ಮೈಸೂರು ಗ್ಯಾಂಗ್ ರೇಪ್: ಆರೋಪಿಗಳ ಬಂಧನಕ್ಕೆ ಪೊಲೀಸರಿಗೆ ಸುಳಿವು ನೀಡಿದ ಬಸ್ ಟಿಕೆಟ್, ಮೊಬೈಲ್ ರೆಕಾರ್ಡ್ಸ್

ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಕಳೆದ ಆಗಸ್ಟ್ 24ರಂದು ಸಾಯಂಕಾಲ ನಡೆದ ಕಾಲೇಜು ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿರುವ ವಿಶೇಷ ತನಿಖಾ ತಂಡಕ್ಕೆ ನೆರವಾಗಿದ್ದು ಆರೋಪಿಗಳು ಮಾಡಿದ್ದ ಫೋನ್ ಕರೆಗಳು ಮತ್ತು ಬಸ್ ಟಿಕೆಟ್.
ಗ್ಯಾಂಗ್ ರೇಪ್ ನಡೆದ ಸ್ಥಳದಲ್ಲಿ ಪೊಲೀಸರಿಂದ ಪರಿಶೀಲನೆ
ಗ್ಯಾಂಗ್ ರೇಪ್ ನಡೆದ ಸ್ಥಳದಲ್ಲಿ ಪೊಲೀಸರಿಂದ ಪರಿಶೀಲನೆ

ಮೈಸೂರು: ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಕಳೆದ ಆಗಸ್ಟ್ 24ರಂದು ಸಾಯಂಕಾಲ ನಡೆದ ಕಾಲೇಜು ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿರುವ ವಿಶೇಷ ತನಿಖಾ ತಂಡಕ್ಕೆ ನೆರವಾಗಿದ್ದು ಆರೋಪಿಗಳು ಮಾಡಿದ್ದ ಫೋನ್ ಕರೆಗಳು ಮತ್ತು ಬಸ್ ಟಿಕೆಟ್.

ತಮಿಳು ನಾಡಿನ ತಿರುಪುರ್ ಮೂಲದವರಾದ ಬಂಧಿತ ಐವರು ಕೂಲಿ ಕಾರ್ಮಿಕರು ತಮಿಳು ನಾಡಿನ ತಲವಾಡಿಯಿಂದ ಮೈಸೂರಿಗೆ ಚಾಮರಾಜನಗರ ಮೂಲಕವಾಗಿ ಬಸ್ ನಲ್ಲಿ ಟಿಕೆಟ್ ಖರೀದಿಸಿ ಪ್ರಯಾಣ ಮಾಡಿಕೊಂಡು ಬಂದಿದ್ದರು.

ವಿಶೇಷ ತನಿಖಾ ತಂಡ 32 ವಿಧದ ಸಾಕ್ಷಿಗಳನ್ನು ವಶಪಡಿಸಿಕೊಂಡಿತ್ತು. ಅವುಗಳಲ್ಲಿ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಲಲಿತಾದ್ರಿಪುರದಲ್ಲಿ ಕುಕೃತ್ಯ ನಡೆದ ಸ್ಥಳದಲ್ಲಿ ಬಸ್ ಟಿಕೆಟ್ ಸಿಕ್ಕಿದೆ. ಪೊಲೀಸರು ಲಲಿತಾದ್ರಿಪುರ ಸುತ್ತಮುತ್ತಲಿನ ಮೂರು ಮೊಬೈಲ್ ಟವರ್ ಗಳಿಂದ ಸಾವಿರಕ್ಕೂ ಹೆಚ್ಚು ಮೊಬೈಲ್ ಕರೆಗಳನ್ನು ಪರಿಶೀಲಿಸಿದ್ದಾರೆ. ಒಂದು ಮೊಬೈಲ್ ನಲ್ಲಿ ಕರೆಗಳು ತಲವಾಡಿ, ಲಲಿತಾದ್ರಿಪುರ ಮತ್ತು ಎಪಿಎಂಸಿ ಟವರ್ ಗಳಲ್ಲಿ ದಾಖಲಾಗಿತ್ತು.

