ರಂಗಚಟುವಟಿಕೆ ಗರಿಗೆದರುತ್ತಿದ್ದರೂ ತೆರೆಯದ ಕಲಾಕ್ಷೇತ್ರ, ಅಡ್ಡಿಯಾದರೂ ಏನು?

ಮಹಾನಗರದಲ್ಲಿ ರಂಗಚಟುವಟಿಕೆಗಳು ನಿಧಾನವಾಗಿ ಗರಿಗೆದರುತ್ತಿವೆ. ಖಾಸಗಿ ಕಲಾಮಂದಿರಗಳು ತೆರೆದಿವೆ. ನಾಟಕ ತಂಡಗಳು ತಾಲೀಮು ಶುರು ಮಾಡಿವೆ. ಪ್ರದರ್ಶನಗಳು ಆರಂಭವಾಗಿವೆ. ಆದರೆ ರವೀಂದ್ರ ಕಲಾಕ್ಷೇತ್ರ ತೆರೆಯದಿರುವುದು ಏಕೆ ಎಂಬ ಪ್ರಶ್ನೆ ಉದ್ಬವವಾಗಿದೆ.
ರವೀಂದ್ರ ಕಲಾಕ್ಷೇತ್ರ
ರವೀಂದ್ರ ಕಲಾಕ್ಷೇತ್ರ

ಬೆಂಗಳೂರು: ಮಹಾನಗರದಲ್ಲಿ ರಂಗಚಟುವಟಿಕೆಗಳು ನಿಧಾನವಾಗಿ ಗರಿಗೆದರುತ್ತಿವೆ. ಖಾಸಗಿ ಕಲಾಮಂದಿರಗಳು ತೆರೆದಿವೆ. ನಾಟಕ ತಂಡಗಳು ತಾಲೀಮು ಶುರು ಮಾಡಿವೆ. ಪ್ರದರ್ಶನಗಳು ಆರಂಭವಾಗಿವೆ. ಆದರೆ ರವೀಂದ್ರ ಕಲಾಕ್ಷೇತ್ರ ತೆರೆಯದಿರುವುದು ಏಕೆ ಎಂಬ ಪ್ರಶ್ನೆ ಉದ್ಬವವಾಗಿದೆ.

ಬೆಂಗಳೂರು ನಗರದಲ್ಲಿ ಕೊರೋನಾ ಶೇಕಡವಾರು ಪ್ರಮಾಣ ಕಡಿಮೆಯಿದೆ. ಬಹುತೇಕ ಚಟುವಟಿಕೆಗಳು ಆರಂಭವಾಗಿವೆ. ಪ್ರತಿದಿನ ರಾತ್ರಿ 9 ರಿಂದ ಬೆಳಗ್ಗಿನ ಜಾವದವರೆಗೆ ತುರ್ತು ಸಂದರ್ಭ ಹೊರತುಪಡಿಸಿ ಸಂಚಾರಕ್ಕೆ ನಿರ್ಬಂಧವಿದೆ. ಈ ಹಿನ್ನೆಲೆಯಲ್ಲಿ ಸಂಜೆ 7ಕ್ಕೆ ಮುಕ್ತಾಯವಾಗುವಂತೆ ಯೋಜನೆ ರೂಪಿಸಿಕೊಂಡು ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಿವೆ. ಈಗಾಗಲೇ ನಗರದ ಪ್ರಮುಖ ಕಲಾಮಂದಿರಗಳ ಸಾಲಿನಲ್ಲಿ ಇರುವ ರಂಗಶಂಕರ, ಎಡಿಎ ಕಲಾಮಂದಿರ, ಡಿವಿಜಿ ರಂಗಮಂದಿರಗಳಲ್ಲಿ ಕಲಾ ಪ್ರದರ್ಶನಗಳು ಆರಂಭವಾಗಿವೆ. ಇಷ್ಟಿದ್ದರೂ ರವೀಂದ್ರ ಕಲಾಕ್ಷೇತ್ರ, ನಯನ ಸಭಾಂಗಣ, ನಾಗರಬಾವಿ ಬಳಿಯ ಕಲಾಗ್ರಾಮದ ಕಲಾಮಂದಿರಗಳು ಮಾತ್ರ ಇನ್ನೂ ತೆರೆದಿಲ್ಲ.

