
ಬೆಂಗಳೂರು: ಬೆಂಗಳೂರಿನ ಸೆಂಟ್ರಲ್ ಕ್ರೈಂ ಬ್ರಾಂಚ್ ಶುಕ್ರವಾರ ನೈಜೀರಿಯನ್ ಪ್ರಜೆ ಸೇರಿದಂತೆ ಐವರು ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿದ್ದು, ಆರೋಪಿಗಳಿಂದ ಆರು ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ನಗರದ ಹೆಣ್ಣೂರಿನಲ್ಲಿರುವ ಅಪಾರ್ಟ್ಮೆಂಟ್ ಮೇಲೆ ದಾಳಿ ನಡೆಸಿ ಮಾದಕ ದ್ರವ್ಯ ಮಾರಾಟಗಾರರನ್ನು ಹಿಡಿದು ಅವರ ಬಳಿಯಿದ್ದ ಹಾಶಿಶ್ ಎಣ್ಣೆ, ಗಾಂಜಾ, ಚರಸ್ ಮತ್ತು ಹೈಡ್ರೋ ಸಸಿಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ಬಳಿ ಇದ್ದ ಕಾರು, ಬೈಕ್ ಮತ್ತು ಮೊಬೈಲ್ ಫೋನ್ ಗಳನ್ನು ಸಹ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಪೊಲೀಸರ ಪ್ರಕಾರ, ಬಂಧಿತರಲ್ಲಿ ಒಬ್ಬನಾದ ನಬರನ್ ಚಕ್ಮಾ ಅಸ್ಸಾಂ ಮೂಲದವನಾಗಿದ್ದು, ಕಳೆದ ಮೂರು ವರ್ಷಗಳಿಂದ ನಗರದ ಪ್ರಮುಖ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಮತ್ತು ಸಾಫ್ಟ್‌ವೇರ್ ಎಂಜಿನಿಯರ್‌ಗಳಿಗೆ ಮಾದಕವಸ್ತುಗಳನ್ನು ಮಾರಾಟ ಮಾಡುತ್ತಿದ್ದ.
ಕಳೆದ ವರ್ಷ, ನಗರದ ರಾಮಮೂರ್ತಿನಗರದ ಮನೆಯ ಮೇಲೆ ಪೊಲೀಸರು ದಾಳಿ ಮಾಡಿದಾಗ, ಚಕ್ಮಾ ಪೊಲೀಸರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ. ಆದರೆ ಆತನ ಸಹಚರ ಸಿಂಟೋ ಥಾಮಸ್ ನನ್ನು ಬಂಧಿಸಲಾಗಿತ್ತು.
ಕಳೆದ ಒಂದು ವರ್ಷದಲ್ಲಿ ಚಕ್ಮಾ ತನ್ನ ಡ್ರಗ್ಸ್ ರಾಕೆಟ್ ಅನ್ನು ಹೆಚ್ಚಿಸಿಕೊಂಡಿದ್ದಾನೆ ಮತ್ತು ಆತನ ಸಹಚರರ ಮೂಲಕ ಮಾದಕವಸ್ತುಗಳನ್ನು ಮಾರಾಟ ಮಾಡುತ್ತಿದ್ದಾನೆಂಬುದು ನಮಗೆ ತಿಳಿದಿತ್ತು" ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇನ್ನೊಂದು ಕಾರ್ಯಾಚರಣೆಯಲ್ಲಿ, ನೈಜೀರಿಯಾದ ಅಬೂಜಾದ ಒನ್ಯೇಕಾ ಎಮ್ಯಾನುಯೆಲ್ ಜೇಮ್ಸ್ (31)ನನ್ನು ಬಂಧಿಸಲಾಗಿದ್ದು, ಆತನಿಂದ ಎಕ್ಟಾಸಿ ಮಾತ್ರೆಗಳು, ಎಲ್ ಎಸ್ ಡಿ ಸ್ಟ್ರಿಪ್ ಮತ್ತು ಎಂಡಿಎಂಎ ಮಾತ್ರೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement