ದಾರೆ. 

ಆಸ್ಪತ್ರೆಯಲ್ಲಿ ವ್ಯಕ್ತಿ 16 ದಿನ ಚಿಕಿತ್ಸೆ ಪಡೆದಿದ್ದು, ಐಸಿಯುವಿನಲ್ಲಿ 2 ವಾರ ಚಿಕಿತ್ಸೆ ನೀಡಲಾಗಿದೆ. ಒಟ್ಟಾರೆ ಬಿಲ್ ರೂ.4.13 ಲಕ್ಷ ಆಗಿದೆ. ಈ ವರೆಗೂ ಮೃತನ ಕುಟುಂಬಸ್ಥರು ರೂ.1.82 ಲಕ್ಷ ಪಾವತಿ ಮಾಡಿದ್ದು, ಇನ್ನೂ ರೂ.2.31 ಲಕ್ಷ ಬಿಲ್ ಪಾವತಿ ಮಾಡಬೇಕಿದೆ ಎಂದು ತಿಳಿಸಿದ್ದಾರೆ. 

ಮೃತ ವ್ಯಕ್ತಿಯ ಸಹೋದರ ಮಹೇಶ್ ಮಾತನಾಡಿ, ಮೃತದೇಹ ನೀಡುವಂತೆ ತಿಳಿಸಿದಾಗ ಆಸ್ಪತ್ರೆಯ ವೈದ್ಯರು ಪೂರ್ಣ ಬಿಲ್ ಪಾವತಿಸುವಂತೆ ತಿಳಿಸಿದರು, ಒಂದು ವಾರ ಕಾಲಾವಕಾಶ ಕೇಳಿದರೂ ಅವರು ಅದಕ್ಕೆ ಒಪ್ಪಲಿಲ್ಲ ಎಂದು ಹೇಳಿದ್ದಾರೆ. 

ಈ ನಡುವೆ ಆಸ್ಪತ್ರೆಯ ಮುಂದೆ ಪ್ರತಿಭಟನೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಧಾವಿಸಿತ ಉಪ ಆಯುಕ್ತ ಪಿ.ಸುನಿಲ್ ಕುಮಾರ್ ಅವರು. ಪ್ರತಿಭಟನಾನಿರತ ಕುಟುಂಬಸ್ಥರ ಮನವೊಲಿಸುವಲ್ಲಿ ಯಶಸ್ವಿಯಾದರು. ಇಂತಹ ಪರಿಸ್ಥಿತಿ ನಿಯಂತ್ರಿಸುವಂತೆ ಖಾಸಗಿ ಆಸ್ಪತ್ರೆಗಳಿಗೆ ಎಚ್ಚರಿಕೆಗಳನ್ನು ನೀಡಲಾಗುತ್ತದೆ. ಕುಟುಂಬಸ್ಥರು ಆಸ್ಪತ್ರೆ ವಿರುದ್ಧ ದೂರು ದಾಖಲಿಸುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ನಾನು ಸ್ವತಃ ತನಿಖೆ ನಡೆಸುತ್ತೇನೆ. ವೈದ್ಯರು ತಪ್ಪು ಮಾಡಿರುವುದು ಕಂಡಿ ಬಂದಿದ್ದೇ ಆದರೆ, ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com