ಪದವಿ ಪೂರ್ವ ಕಾಲೇಜುಗಳಲ್ಲಿ ಸೂರ್ಯ ನಮಸ್ಕಾರ ಕಾರ್ಯಕ್ರಮ: ಕೇಂದ್ರ ಸರ್ಕಾರ ಸೂಚನೆ

ರಾಜ್ಯದ ಎಲ್ಲ ಪದವಿ ಪೂರ್ವ ಕಾಲೇಜುಗಳಲ್ಲಿ ಜ. 1ರಿಂದ ಫೆ. 7ರವರೆಗೆ ‘ಸೂರ್ಯ ನಮಸ್ಕಾರ’ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಸೂಚಿಸಿದೆ ಎನ್ನಲಾಗಿದೆ. 
ಸೂರ್ಯ ನಮಸ್ಕಾರ (ಸಂಗ್ರಹ ಚಿತ್ರ)
ಸೂರ್ಯ ನಮಸ್ಕಾರ (ಸಂಗ್ರಹ ಚಿತ್ರ)
Updated on

ಬೆಂಗಳೂರು: ರಾಜ್ಯದ ಎಲ್ಲ ಪದವಿ ಪೂರ್ವ ಕಾಲೇಜುಗಳಲ್ಲಿ ಜ. 1ರಿಂದ ಫೆ. 7ರವರೆಗೆ ‘ಸೂರ್ಯ ನಮಸ್ಕಾರ’ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಸೂಚಿಸಿದೆ ಎನ್ನಲಾಗಿದೆ. 

75ನೇ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ‘ಸೂರ್ಯ ನಮಸ್ಕಾರ‘ ಕಾರ್ಯಕ್ರಮ ಆಯೋಜಿಸುವಂತೆ ಕೇಂದ್ರ ಶಿಕ್ಷಣ ಸಚಿವಾಲಯ ಎಲ್ಲ ರಾಜ್ಯಗಳ ಶಿಕ್ಷಣ ಇಲಾಖೆಗಳ ಮುಖ್ಯಸ್ಥರಿಗೆ ಡಿ.16 ರಂದು ಪತ್ರ ಬರೆದು ಸೂಚಿಸಿತ್ತು. ಅದರಂತೆ, ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಎಲ್ಲ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಬಳಿಕ ಕಾರ್ಯಕ್ರಮದ ಕ್ರೋಡೀಕೃತ ಮಾಹಿತಿಯನ್ನು ಇಲಾಖೆಯ ಶೈಕ್ಷಣಿಕ ಶಾಖೆಗೆ ಸಲ್ಲಿಸಬೇಕು ಎಂದು ಎಲ್ಲ ಜಿಲ್ಲಾ ಉಪ ನಿರ್ದೇಶಕರಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು (ಶೈಕ್ಷಣಿಕ) ತಿಳಿಸಿದ್ದಾರೆ.

ರಾಜ್ಯದ ಎಲ್ಲ ಪದವಿ ಪೂರ್ವ ಕಾಲೇಜುಗಳಲ್ಲಿ ಜ. 1ರಿಂದ ಫೆ. 7ರವರೆಗೆ ‘ಸೂರ್ಯ ನಮಸ್ಕಾರ’ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಸೂಚಿಸಿದೆ. ಅಲ್ಲದೆ, ಜ 26ರಂದು ‘ಸಂಗೀತ ದೊಂದಿಗೆ ಸೂರ್ಯ ನಮಸ್ಕಾರ’ (ಮ್ಯೂಸಿಕಲ್‌ ಪರ್ಫಾರ್ಮೆನ್ಸ್‌ ಆನ್‌ ಸೂರ್ಯ ನಮಸ್ಕಾರ) ಆಯೋಜಿಸ ಬೇಕು ಎಂದೂ ತಿಳಿಸಿದೆ.

