ರಾಷ್ಟ್ರೀಯ ಶಿಕ್ಷಣ ನೀತಿ-2020: ಪದವಿ ಕೋರ್ಸ್ ನ ಮೊದಲ ಎರಡು ವರ್ಷ ಕನ್ನಡ ಭಾಷೆ ಕಡ್ಡಾಯ 

ರಾಷ್ಟ್ರೀಯ ಶಿಕ್ಷಣ ನೀತಿ 2020 ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಕರ್ನಾಟಕದಲ್ಲಿ ಮೊದಲ ವರ್ಷದ ಪದವಿ ತರಗತಿಯಲ್ಲಿ ಜಾರಿಗೆ ಬರುತ್ತಿದೆ. ದೇಶಾದ್ಯಂತ ಏಕರೂಪ ಶಿಕ್ಷಣ ಪದ್ಧತಿಯಿಂದ ಸ್ಥಳೀಯ ಮಾತೃಭಾಷೆಗೆ ಧಕ್ಕೆಯುಂಟಾಗುತ್ತದೆ ಎಂದು ಈ ಶಿಕ್ಷಣ ನೀತಿಯನ್ನು ವಿರೋಧಿಸುವವರು ಹೇಳುತ್ತಿದ್ದಾರೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ 2020 ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಕರ್ನಾಟಕದಲ್ಲಿ ಮೊದಲ ವರ್ಷದ ಪದವಿ ತರಗತಿಯಲ್ಲಿ ಜಾರಿಗೆ ಬರುತ್ತಿದೆ. ದೇಶಾದ್ಯಂತ ಏಕರೂಪ ಶಿಕ್ಷಣ ಪದ್ಧತಿಯಿಂದ ಸ್ಥಳೀಯ ಮಾತೃಭಾಷೆಗೆ ಧಕ್ಕೆಯುಂಟಾಗುತ್ತದೆ ಎಂದು ಈ ಶಿಕ್ಷಣ ನೀತಿಯನ್ನು ವಿರೋಧಿಸುವವರು ಹೇಳುತ್ತಿದ್ದಾರೆ. 

ಆದರೆ ಸ್ಥಳೀಯ ಮಾತೃಭಾಷೆಗೆ ಯಾವುದೇ ರೀತಿಯ ಧಕ್ಕೆಯುಂಟಾಗುವುದಿಲ್ಲ ಎಂದು ಉನ್ನತ ಶಿಕ್ಷಣ ಇಲಾಖೆ ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳು ಹೇಳುತ್ತಾರೆ. ಈ ಬಗ್ಗೆ ನಿನ್ನೆ ನಡೆದ ಮಾಧ್ಯಮ ಪ್ರತಿನಿಧಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಸಚಿವರು ಹಲವು ಸ್ಪಷ್ಟೀಕರಣ ಮತ್ತು ಸಂದೇಹಗಳಿಗೆ ಉತ್ತರಿಸಿದ್ದಾರೆ. 

ಪದವಿ ಕೋರ್ಸ್ ನ ಮೊದಲ ಎರಡು ವರ್ಷಗಳಲ್ಲಿ ವಿದ್ಯಾರ್ಥಿಗಳು ಎರಡು ಭಾಷಾ ವಿಷಯ ಕಲಿಯಲಿದ್ದು ಅದರಲ್ಲಿ ಒಂದು ಭಾಷೆ ಕನ್ನಡ ಕಡ್ಡಾಯವಾಗಿರುತ್ತದೆ. ಕನ್ನಡ ಭಾಷೆ ಗೊತ್ತಿಲ್ಲದವರಿಗೂ ಪ್ರಾಯೋಗಿಕವಾಗಿ ಹೇಳಿಕೊಡಲಾಗುತ್ತದೆ. ವಿದೇಶಿ ವಿದ್ಯಾರ್ಥಿಗಳು, ಹೊರ ರಾಜ್ಯದ ವಿದ್ಯಾರ್ಥಿಗಳು ಇದರಲ್ಲಿ ಸೇರ್ಪಡೆಯಾಗುತ್ತಾರೆ. ಕನ್ನಡ ಭಾಷೆಯ ಕಡೆಗಣನೆ ಇಲ್ಲಿ ಆಗುವುದಿಲ್ಲ ಎನ್ನುತ್ತಾರೆ.

ಪದವಿ ತರಗತಿಯ ಮೊದಲ ಎರಡು ವರ್ಷ ಅಂದರೆ ಮೊದಲ ನಾಲ್ಕು ಸೆಮಿಸ್ಟರ್ ಗಳಲ್ಲಿ ಕನ್ನಡ ಭಾಷೆ ಕೂಡ ಪಠ್ಯಕ್ರಮದಲ್ಲಿ ಸೇರ್ಪಡೆಯಾಗಿರುತ್ತದೆ. ಪ್ರಾಯೋಗಿಕ ಕನ್ನಡದಲ್ಲಿ ವಿದ್ಯಾರ್ಥಿಗಳಿಗೆ ಭಾಷೆಯನ್ನು ಮಾತನಾಡುವುದು, ಸಂವಹನ ನಡೆಸುವುದನ್ನು, ಮೂಲ ಭಾಷೆಯ ಪರಿಚಯ, ಅಕ್ಷರಾಭ್ಯಾಸವಿರುತ್ತದೆ ಎಂದು ಉನ್ನತ ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್ ಕುಮಾರ್ ಪಿ ತಿಳಿಸಿದರು.

