
ಬೆಂಗಳೂರು: ದೊಡ್ಡಬೊಮ್ಮಸಂದ್ರ ಕೆರೆ ಪ್ರದೇಶದಲ್ಲಿ ಅಕ್ರಮವಾಗಿ ಒತ್ತುವರಿ ಪಡಿಸಿಕೊಳ್ಳಲಾಗಿದ್ದ ಜಾಗವನ್ನು ಬಿಬಿಎಂಪಿ ತೆರವುಗೊಳಿಸಿ, ತನ್ನ ವಶಕ್ಕೆ ಪಡೆದುಕೊಂಡಿದೆ. ಶನಿವಾರ ತೆರವು ಕಾರ್ಯಾಚರಣೆ ನಡೆಸಿದ್ದ ಬಿಬಿಎಂಪಿ ಅಧಿಕಾರಿಗಳು 36 ಗುಂಟೆ ಭೂಪ್ರದೇಶವನ್ನು ತೆರವುಗೊಳಿಸಿರುವುದಾಗಿ ತಿಳಿದುಬಂದಿದೆ. ಯಲಹಂಕ ವಲಯಕ್ಕೆ ಸೇರುವ ದೊಡ್ಡಬೊಮ್ಮಸಂದ್ರ ಕೆರೆಯ ವಿಸ್ತೀರ್ಣ 124 ಎಕರೆಯಾಗಿದೆ.
ತೆರವು ಕಾರ್ಯಾಚರಣೆಯಲ್ಲಿ ವಶಪಡಿಸಿಕೊಳ್ಳಲಾಗಿರುವ ಭೂಮಿಯಲ್ಲಿ 12 ಗುಂಟೆ ಭೂಮಿಯನ್ನು ಉದ್ಯಾನವನ ನಿರ್ಮಾಣಕ್ಕೆ ಬಳಕೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ ಬೆಂಗಳೂರು ನಗರ ಡೆಪ್ಯುಟಿ ಕಮೀಷನರ್ ಕಚೇರಿ ಬೆಂಗಳೂರು ಉತ್ತರ, ಆನೇಕಲ್, ಬೆಂಗಳೂರು ದಕ್ಷಿಣ ಮತ್ತು ಯಲಹಂಕದಲ್ಲಿ ಒಟ್ಟು 12 ಕೆರೆ ಪ್ರದೇಶಗಳಲ್ಲಿ ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳಲಾಗಿದ್ದ 18 ಎಕರೆ 28 ಗುಂಟೆ ಭೂಪ್ರದೇಶವನ್ನು ತೆರವುಗೊಳಿಸಿ ವಶಪಡಿಸಿಕೊಂಡಿದೆ ಎಂದು ತಿಳಿದುಬಂದಿದೆ. ಯಲಹಂಕ ವಲಯದಲ್ಲಿನ 1.20 ಎಕರೆ ಗೋಮಾಳ ಪ್ರದೇಶವನ್ನೂ ಇದೇ ಸಂದರ್ಭದಲ್ಲಿ ವಶಪಡಿಸಿಕೊಂಡಿದೆ.
ಕರ್ನಾಟಕ ಉಚ್ಛನ್ಯಾಯಾಲಯ ಮತ್ತು ಲೋಕಾಯುಕ್ತ ನಿರ್ದೇಶನದ ಮೇರೆಗೆ ಬಿಬಿಎಂಪಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.
Advertisement