ಮಂಗಳೂರು: ದಿವಂಗತ ಸಿಡಿಎಸ್ ಜನರಲ್ ಬಿಪಿನ್ ರಾವತ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ವಿವಾದಾತ್ಮಕ ಫೋಸ್ಟ್ ಹಾಕಿದ್ದ ಇಬ್ಬರ ವಿರುದ್ಧ ಮಂಗಳೂರು ನಗರ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.
ಫೇಸ್ ಬುಕ್ ಬಳಕೆದಾರರಾದ ವಸಂತ್ ಕುಮಾರ್ ಟಿಕೆ ಮತ್ತು ಶ್ರೀನಿವಾಸ್ ಕಾರ್ಕಳ ಎಂಬವರ ಖಾತೆಯಲ್ಲಿ ವಿವಾದಾತ್ಮಕ ಮತ್ತು ಪ್ರಚೋದನಕಾರಿ ಫೋಸ್ಟ್ ಕಂಡುಬಂದಿದೆ.
ಈ ಸಂಬಂಧ ಸುಶಾಂತ್ ಪೂಜಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇಬ್ಬರ ಫೇಸ್ ಬುಕ್ ವಾಲ್ ನಲ್ಲಿ ದಿವಂಗತ ಸಿಡಿಎಸ್ ಸಾವನ್ನು ಸಂಭ್ರಮಿಸಲಾಗಿತ್ತು ಅಲ್ಲದೇ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸಾವು ನಿರೀಕ್ಷಿತ ಎಂಬುದಾಗಿ ಅಫ್ ಲೋಡ್ ಮಾಡಲಾಗಿತ್ತು ಎಂದು ದೂರುದಾರರು ಹೇಳಿದ್ದಾರೆ.
ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 505 (1) (ಬಿ) (ಯಾವುದೇ ವರ್ಗ ಅಥವಾ ಸಮುದಾಯದ ವ್ಯಕ್ತಿ ಇತರ ಯಾವುದೇ ವರ್ಗ ಅಥವಾ ಸಮುದಾಯದ ವಿರುದ್ಧ ಅಪರಾಧದಲ್ಲಿ ತೊಡಗಿರುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಫೇಸ್ ಬುಕ್ ಅಕೌಂಟ್ ನಕಲಿಯೇ ಅಥವಾ ನೈಜವೇ ಮತ್ತು ಎಲ್ಲಿಂದ ಈ ಫೋಸ್ಟ್ ಗಳನ್ನು ಮಾಡಲಾಗಿದೆ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್, ಶಶಿಕುಮಾರ್ ಶನಿವಾರ ಸುದ್ದಿಗಾರರಿಗೆ ತಿಳಿಸಿದರು.
Advertisement