ಬೆಂಗಳೂರು: ಸರ್ಕಾರ ನೀಡಿದ್ದ ಗಡುವು ಮುಗಿದರೂ ಮುಷ್ಕರ ಮುಂದುವರೆದ ಹಿನ್ನೆಲೆಯಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳಿಗೆ ಈ ವರೆಗೆ ಒಟ್ಟು ರೂ.152 ಕೋಟಿ ಆದಾಯ ನಷ್ಟವುಂಟಾಗಿದೆ.
ನಾಲ್ಕೂ ನಿಗಮಗಳಿಂದ ಪ್ರದಿನ ಪ್ರಯಾಣ ಟಿಕೆಟ್ ನಿಂದ ರೂ.19 ಕೋಟಿಗೂ ಹೆಚ್ಚಿನ ಆದಾಯ ಬರುತ್ತದೆ. ಆದರೆ, ಮುಷ್ಕರ ಆರಂಭವಾದಾಗಿನಿಂದ ಬಸ್ಸುಗಳ ಓಡಾಟ ಸ್ತಬ್ಧವಾಗಿರುವುದರಿಂದ ನಿತ್ಯ ಆದಾಯ ಖೋತಾ ಆಗುತ್ತಿದೆ. ಕಳೆದ 8 ದಿನಗಳಿಂದ ನಾಲ್ಕೂ ನಿಗಮಗಳಿಗೆ ಒಟ್ಟಾರೆ ರೂ.152 ಕೋಟಿ ಆದಾಯ ನಷ್ಟವಾಗಿದೆ.
ಈ ಪೈಕಿ ಕೆಎಸ್ಆರ್'ಟಿಸಿಗೆ ರೂ.70 ಕೋಟಿ, ಬಿಎಂಟಿಸಿಗೆ ರೂ.20 ಕೋಟಿ, ಈಶಾನ್ಯ ಕರ್ನಾಟಕ ಸಾರಿಗೆ ನಿಗಮಕ್ಕೆ ರೂ.30.5 ಕೋಟಿ ನಷ್ಟವಾಗಿದೆ ಎಂದು ತಿಳಿದುಬಂದಿದೆ.
ಮುಷ್ಕರದಿಂದಾಗಿ 35 ಬಸ್ ಗಳು ಹಾನಿಗೊಳಗಾಗಿದೆ. ಇದರಲ್ಲಿ ಅಂಬಾರಿ ಡ್ರೀಮ್ ಕ್ಲಾಸ್, ವೋಲ್ವೋ ಮತ್ತು ಐರಾವತ ಕ್ಲಬ್ ಕ್ಲಾಸ್ (ಮಲ್ಟಿ ಆಕ್ಸಲ್) ಬಸ್ಸುಗಳೂ ಕೂಡ ಇವೆ. ಮುಷ್ಕರದ ನಡುವಲ್ಲೂ ನಾಲ್ಕು ನಿಗಮಗಳಲ್ಲಿ ಒಟ್ಟು 3,402 ಬಸ್‌ಗಳು ಕಾರ್ಯನಿರ್ವಹಿಸಿವೆ. ಒಟ್ಟಾರೆಯಾಗಿ, ಕೆಎಸ್‌ಆರ್‌ಟಿಸಿಗೆ 5,551 ಖಾಸಗಿ ಬಸ್‌ಗಳು, ಎನ್‌ಡಬ್ಲ್ಯೂಕೆಆರ್‌ಟಿಸಿಗೆ 1,912, ಬಿಎಂಟಿಸಿ 1,912 ಮತ್ತು ಎನ್‌ಇಕೆಆರ್‌ಟಿಸಿಗೆ 3,867 ಖಾಸಗಿ ಬಸ್‌ಗಳು ಕಾರ್ಯನಿರ್ವಹಿಸಿವೆ ಎಂದು ಸಾರಿಗೆ ಇಲಾಖೆ ಮಾಹಿತಿ ನೀಡಿದೆ.
ಈ ನಡುವೆ ಪ್ರತಿಕ್ರಿಯೆ ನೀಡಿರುವ ಸಾರಿಗೆ ಸಚಿವ ಲಕ್ಷ್ಮಣ್ ಸವದಿಯವರು, ಕಳೆದ 7 ದಿನಗಳಿಂದ ಮುಷ್ಕರ ನಿರತ ನೌಕರರೊಂದಿಗೆ ಮಾತುಕತೆ ನಡೆಸಿ ಮನವೊಲಿಸಲು ಸರ್ಕಾರ ಸತತ ಯತ್ನ ನಡೆಸುತ್ತಲೇ ಇದೆ. ಕೆಲ ನೌಕರರು ಈಗಾಗಲೇ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಆದರೆ, ಇನ್ನೂ ಕೆಲವರ ಮನಸ್ಸು ಪರಿವರ್ತನೆಗೊಂಡಿಲ್ಲ. ತೀವ್ರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಬಸ್ಸುಗಳೆಂದರೆ ಸಾರಿಗೆ ವ್ಯವಸ್ಥೆಯ ಆತ್ಮಗಳಿದ್ದಂತೆ. ಈ ಬಸ್ಸುಗಳಿಂದಲೇ ನಮ್ಮ ಲಕ್ಷಾಂತರ ಸಾರಿಗೆ ನೌಕರರ ಬದುಕಿನ ರಥವೂ ಸಾಗುತ್ತದೆ ಎಂಬುದನ್ನು ನಮ್ಮ ನೌಕರರು ಅರ್ಥಮಾಡಿಕೊಳ್ಳಬೇಕು. ಹಿಂಸೆಯಿಂದ ಏನನ್ನೂ ಸಾಧಿಸಲಾಗುವುದಿಲ್ಲ. ಬಸ್ಸುಗಳಿಗೆ ಅಥವಾ ಬಸ್ ನಿಲ್ದಾಣಗಳಿಗೆ ಹಾನಿಗೊಳಿಸಿದರೆ ನಮ್ಮ ನೌಕರರು ತಮ್ಮ ತಲೆಯ ಮೇಲೆ ತಾವೇ ಕಲ್ಲು ಹಾಕಿ ಕೊಂಡಂತಾಗುತ್ತದೆ. ಇಂಥವರ ವಿರುದ್ಧ ಕಾನೂನು ತನ್ನದೇ ಆದ ರೀತಿಯಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
Advertisement