‘ಸೂರ್ಯ ನಮಸ್ಕಾರವುಯೋಗಾಸನದ 10 ಭಂಗಿಗಳನ್ನು ಒಳಗೊಂಡಿದ್ದು, ವಿದ್ಯಾರ್ಥಿಗಳ ಆರೋಗ್ಯ ವೃದ್ದಿಗೆ ಹಾಗೂ ಮನೋಬಲ ಹೆಚ್ಚಿಸುವುದಕ್ಕೆ ನೆರವಾಗಲಿದೆ. ಕೇಂದ್ರ ಸರ್ಕಾರದ ಸೂಚನೆಯಂತೆ ಜ. 1ರಿಂದ ಫೆ. 7ರವರೆಗಿನ ಒಟ್ಟು 38 ದಿನಗಳ ಪೈಕಿ, 21 ದಿನ ಬೆಳಗ್ಗಿನ ಅಸೆಂಬ್ಲಿ ಅವಧಿಯಲ್ಲಿ ವಿದ್ಯಾರ್ಥಿಗಳು ಸೂರ್ಯ ನಮಸ್ಕಾರ ಮಾಡಬೇಕಿದೆ. ಪ್ರತಿ ದಿನ 13 ಸೂರ್ಯ ನಮಸ್ಕಾರಗಳಂತೆ ಒಟ್ಟು 273 (21 ದಿನಗಳಲ್ಲಿ) ಸೂರ್ಯ ನಮಸ್ಕಾರಗಳನ್ನು ಮಾಡಿದವರಿಗೆ ಇ–ಪ್ರಮಾಣಪತ್ರ ನೀಡುವುದಾಗಿ ರಾಷ್ಟ್ರೀಯ ಯೋಗಾಸನ ಸ್ಪೋರ್ಟ್ಸ್ ಫೆಡರೇಷನ್‌ ತಿಳಿಸಿದೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಕೇಂದ್ರದ ಪತ್ರದಲ್ಲಿ ಏನಿದೆ?
‘ರಾಷ್ಟ್ರೀಯ ಯೋಗಾಸನ ಸ್ಪೋರ್ಟ್ಸ್ ಫೆಡರೇಷನ್‌ (ಎನ್‌ವೈಎಸ್‌ಎಫ್‌) ಡಿ. 9ರಂದು ಪತ್ರ ಬರೆದಿದ್ದು, 75ನೇ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ‘ಸೂರ್ಯ ನಮಸ್ಕಾರ’ ಕಾರ್ಯಕ್ರಮ ಆಯೋಜಿಸುವ ಬಗ್ಗೆ ತಿಳಿಸಿದೆ. 30 ರಾಜ್ಯಗಳಲ್ಲಿ 30 ಸಾವಿರ ಸಂಸ್ಥೆಗಳ 3 ಲಕ್ಷ ವಿದ್ಯಾರ್ಥಿಗಳನ್ನು ಸೇರಿಸಿ 75 ಕೋಟಿ ಸೂರ್ಯ ನಮಸ್ಕಾರ ಮಾಡಿಸಲು ಫೆಡರೇಷನ್‌ ನಿರ್ಧರಿಸಿದೆ. ಜ 26ರಂದು ತ್ರಿವರ್ಣ ಧ್ವಜದ ಎದುರು ‌ಸಂಗೀತದೊಂದಿಗೆ ಸೂರ್ಯ ನಮಸ್ಕಾರದ ಮೂಲಕ ತಾಯಿ ಭಾರತಾಂಬೆಗೆ ಭಾವಪೂರ್ಣ ನಮನ ಸಲ್ಲಿಸಬೇಕು ಎಂದೂ ಫೆಡರೇಷನ್‌ ತಿಳಿಸಿದೆ. ಹೀಗಾಗಿ, ನಿಮ್ಮ ವ್ಯಾಪ್ತಿಯಲ್ಲಿರುವ ಕಾಲೇಜುಗಳು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ನಿರ್ದೇಶನ ನೀಡುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತೆ ಮಾಡಬೇಕು’ ಎಂದು ಕೇಂದ್ರ ಶಿಕ್ಷಣ ಸಚಿವಾಲಯ ಸೂಚಿಸಿದೆ ಎನ್ನಲಾಗಿದೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com