ಮೊಬೈಲ್ ಟವರ್ ಮೂಲಕ ನೋಡಿದಾಗ ಮತ್ತೊಬ್ಬ ಆರೋಪಿ ತಮಿಳು ನಾಡಿನ ತಿರುಪ್ಪುರ್ ನಲ್ಲಿ ಇರುವುದು ತಿಳಿದುಬಂತು. ಕೂಡಲೇ ಅಲ್ಲಿಗೆ ಪೊಲೀಸರು ಹೋಗಿ ಐವರನ್ನೂ ನಿನ್ನೆ ಬಂಧಿಸಿ ಮೈಸೂರಿಗೆ ಕರೆತಂದಿದ್ದಾರೆ.

ಅತ್ಯಾಚಾರ ನಡೆಸಿದ ದಿನ ಆರೋಪಿಗಳು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಪಾನಮತ್ತರಾಗಿದ್ದರು. ಅಲ್ಲಿ ಯುವತಿ ಮತ್ತು ಯುವಕ ನಿರ್ಜನ ಪ್ರದೇಶದಲ್ಲಿ ಬೈಕ್ ನಲ್ಲಿ ಬಂದು ವಾಹನವನ್ನು ನಿಲ್ಲಿಸಿ ಅಲ್ಲೇ ಅಡ್ಡಾಡುತ್ತಿರುವುದನ್ನು ಕಂಡರು. ಆರಂಭದಲ್ಲಿ ಯುವಕನ ಮೇಲೆ ಹಲ್ಲೆ ಮಾಡಿ ಯುವತಿಯನ್ನು ಪೊದೆಯೊಳಗೆ ಎಳೆದೊಯ್ದು ಅತ್ಯಾಚಾರ ನಡೆಸಿದ್ದಾರೆ. ಯುವಕ-ಯುವತಿಯನ್ನು ಬಿಟ್ಟು ಹೋಗುವ ಹೊತ್ತಿಗೆ ಇಡೀ ಕೃತ್ಯವನ್ನು ವಿಡಿಯೊ ರೆಕಾರ್ಡ್ ಮಾಡಿದ್ದು ನೀವು ಪೊಲೀಸರಿಗೆ ಹೋಗಿ ದೂರು ನೀಡಿದರೆ ವಿಡಿಯೊ ಹೊರಬಿಡುವುದಾಗಿ ಬೆದರಿಕೆ ಹಾಕಿದ್ದರು.

ಗಾಯಗೊಂಡ ಯುವಕ ತನ್ನ ಪೋಷಕರಿಗೆ ಕರೆ ಮಾಡಿದ್ದಾನೆ. ಕೂಡಲೇ ಅವರು ಸ್ಥಳಕ್ಕೆ ಕಾರಿನಲ್ಲಿ ಬಂದು ಮಗ ಮತ್ತು ಆತನ ಸ್ನೇಹಿತೆಯನ್ನು ಕರೆದುಕೊಂಡು ಬಂದು ಕೇಸು ದಾಖಲಿಸಿದರು. ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಿದರು.

ಈ ಮಧ್ಯೆ ಪೊಲೀಸರು ಈಗ 6ನೇ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದು ಆತನ ಮೊಬೈಲ್ ಲೊಕೇಶನ್ ಗೆ ಹುಡುಕಾಟ ನಡೆಸುತ್ತಿದ್ದಾರೆ. ಮೊಬೈಲ್ ಟವರ್ ನಲ್ಲಿ ಪತ್ತೆ ಮಾಡುತ್ತಿರುವಾಗ ಆತನೂ ಕೂಡ ತಿರುಪುರ್ ನಲ್ಲಿ ಇರುವುದು ಗೊತ್ತಾಗುತ್ತಿದೆ.

ಆರೋಪಿಗಳು ತಾವು ನಡೆಸಿದ ಪೈಶಾಚಿಕ ಕೃತ್ಯವನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದರೇ ಎಂಬುದಕ್ಕೆ ದಾಖಲೆಗಳಿಲ್ಲ ಎಂದು ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com