ಇವು ಮೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸುಪರ್ದಿಯಲ್ಲಿವೆ. ಖಾಸಗಿ ರಂಗಮಂದಿರಗಳು, ಕಲಾಮಂದಿರಗಳಿಗಿಲ್ಲದ ನಿರ್ಬಂಧ ಸರ್ಕಾರಿ ಸ್ವಾಮ್ಯದ ಕಲಾಮಂದಿರಗಳಿಗಿದೆಯೇ ಎಂದು ಕಲಾವಿದರು ಪ್ರಶ್ನೆ ಮಾಡುತ್ತಾರೆ.ನಗರದಲ್ಲಿ ಹೆಸರಾಂತ ನಾಟಕ ತಂಡಗಳಿವೆ. ಇವುಗಳನ್ನು ನಿರ್ವಹಣೆ ಮಾಡುವವರ ಮೊದಲ ಆದ್ಯತೆ ರವೀಂದ್ರ ಕಲಾಕ್ಷೇತ್ರ, ಕಲಾಗ್ರಾಮದ ರಂಗಮಂದಿರ. ಇವೆರಡಲ್ಲಿ ಕಲಾಗ್ರಾಮದ ರಂಗಮಂದಿರ ಮುಚ್ಚಿ ಮೂರು ವರ್ಷಗಳಾಗಿವೆ. ಆಗ್ನಿಶಾಮಕ ವ್ಯವಸ್ಥೆ, ಒಂದಷ್ಟು ನವೀಕರಣದ ಹಿನ್ನೆಲೆಯಲ್ಲಿ ಅದನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು. ಇಷ್ಟನ್ನು ವ್ಯವಸ್ಥೆ ಮಾಡಲು ಇಷ್ಟು ಸುದೀರ್ಘ ಸಮಯದ ಅವಶ್ಯಕತೆ ಇತ್ತೆ ಎಂಬ ಪ್ರಶ್ನೆಯೂ ಎದುರಾಗಿದೆ.

ಪ್ರಮುಖವಾಗಿ ಈ ಎರಡು ರಂಗಮಂದಿರಗಳನ್ನು ಕಲಾತಂಡಗಳು ಆದ್ಯತೆ ಆಯ್ಕೆ ಮಾಡಲು ಮೊದಲ ಕಾರಣ ಇವುಗಳ ಸುವ್ಯವಸ್ಥಿತ ರಂಗವೇದಿಕೆ, ನೆರಳು-ಬೆಳಕಿನ ವ್ಯವಸ್ಥೆ. ಎರಡನೇಯದಾಗಿ ಕೈಗೆಟುಕುವ ದರದಲ್ಲಿ ಇವುಗಳ ಶುಲ್ಕವಿದೆ. ಕಲಾಗ್ರಾಮದ ರಂಗಮಂದಿರಕ್ಕೆ ಬೆಳಗ್ಗಿನ ಅವಧಿಗೆ ಮೂರುವರೆ ಸಾವಿರ ಶುಲ್ಕವಿದೆ. ಮಧ್ಯಾಹ್ನದಿಂದ ರಾತ್ರಿ 10ರವರೆಗೂ ಇಷ್ಟೇ ಶುಲ್ಕವಿದೆ. ರವೀಂದ್ರ ಕಲಾಕ್ಷೇತ್ರದಲ್ಲಿ ಬೆಳಗ್ಗಿನ ಅವಧಿಗೆ ಐದೂವರೆ ಸಾವಿರ ಶುಲ್ಕ. ಸಂಜೆ ಅವಧಿಗೂ ಇಷ್ಟೇ ಬಾಡಿಗೆಯಿದೆ.

