ವೃಷಭಾವತಿ ನದಿ ನೀರನ್ನು ಮೂರು ಹಂತಗಳಲ್ಲಿ ಸಂಸ್ಕರಿಸಿ ಕೆರೆಗಳಿಗೆ ತುಂಬಿಸುವ ಯೋಜನೆ ಅನುಷ್ಠಾನ: ಸಿ.ಪಿ.ಯೋಗೇಶ್ವರ್

ವೃಷಭಾವತಿ ನದಿಯ ಕೊಳಚೆ ನೀರನ್ನು ಮುಂದಿನ 5 ವರ್ಷಗಳಲ್ಲಿ ರೂ.1500 ಕೋಟಿ ರೂಪಾಯಿ ವೆಚ್ಚದಲ್ಲಿ ಮೂರನೇ ಹಂತದಲ್ಲಿ ಸಂಸ್ಕರಿಸಿ ಕೃಷಿ ಹಾಗೂ ಕೆರೆಗೆ ನೀರು ತುಂಬಿಸುವ ಯೋಜನೆಯನ್ನು ಅನುಷ್ಠಾನಗೊಳಿಸುವುದಾಗಿ ಪ್ರವಾಸೋದ್ಯಮ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವ ಸಿ.ಪಿ.ಯೋಗೇಶ್ವರ್ ತಿಳಿಸಿದ್ದಾರೆ.
ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್
ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್
Updated on

ಬೆಂಗಳೂರು: ವೃಷಭಾವತಿ ನದಿಯ ಕೊಳಚೆ ನೀರನ್ನು ಮುಂದಿನ 5 ವರ್ಷಗಳಲ್ಲಿ ರೂ.1500 ಕೋಟಿ ರೂಪಾಯಿ ವೆಚ್ಚದಲ್ಲಿ ಮೂರನೇ ಹಂತದಲ್ಲಿ ಸಂಸ್ಕರಿಸಿ ಕೃಷಿ ಹಾಗೂ ಕೆರೆಗೆ ನೀರು ತುಂಬಿಸುವ ಯೋಜನೆಯನ್ನು ಅನುಷ್ಠಾನಗೊಳಿಸುವುದಾಗಿ ಪ್ರವಾಸೋದ್ಯಮ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವ ಸಿ.ಪಿ.ಯೋಗೇಶ್ವರ್ ತಿಳಿಸಿದ್ದಾರೆ.

ಇಂದು ಬೆಳಿಗ್ಗೆ ಮೈಸೂರು ರಸ್ತೆಯ ಗಾಳಿ ಆಂಜನೇಯ ದೇವಾಲಯದಿಂದ ಬಿಡದಿಯ ಬೈರಮಂಗಲ ಕೆರೆಯವರೆಗೂ ವೃಷಬಾವತಿ ನದಿಯನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಬೆಂಗಳೂರು ನಗರದ ಶೇ 40 ರಷ್ಟು ತ್ಯಾಜ್ಯ ನೀರು ವೃಷಭಾವತಿ ನದಿ ಮೂಲಕ ಬಿಡದಿಯ ಬೈರಮಂಗಲ ಕೆರೆಗೆ ಸೇರುತ್ತಿದೆ. ಪ್ರಸಕ್ತ ಕೇವಲ ಎರಡು ಹಂತದಲ್ಲಿ ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡಲಾಗುತ್ತಿದ್ದು, ಈ ನೀರು ಕೃಷಿ ಸೇರಿದಂತೆ ಯಾವುದಕ್ಕೂ ಬಳಸಲು ಸಾಧ್ಯವಿಲ್ಲ. ಇನ್ನೊಂದೆಡೆ ಸಂಸ್ಕರಣೆ ಮಾಡಿದ ನೀರನ್ನು ಚರಂಡಿಗಳಿಗೆ ಹರಿಸುತ್ತಿದ್ದು, ಯಾವುದೇ ಪ್ರಯೋಜನಕ್ಕೆ ಬರುತ್ತಿಲ್ಲ ಎಂದರು.

ಬೆಂಗಳೂರು ನಗರದ ವೃಷಬಾವತಿ ಕಣಿವೆ ವ್ಯಾಪ್ತಿಯಲ್ಲಿ ಹರಿಯುವ 1500 ಎಂ.ಎಲ್‍.ಡಿ ತ್ಯಾಜ್ಯ ನೀರನ್ನು ಮೂರು ಹಂತಗಳಲ್ಲಿ ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಣೆ ಮಾಡಿ, ಕೆರೆಗಳನ್ನು ತುಂಬಿಸುವುದು ಹಾಗೂ ಕೃಷಿ ಚಟುವಟಿಕೆಗಳಿಗೆ ಬಳಸುವುದು ನಮ್ಮ ಉದ್ದೇಶವಾಗಿದೆ. ಒಂದು ಎಂ.ಎಲ್‍.ಡಿ ತ್ಯಾಜ್ಯ ನೀರನ್ನು ಮೂರನೇ ಹಂತದಲ್ಲಿ ಸಂಸ್ಕರಣೆ ಮಾಡಲು ರೂ.1.00 ಕೋಟಿ ವೆಚ್ಚವಾಗುತ್ತದೆ. 1500 ಎಂ.ಎಲ್‍.ಡಿ ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡಲು ರೂ.1500 ಕೋಟಿ ವೆಚ್ಚವಾಗಲಿದ್ದು, 3-5 ವರ್ಷಗಳಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದೆ. ಆನಂತರ ಕುಡಿಯುವುದಕ್ಕೆ ಹೊರತುಪಡಿಸಿ, ಬೇರೆ ಎಲ್ಲಾ ಚಟುವಟಿಕೆಗಳಿಗೆ ಈ ಶುದ್ಧ ನೀರನ್ನು ಬಳಸಬಹುದಾಗಿದೆ ಎಂದು ಸಚಿವರು  ವಿವರಿಸಿದರು.