ಇದಕ್ಕೆ ಮಾದರಿಯನ್ನು ವಿಶ್ವೇಶ್ವರಯ್ಯ ತಾಂತ್ರಿಕ ಮಹಾ ವಿದ್ಯಾಲಯದಿಂದ ಅಳವಡಿಸಿಕೊಳ್ಳಲಾಗಿದೆ.  ಅಲ್ಲಿ ಮೊದಲ ವರ್ಷದ ಎಂಜಿನಿಯರಿಂಗ್ ಕನ್ನಡೇತರ ವಿದ್ಯಾರ್ಥಿಗೆ ಪ್ರಾಯೋಗಿಕವಾಗಿ ಕನ್ನಡ ಭಾಷೆಯ ತರಬೇತಿ, ಶಿಕ್ಷಣ ನೀಡಲಾಗುತ್ತದೆ.

ಪ್ರವೇಶ ಪ್ರಕ್ರಿಯೆಯ ಬಗ್ಗೆ ವಿದ್ಯಾರ್ಥಿಗಳು ಗೊಂದಲದಲ್ಲಿದ್ದರೂ, ಈ ವರ್ಷ ಏಕೀಕೃತ ವಿಶ್ವವಿದ್ಯಾನಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ (ಯುಯುಸಿಎಂಎಸ್) ಮಾದರಿಯ ಅಡಿಯಲ್ಲಿ ಪ್ರವೇಶ ವಿಧಾನವಿರುತ್ತದೆ. ಆಯಾ ಕಾಲೇಜುಗಳ ಮೂಲಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಲು ಈ ಪ್ರಕ್ರಿಯೆಯನ್ನು ಆಫ್‌ಲೈನ್‌ನಲ್ಲಿ ತೆಗೆದುಕೊಳ್ಳಲಾಗಿದೆ. ವಿದ್ಯಾರ್ಥಿಗಳು ಎರಡು ಮುಖ್ಯ ವಿಷಯಗಳು ಮತ್ತು ಒಂದು ಮುಕ್ತ ಆಯ್ಕೆಯ ವಿಷಯವನ್ನು ಅಭ್ಯಾಸ ಮಾಡಬಹುದು ಎಂದರು.

ಬಹುಭಾಷಾ ನೀತಿಗೆ ಒತ್ತಾಯ: ನೀತಿ ಮೌಲ್ಯ ಮತ್ತು ಮಾನವೀಯ ಮತ್ತು ಸಾಂವಿಧಾನಿಕ ಮೌಲ್ಯಗಳು ಪಠ್ಯಕ್ರಮದಲ್ಲಿ ಕಡ್ಡಾಯವಾಗಿರುತ್ತವೆ. ಆರೋಗ್ಯ ಮತ್ತು ಕ್ಷೇಮ ಜೀವನ ಕೌಶಲ್ಯಗಳನ್ನು ವಿದ್ಯಾರ್ಥಿಗಳಿಗೆ ಬೋಧಿಸಲಾಗುತ್ತದೆ. ಇಂದಿನ ದಿನಗಳಲ್ಲಿ ಯುವಜನತೆ ಮಾದಕದ್ರವ್ಯ ಮತ್ತು ಸಾಮಾಜಿಕ ಮಾಧ್ಯಮಗಳ ಗೀಳು, ಚಟ ಬೆಳೆಸಿಕೊಳ್ಳುವುದರಿಂದ ದೂರವುಳಿಯಲು ಮೌಲ್ಯಾಧಾರಿತ ಶಿಕ್ಷಣ ಸಹಾಯ ಮಾಡಲಿದೆ. ಬಹುಭಾಷೆಯನ್ನು ಪಠ್ಯಕ್ರಮದ ಅಡಿಯಲ್ಲಿ ಪ್ರಚಾರ ಮಾಡಲಾಗುತ್ತದೆ, ಇಲ್ಲಿ ಸ್ಥಳೀಯ ಭಾಷೆ,ಸಂಸ್ಕೃತಿ, ಕಲೆಗೆ ಆದ್ಯತೆ ನೀಡಲಾಗುತ್ತದೆ ಎಂದು ಆಯುಕ್ತ ಪ್ರದೀಪ್ ಕುಮಾರ್ ವಿವರಿಸಿದರು.

