ಕೊರೋನಾದಿಂದ ಸಾಕಷ್ಟು ನಷ್ಟ ಅನುಭವಿಸಿದ್ದೆವು, ಇನ್ನೂ ಹೆಚ್ಚು ಅನುದಾನ ಸಿಗಬೇಕಿತ್ತು: ವಿಮಾನಯಾನ ಸಂಸ್ಥೆಗಳು

2021-2022 ಸಾಲಿನ ಕೇಂದ್ರ ಬಜೆಟ್ ನಲ್ಲಿ ವಿಮಾನಯಾನ ಕ್ಷೇತ್ರಕ್ಕೆ ಯಾವುದೇ ಪ್ರಮುಖ ಘೋಷಣೆಗಳನ್ನು ಮಾಡದಿರುವುದಕ್ಕೆ ವಿಮಾನಯಾನ ಸಂಸ್ಥೆಗಳು ಬೇಸರ ವ್ಯಕ್ತಪಡಿಸುತ್ತಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: 2021-2022 ಸಾಲಿನ ಕೇಂದ್ರ ಬಜೆಟ್ ನಲ್ಲಿ ವಿಮಾನಯಾನ ಕ್ಷೇತ್ರಕ್ಕೆ ಯಾವುದೇ ಪ್ರಮುಖ ಘೋಷಣೆಗಳನ್ನು ಮಾಡದಿರುವುದಕ್ಕೆ ವಿಮಾನಯಾನ ಸಂಸ್ಥೆಗಳು ಬೇಸರ ವ್ಯಕ್ತಪಡಿಸುತ್ತಿವೆ.

ಕೊರೋನಾ ಸಾಂಕ್ರಾಮಿಕ ರೋಗ ವಿಮಾನಯಾನ ವಲಯದ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಸಾಕಷ್ಟು ನಷ್ಟವನ್ನು ಎದುರಿಸಿದ್ದೇವೆ. ಇಂತಹ ಸಂದರ್ಭದಲ್ಲಿ ಕೇಂದ್ರ ಬಜೆಟ್ ಮಂಡನೆಯಾಗುತ್ತಿರುವುದರಿಂದ ಪ್ರಮುಖ ಘೋಷಣೆಗಳನ್ನು ನಿರೀಕ್ಷಿಸಿದ್ದೆವು ವಿಮಾನಯಾನ ಸಂಸ್ಥೆಗಳು ಹೇಳಿವೆ.

ನಿನ್ನೆಯಷ್ಟೇ ಪ್ರಸಕ್ತ ಸಾಲಿನ ಆಯವ್ಯಯ ಮಂಡನೆ ಮಾಡಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಸಾಲದ ಸುಳಿಯಲ್ಲಿ ಸಿಲುಕಿರುವ ರಾಷ್ಟ್ರೀಯ ಸಂಸ್ಥೆಯ ಆರ್ಥಿಕ ಪುನಶ್ಚೇತನ ಭಾಗವಾಗಿ ವಿಶೇಷ ಉದ್ದೇಶದ ವಾಹಕ ಸ್ಥಾಪನೆಗೆ 2.268 ಕೋಟಿ ರೂ. ಹಂಚಿಕೆ ಮಾಡಿರುವುದಾಗಿ ಹೇಳಿದ್ದರು.

ಉಡಾನ್ ಯೋಜನೆಯಡಿ, ಕೇಂದ್ರ, ರಾಜ್ಯ ಸರ್ಕಾರಗಳು ಮತ್ತು ವಿಮಾನ ನಿಲ್ದಾಣ ಆಪರೇಟರ್ ಗಳು ಆಯ್ದು ಏರ್ ಲೈನ್ಸ್ ಗಳಿಂದ ಸೇವೆ ಇಲ್ಲದ- ಸೇವೆ ಇರುವ ವಿಮಾನ ನಿಲ್ದಾಣಗಳಿಂದ ಕೈಗೆಟುಕುವ ದರದಲ್ಲಿ ಕಾರ್ಯಾಚರಣೆಯನ್ನು ಉತ್ತೇಜಿಸುತ್ತವೆ. ಹೊಸ ಮೂಲಸೌಕರ್ಯಗಳನ್ನು ಅಭಿವೃದ್ಧಿಗೆ ಹಣ ಸಂಗ್ರಹಿಸಲು ಸರ್ಕಾರವು ಶ್ರೇಣಿ -2 ಮತ್ತು ಶ್ರೇಣಿ -3 ನಗರಗಳಲ್ಲಿನ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಚಾಲಿತ ವಿಮಾನ ನಿಲ್ದಾಣಗಳ ಆಸ್ತಿಯನ್ನು ಸರ್ಕಾರ ವಿತ್ತೀಯಗೊಳಿಸಲಿದೆ ಎಂದು ತಿಳಿಸಿದ್ದರು.

