ಸ್ಯಾಂಡಲ್'ವುಡ್ ಡ್ರಗ್ಸ್ ಕೇಸ್: ಆರೋಪಿಗಳು ಸಾಕ್ಷ್ಯಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ, ಜಾಮೀನು ನೀಡಲು ಕೋರ್ಟ್ ನಿರಾಕರಣೆ
ಸ್ಯಾಂಡಲ್'ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಆರೋಪಿಗಳ ವಿರುದ್ಧ ಅಧಿಕಾರಿಗಳು ಬಲವಾದ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿದ್ದು, ಈ ಹಂತದಲ್ಲಿ ಆರೋಪಿಗಳಿಗೆ ಜಾಮೀನು ನೀಡುವುದರಿಂದ ಸಾಕ್ಷ್ಯಾಧಾರಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿದ್ದು ಜಾಮೀನು ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ತಿಳಿಸಿದೆ ಎಂದು ತಿಳಿದುಬಂದಿದೆ.
Published: 30th September 2020 08:27 AM | Last Updated: 30th September 2020 12:43 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಸ್ಯಾಂಡಲ್'ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಆರೋಪಿಗಳ ವಿರುದ್ಧ ಅಧಿಕಾರಿಗಳು ಬಲವಾದ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿದ್ದು, ಈ ಹಂತದಲ್ಲಿ ಆರೋಪಿಗಳಿಗೆ ಜಾಮೀನು ನೀಡುವುದರಿಂದ ಸಾಕ್ಷ್ಯಾಧಾರಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿದ್ದು ಜಾಮೀನು ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ತಿಳಿಸಿದೆ ಎಂದು ತಿಳಿದುಬಂದಿದೆ.
2ನೇ ಆರೋಪಿ ರಾಗಿಣಿ, 14ನೇ ಆರೋಪಿ ಸಂಜನಾ ಹಾಗೂ 11ನೇ ಆರೋಪಿ ರಾಹುಲ್ ಸಲ್ಲಿಸಿದ್ದ ಜಾಮೀನು ಅರ್ಜಿ, ತಲೆಮರೆಸಿಕೊಂಡಿರುವ ಮೊದಲ ಆರೋಪಿ ಶಿವಪ್ರಕಾಶ್ ಮತ್ತು 12ನೇ ಆರೋಪಿ ವಿನಯ್ ಸಲ್ಲಿಸಿದ್ದ ನಿರೀಕ್ಷಣಾ ಅರ್ಜಿಗಳ ವಿಚಾರಣೆಯನ್ನು ಕಳೆದ ಸೆ.25ಕ್ಕೆ ಪೂರ್ಣಗೊಳಿಸಿದ್ದ ವಿಶೇಷ ನ್ಯಾಯಾಲಯ ಸೋಮವಾರಕ್ಕೆ ತೀರ್ಪು ಕಾಯ್ದಿರಿಸಿತು. ಸೋಮವಾರ ಸಂಜೆ ಎಳ್ಲಾ ಆರೋಪಿಗಳ ಅರ್ಜಿಗಳನ್ನು ವಜಾಗೊಳಿಸಿ ತೀರ್ಪು ಪ್ರಕಟಿಸಿತು.
ಸಿಸಿಬಿ ಪೊಲೀಸರು ಈ ವರೆಗೂ ನಡೆಸಿರುವ ತನಿಖೆಯಲ್ಲಿ ಆರೋಪಿಗಳ ವಿರುದ್ಧ ಬಲವಾದ ಸಾಕ್ಷ್ಯೆಗಳು ಲಭ್ಯವಾಗಿವೆ. ಪ್ರಕರಣದ ತನಿಖೆ ಇನ್ನೂ ನಡೆಯುತ್ತಿದೆ. ಈ ಹಂತದಲ್ಲಿ ಆರೋಪಿಗಳಿಗೆ ಜಾಮೀನು ನೀಡಿದರೆ ಮುಂದಿನ ತನಿಖೆಗೆ ಅಡ್ಡಿಯುಂಟಾಗುವ ಸಾಧ್ಯತೆಯಿದೆ. ಸಾಕ್ಷ್ಯಾಧಾರಗಳನ್ನು ನಾಶಪಡಿಸುವ ಹಾಗೂ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಪ್ರಯತ್ನ ಮಾಡಬಹುದು ಎಂಬ ಸಿಸಿಬಿ ಪೊಲೀಸರ ಆಂತಕವನ್ನು ತಳ್ಳಿಹಾಕುವಂತಿಲ್ಲ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.
ಇದೇ ವೇಳೆ ಪ್ರಕರಣದ ಇಇತರೆ ಆರೋಪಿಗಳಾದ ವೀರೇನ್ ಖನ್ನಾ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ಅ.2ಕ್ಕೆ ಮತ್ತು ರವಿಶಂಕರ್, ಪ್ರಶಾಂತ್, ರಂಕಾ, ವೈಭವ್ ಜೈನ್ ಮತ್ತು ಪ್ರತೀಕ್ ಶೆಟ್ಟಿ ಅವರ ಜಾಮೀನು ಅರ್ಜಿಗಳ ವಿಚಾರಣೆಯನ್ನು ಸೆ.30ಕ್ಕೆ ಮುಂದೂಡಲಾಗಿದೆ.