ಅಂಗನವಾಡಿ ಶಿಕ್ಷಣದಿಂದ ಹಿಡಿದು ಪ್ರಾಥಮಿಕ, ಪ್ರೌಢ ಮತ್ತು ಪದವಿ ಹಂತದ ತರಗತಿಗಳಿಗೆ ಪಠ್ಯಕ್ರಮದಲ್ಲಿ ಪರಸ್ಪರ ಸಹಕಾರವಿರುತ್ತದೆ. ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳ ಪಠ್ಯಕ್ರಮವು ರಾಷ್ಟ್ರೀಯ ಕೌಶಲ್ಯ ಅರ್ಹತಾ ಚೌಕಟ್ಟಿನ (NSQF) ಹಂತ 5 ರೊಂದಿಗೆ ಜೋಡಿಸಲ್ಪಡುತ್ತದೆ, ಇದರಲ್ಲಿ ವಿದ್ಯಾರ್ಥಿಗಳು ಆ ಮಟ್ಟದಲ್ಲಿ ಎಲ್ಲಾ ಕೌಶಲ್ಯಗಳನ್ನು ಹೊಂದಿರುತ್ತಾರೆ.

ಕರಡು ಶಾಸನ ಪ್ರಕ್ರಿಯೆ ಹಂತದಲ್ಲಿ: ಪ್ರಸಕ್ತ ಆಡಳಿತವಿರುವ ಸರ್ಕಾರ ಈ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದೆ. ಮುಂದಿನ ಬಾರಿ ಚುನಾವಣೆಯಲ್ಲಿ ವಿರೋಧ ಪಕ್ಷ ಅಧಿಕಾರಕ್ಕೆ ಬಂದರೆ ಈಗಿರುವ ಶಿಕ್ಷಣ ನೀತಿಯ ಗತಿಯೇನು ಎಂದು ಕೇಳಿದಾಗ ಸಚಿವ ಅಶ್ವಥ ನಾರಾಯಣ ಪ್ರತಿಕ್ರಿಯಿಸಿದರು. ನಾಲ್ಕು ವಿಧಾನಗಳಲ್ಲಿ ಶಿಕ್ಷಣ ನೀತಿ ಅನುಷ್ಠಾನಕ್ಕಾಗಿ ಕರಡು ಶಾಸನವು ಸಿದ್ಧವಾಗುತ್ತಿದೆ, ಇದರಲ್ಲಿ ಶಾಸನ ಮತ್ತು ಅನುದಾನವೂ ಸೇರಿದೆ. ಆದಾಗ್ಯೂ, ಕೇಂದ್ರ ಸರ್ಕಾರದ  ಶಾಸನವನ್ನು ಸಹ ಕಾಯಲಾಗುತ್ತಿದೆ, ಅದರ ಆಧಾರದ ಮೇಲೆ ರಾಜ್ಯ ಶಾಸನವನ್ನು ರಚಿಸಲಾಗುವುದು. ವಿಶ್ವವಿದ್ಯಾನಿಲಯಗಳು ನಿಯಮಗಳ ಮೂಲಕ ಶೈಕ್ಷಣಿಕ ಬದಲಾವಣೆಗಳನ್ನು ಮಾಡಬಹುದು ಎಂದು ಪ್ರದೀಪ್ ಹೇಳಿದರು.

ವರ್ಷಾಂತ್ಯಕ್ಕೆ ಎಲ್ಲಾ ತರಗತಿಗಳು ಸ್ಮಾರ್ಟ್ ಕ್ಲಾಸ್: ಡಿಜಿಟಲ್ ಅಂತರವನ್ನು ನಿವಾರಿಸಲು, ರಾಜ್ಯದ ಉನ್ನತ ಶಿಕ್ಷಣ ಇಲಾಖೆಯು ಈ ವರ್ಷದ ಅಂತ್ಯದ ವೇಳೆಗೆ ಶೇಕಡಾ 100ರಷ್ಟು ಸ್ಮಾರ್ಟ್ ಕ್ಲಾಸ್ ರೂಂ ತರಗತಿಗಳ ಸ್ಥಾಪನೆಗೆ ಮುಂದಾಗಿದೆ.

ಈಗಾಗಲೇ, ರಾಜ್ಯದ 9 ಸಾವಿರ ಕ್ಲಾಸ್ ರೂಂಗಳಲ್ಲಿ ಎರಡೂವರೆ ಸಾವಿರ ತರಗತಿಗಳನ್ನು ಹೈಟೆಕ್ ಮಾಡಲಾಗಿದೆ. ಸ್ಮಾರ್ಟ್ ತರಗತಿಗಳ ಸ್ಥಾಪನೆಗೆ ಧನಸಹಾಯಕ್ಕಾಗಿ ಸರ್ಕಾರದೊಂದಿಗೆ ಮಾತುಕತೆ ನಡೆಯುತ್ತಿದೆ ಎಂದರು. ವಿದ್ಯಾರ್ಥಿಗಳಿಗೆ ಅದರಲ್ಲೂ ಗ್ರಾಮಾಂತರ ಪ್ರದೇಶಗಳ ಮಕ್ಕಳಿಗೆ ಗ್ಯಾಜೆಟ್‌ಗಳನ್ನು ಒದಗಿಸಲಾಗುತ್ತಿದ್ದು, ಇಂಟರ್ನೆಟ್ ಸೌಲಭ್ಯವನ್ನು ನೀಡಲು ಸಂಸ್ಥೆಗಳನ್ನು ಕೋರಲಾಗಿದೆ ಎಂದು ಸಚಿವರು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com