2021-22ರ ಕೇಂದ್ರ ಬಜೆಟ್‌ನಲ್ಲಿ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ 3,224 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ, ಇದು ಪ್ರಸಕ್ತ ಹಣಕಾಸು ವರ್ಷದಲ್ಲಿ ನಿಗದಿಪಡಿಸಿದ 4,131 ಕೋಟಿ ರೂ.ಗಳಲ್ಲಿ ಶೇ. 22 ಕ್ಕಿಂತ ಕಡಿಮೆಯಾಗಿದೆ. ಕಳೆದ ವರ್ಷ 2020-21ನೇ ಸಾಲಿಗಾಗಿ ವಿಮಾನಯಾನ ಸಚಿವಾಲಯಕ್ಕೆ ರೂ.3797 ಕೋಟಿ ಹಂಚಿಕೆ ಮಾಡಲಾಗಿತ್ತು. ಆದರೆ, ಪರಿಷ್ಕೃತ ಅಂದಾಜಿನಂತೆ ರೂ.4,131 ಕೋಟಿಗೆ ಅದನ್ನು ಹೆಚ್ಚಿಸಲಾಗಿದೆ. 2021-22ರ ಪ್ರಾದೇಶಿಕ ಸಂಪರ್ಕ ಯೋಜನೆ ಉಡಾನ್‌ಗೆ ಪ್ರಸಕ್ತ ಹಣಕಾಸು ವರ್ಷಕ್ಕಿಂತ ಶೇ.28 ರಷ್ಟು ಕಡಿಮೆ ಅನುದಾನ ನೀಡಲಾಗಿದೆ.

ಟರ್ಬೈನ್ ಇಂಧನವನ್ನು ಜಿಎಸ್'ಟಿ ಅಡಿಯಲ್ಲಿ ತರುವಂತೆ ಹಾಗೂ ಅಬಕಾರಿ ಸುಂಕವನ್ನು ಕಡಿತಗೊಳಿಸುವುದು ನಮ್ಮ ಪ್ರಮುಖ ಬೇಡಿಕೆಯಾಗಿತ್ತು. ಆದರೆ, ಅದಾವುದನ್ನೂ ಮಾಡಲಾಗಿಲ್ಲ ಎಂದು ಭಾರತದ ಮೊದಲ ಏವಿಯೇಷನ್ ಡಾಟಾ ಕನ್ಸಲ್ಟಿಂಗ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರೋಹಿತ್ ತೋಮರ್ ಅವರು ಹೇಳಿದ್ದಾರೆ.

ಕೊರೋನಾ ಸಾಂಕ್ರಾಮಿಕ ರೋಗ ಸಂದರ್ಭದಲ್ಲಿ ಹೋಟೆಲ್ ಉದ್ಯಮದ ಬಳಿಕ ವಿಮಾನಯಾನ ಸಂಸ್ಥೆಗಳು ಸಾಕಷ್ಟು ನಷ್ಟವನ್ನು ಅನುಭವಿಸಿವೆ. ಈ ಬಾರಿಯ ಬಜೆಟ್ ನಲ್ಲಿ ಯಾವುದೇ ಪ್ರಮುಖ ಘೋಷಣೆಗಳನ್ನು ಮಾಡಲಾಗಿಲ್ಲ ಎಂದು ತಿಳಿಸಿದ್ದಾರೆ.

ಭಾರತೀಯ ವಿಮಾನಯಾನ ಉದ್ಯಮದಲ್ಲಿ ಶೇ.90ರಷ್ಟು ವಿಮಾನಗಳನ್ನು ವಿದೇಶಿ ಕಂಪನಿಗಳಿಂದ ಗುತ್ತಿಗೆ ಪಡೆಯಲಾಗುತ್ತದೆ. ವಿದೇಶಿ ಕಂಪನಿಗಳಿಗೆ ಡಾಲರ್ ಮೂಲಕವೇ ಹಣವನ್ನು ಪಾವತಿ ಮಾಡಲಾಗುತ್ತದೆ. ಬಾಡಿಗೆ ಹಣದ ಮೇಲಿನ ತೆರಿಗೆ ವಿನಾಯಿತಿ ಇಡೀ ವಿಮಾನಯಾನ ಉದ್ಯಮಕ್ಕೆ ಸಹಾಯ ಮಾಡುವುದಿಲ್ಲ. ಕೇಂದ್ರ ಸರ್ಕಾರ ಈ ಘೋಷಣೆ ಇಂಡಿಗೋ ಅಥವಾ ಸ್ಪೈಸ್ ಜೆಟ್ ಗಳಿಗೆ ಲಾಭ ನೀಡಬಹುದಷ್ಟೇ ಎಂದು ವಿಮಾನಯಾನ ಕ್ಷೇತ್ರದ ತಜ್ಞ ಕ್ಯಾಪ್ಟೆನ್ ಮೋಹನ್ ರಂಗನಾಥ್ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com