ದುಬಾರಿಯಲ್ಲದ ಈ ಮೊತ್ತ ಕಟ್ಟಿ ಟಿಕೇಟುಗಳ ಮಾರಾಟದಿಂದ ಸಂಗ್ರಹವಾಗುವ ಒಂದಷ್ಟಾದರೂ ಮೊತ್ತ ಉಳಿಸಬಹುದು ಎಂಬ ನಿರೀಕ್ಷೆ ಸಹಜವಾಗಿ ಕಲಾತಂಡಗಳಿಗಿರುತ್ತವೆ. ಭಾರೀ ಸಂಖ್ಯೆಯಲ್ಲಿ ಪ್ರೇಕ್ಷಕರು ಸೇರಬಹುದು ಎನ್ನುವ ನಿರೀಕ್ಷೆಯಿದ್ದರೆ ರವೀಂದ್ರ ಕಲಾಕ್ಷೇತ್ರ ಕಾಯ್ದಿರಿಸುತ್ತಾರೆ. ಇದಕ್ಕಾಗಿ ಕಲಾಕ್ಷೇತ್ರ ಸಮಯಾವಧಿ ದೊರಕುವವರೆಗೂ ಕಾಯುತ್ತಾರೆ. ಸೀಮಿತ ಸಂಖ್ಯೆಯ ಪ್ರೇಕ್ಷಕರು ಸೇರುವ ನಿರೀಕ್ಷೆಯಿದ್ದರೆ ಕಲಾಗ್ರಾಮದ ರಂಗಮಂದಿರ ಕಾಯ್ದಿರಿಸುತ್ತಾರೆ. ಇವೆರಡೂ ಪ್ರಮುಖ ಕಲಾಕ್ಷೇತ್ರಗಳು ಇನ್ನೂ ತೆರೆಯದಿರುವುದು ಕಲಾವಿದರಲ್ಲಿ ಬೇಸರ ಮೂಡಿಸಿದೆ. ಈಗಾಗಲೇ ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಅವರಿಗೆ ಮನವಿ ಮಾಡಿದ್ದಾರೆ. ಶೀಘ್ರದಲ್ಲಿಯೇ ಇವೆರಡೂ ಕಲಾಮಂದಿರ ಆರಂಭವಾಗಲು ಕ್ರಮ ಕೈಗೊಳ್ಳುವುದಾಗಿ ಭರವಸೆಯೂ ದೊರೆತಿದೆ. ಆದರೆ ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

ರವೀಂದ್ರ ಕಲಾಕ್ಷೇತ್ರ, ಕಲಾಮಂದಿರದ ವ್ಯವಸ್ಥಾಪಕ ನಾಗೇಂದ್ರಸ್ವಾಮಿ ಅವರನ್ನು ಯು.ಎನ್.ಐ. ಪ್ರತಿನಿಧಿ ಮಾತನಾಡಿಸಿದಾಗ ಸರ್ಕಾರಕ್ಕೆ ಈಗಾಗಲೇ ವರದಿ ಕಳಿಸಿದ್ದೇವೆ. ಕಲಾಗ್ರಾಮದ ಕಲಾಮಂದಿರವೂ ಸಂಪೂರ್ಣ ನವೀಕೃತಗೊಂಡಿದೆ. ಸರ್ಕಾರ ಹಸಿರು ನಿಶಾನೆ ತೋರಿಸಿದ ಕೂಡಲೇ ಆರಂಭ ಮಾಡುತ್ತೇವೆ ಎಂದರು. ಬೆಂಗಳೂರಿಗರು ಸಾಂಸ್ಕೃತಿಕ ಚಟುವಟಿಕೆಗಳಿಗೆ ಬಹಳ ಪ್ರೋತ್ಸಾಹ ನೀಡುತ್ತಾರೆ. ಉತ್ತಮ ನಾಟಕ – ಜಾನಪದ – ಸುಗಮ ಸಂಗೀತ ಕಾರ್ಯಕ್ರಮಗಳು ಭಾರಿ ಯಶಸ್ವಿಯಾದ ಅಸಂಖ್ಯಾತ ಉದಾಹರಣೆಗಳಿವೆ. ನೂರಾರು, ಸಾವಿರಾರು ಪ್ರದರ್ಶನಗಳನ್ನು ಕಂಡ ನಾಟಕಗಳಿವೆ. ಈಗಾಗಲೇ ಎಲ್ಲ ಕಚೇರಿಗಳು, ವಾಣಿಜ್ಯ ಸಂಕೀರ್ಣಗಳು ಆರಂಭವಾಗಿವೆ. ಕಲಾತಂಡಗಳಿಗೆ ಕೈಗೆಟುಕುವ ದರ ಹೊಂದಿರುವ ಸರ್ಕಾರಿ ಕಲಾಕ್ಷೇತ್ರಗಳು ಆರಂಭವಾಗುವ ಅಗತ್ಯವಿದೆ.

ವಿಶೇಷ ವರದಿ: ಕುಮಾರ ರೈತ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com