
ಬೆಂಗಳೂರು: ಯಾವುದೇ ರೀತಿಯ ಸರ್ಕಾರಿ ಭೂಮಿ ಅತಿಕ್ರಮಣವಾಗಿದ್ದರೂ ಸಾರ್ವಜನಿಕರೂ ಬಿಬಿಎಂಪಿಗೆ ಮಾಹಿತಿ ನೀಡಬೇಕೆಂದು ಪಾಲಿಕೆ ವಿಶೇಷ ಆಯುಕ್ತ (ಆಸ್ತಿಗಳು) ರೆಡ್ಡಿ ಶಂಕರಬಾಬು ಅವರು ಮನವಿ ಮಾಡಿಕೊಂಡಿದ್ದಾರೆ.
ಮಹದೇವಪುರ ವಲಯದ ಹೂಡಿ ವಾರ್ಡ್‌ನಲ್ಲಿನ ವಾರಣಾಸಿ ಗ್ರಾಮದಲ್ಲಿ ಒತ್ತುವರಿ ಮಾಡಿಕೊಳ್ಳಲಾಗಿದ್ದ 1.6 ಎಕರೆ ಕೆರೆ ಪ್ರದೇಶವನ್ನು ಬಿಬಿಎಂಪಿ ತೆರವುಗೊಳಿಸಿತು.
ಬಿದರಹಳ್ಳಿ ಹೋಬಳಿಯ ವಾರಣಾಸಿ ಗ್ರಾಮದ ಸರ್ವೇ ನಂಬರ್ 47ರಲ್ಲಿರುವ ಒಟ್ಟು 8 ಎಕರೆ 24 ಗುಂಟೆ ವಿಸ್ತೀರ್ಣದ ವಾರಣಾಸಿ (ಜಿಂಕೆತಿಮ್ಮನಹಳ್ಳಿ) ಕೆರೆ ಅಂಗಳದ ಜಮೀನಿನಲ್ಲಿ ಸ್ಥಳೀಯರು, 1 ಎಕರೆ 6 ಗುಂಟೆ ಜಮೀನನ್ನು ಒತ್ತುವರಿ ಮಾಡಿಕೊಂಡು, ಶೀಟಿನ ಮನೆಗಳನ್ನು ನಿರ್ಮಿಸಿಕೊಂಡಿದ್ದರು. ಈ ಜಾಗ ಅಂದಾಜು ರೂ. 30 ಕೋಟಿ ಮೌಲ್ಯದ್ದಾಗಿದೆ ಎಂದು ತಿಳಿದುಬಂದಿದೆ.
ಪಾಲಿಕೆ ವಿಶೇಷ ಆಯುಕ್ತ (ಆಸ್ತಿಗಳು) ರೆಡ್ಡಿ ಶಂಕರಬಾಬು ನೇತೃತ್ವದಲ್ಲಿ ಈ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿತ್ತು. ಎರಡು ಜೆಸಿಬಿ, 25 ಸಿಬ್ಬಂದಿ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಲಾಗಿದ್ದು, ಒತ್ತುವರಿ ತೆರವುಗೊಳಿಸಿದ ಸ್ಥಳದಲ್ಲಿ ಕೂಡಲೇ ಬಿಬಿಎಂಪಿ ಅಧಿಕಾರಿಗಳು ತಂತಿ ಬೇಲಿ ಅಳವಡಿಸಿ ಕ್ರಮ ಕೈಗೊಂಡರು.
ಕಾರ್ಯಾಚರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರೆಡ್ಡಿ ಶಂಕರಬಾಬು ಅವರು, ಪ್ರತಿಯೊಂದು ಸರ್ಕಾರಿ ಭೂಮಿ, ಪ್ರಮುಖವಾಗಿ ಕೆರೆಗಳ ಸಮೀಪವಿರುವ ಭೂಮಿಯನ್ನು ದಾಖಲಿಸಿಕೊಳ್ಳಲಾಗಿದೆ. ಈ ಪ್ರದೇಶಗಳಲ್ಲಿ ಕಟ್ಟಡಗಳಿರಲಿ, ಸಣ್ಣ ಶೆಡ್ ಹಾಕಲು ಕೂಡ ಯಾರಿಗೂ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಸರ್ಕಾರಿ ಭೂಮಿ ಅತಿಕ್ರಣವಾಗಿದ್ದರೆ ನ್ಯಾಯಾಲಯದ ಆದೇಶಗಳಿಗಾಗಿ ಕಾಯಬಾರದು. ಅತಿಕ್ರಮಣಗಳನ್ನು ಕೂಡಲೇ ತೆರವುಗೊಳಿಸಬೇಕೆಂದು ಎಲ್ಲಾ ಎಂಜಿನಿಯರ್‌ಗಳು ಮತ್ತು ಸಿಬ್ಬಂದಿಗಳಿಗೆ ನಿರ್ದೇಶನ ನೀಡಲಾಗಿದೆ. ಎಲ್ಲಾ ಜಲಮೂಲಗಳನ್ನು ರಕ್ಷಿಸುವುದು ನಗರದ ಜೀವನ ಮಟ್ಟವನ್ನು ಸುಧಾರಿಸಲು ಸರ್ಕಾರ ಯೋಜನೆ ರೂಪಿಸುತ್ತಿದೆ ಎಂದು ತಿಳಿಸಿದ್ದಾರೆ.
Advertisement