ಬಸವನಗುಡಿಯಲ್ಲಿ ಹುಟ್ಟುವ ವೃಷಬಾವತಿ ನದಿ ಬಿಡದಿಯ ಬೈರಮಂಗಲ ಕೆರೆಗೆ ತಲುಪುತ್ತದೆ. ನಾಯಂಡನಹಳ್ಳಿ ಹಾಗೂ ಮೈಲಸಂಧ್ರದಲ್ಲಿ ಇದೀಗ ಎರಡು ಹಂತಗಳಲ್ಲಿ ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡಲಾಗುತ್ತಿದೆ. ಬೆಂಗಳೂರು ವಿಶ್ವವಿದ್ಯಾಲಯ 600 ಪ್ರದೇಶದಲ್ಲಿದ್ದು, ಅಲ್ಲಿಯೂ ಸಹ ಒಂದು ತ್ಯಾಜ್ಯ ನೀರು ಸಂಸ್ಕರಣಾ ಘಟಕವನ್ನು ಅಳವಡಿಸಲು ಯೋಜನೆ ರೂಪಿಸಲಾಗಿದೆ. ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್‍ ಸದಸ್ಯರು ಈ ಯೋಜನೆಯನ್ನು ವಿರೋಧಿಸುತ್ತಿದ್ದಾರೆ. ಸಿಂಡಿಕೇಟ್‍ ಸದಸ್ಯರಿಗೆ ಈ ಯೋಜನೆಯ ಮಹತ್ವವನ್ನು ವಿವರಿಸಿ, ಅಲ್ಲಿಯೂ ತ್ಯಾಜ್ಯ ನೀರು ಸಂಸ್ಕರಣ ಘಟಕವನ್ನು ರಾಜ್ಯ ಸರ್ಕಾರದ ವತಿಯಿಂದ ಸ್ಥಾಪಿಸಲಾಗುವುದು ಎಂದು ಸಚಿವರು ಹೇಳಿದರು. 

ವೃಷಬಾವತಿ ನದಿಯಲ್ಲಿ ಹರಿಯುವ ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡುವ ಬಗ್ಗೆ ಕಾರ್ಖಾನೆಗಳು, ಜನವಸತಿ ಪ್ರದೇಶಗಳು ಹಾಗೂ ಅಪಾರ್ಟಮೆಂಟ್‍ಗಳಿಂದ ಸಂಸ್ಕರಣೆ ಮಾಡದೇ ನದಿಗೆ ನೇರವಾಗಿ ತ್ಯಾಜ್ಯ ನೀರು ಹರಿಸುತ್ತಿರುವುದರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದ್ದೇನೆ. ಮುಂದಿನ ವಾರದಲ್ಲಿ ಇದಕ್ಕೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಮುಖ್ಯಸ್ಥರ ಸಭೆ ಕರೆದು ಒಂದು ದೃಢ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಹೇಳಿದರು. 

ವೃಷಬಾವತಿ ಹುಟ್ಟುವ ಪ್ರದೇಶದಿಂದ ಅರ್ಕಾವತಿ ನದಿ ತಲುಪುವರೆಗೆ ಸಮಿಕ್ಷೆ ಮಾಡಿ ವರದಿ ಸಲ್ಲಿಸಿ ಎಂದು ಹೈಕೋರ್ಟ ನಿರ್ದೇಶನ ನೀಡಿದ್ದು, ಈ ನಿಟ್ಟಿನಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ಕಾರ್ಯೋ‍ನ್ಮುಖವಾಗಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಸಚಿವರು ಉತ್ತರಿಸಿದರು. 

ವೃಷಬಾವತಿ ನಿಧಿ ಪ್ರದೇಶದಲ್ಲಿ 3304 ಕೈಗಾರಿಕೆಗಳಿದ್ದು, 1396 ಕೈಗಾರಿಕೆಗಳು ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳನ್ನು ಉಲ್ಲಂಘನೆ ಮಾಡಿ, ನದಿಗೆ ನೇರವಾಗಿ ತ್ಯಾಜ್ಯ ನೀರನ್ನು ಹರಿಸುತ್ತಿವೆ. 1476 ಕಾರ್ಖಾನೆಗಳ ಮೇಲೆ ಕ್ರಮ ಕೈಗೊಳ್ಳಲಾಗಿದ್ದು, 77 ಕಾರ್ಖಾನೆಗಳ ಮೇಲೆ ಕ್ರಿಮಿನಲ್‍ ಮೊಕದ್ದಮೆ ಹೂಡಲಾಗಿದೆ. 275 ಕಾರ್ಖಾನೆಗಳನ್ನು ಮುಚ್ಚಿಸಲಾಗಿದೆ ಎಂದು ಇದೇ ವೇಳೆ ಸಚಿವರು ವಿವರಿಸಿದರು. ಕೇವಲ ಉದ್ಯಮಿಗಳ ಮೇಲಲ್ಲದೇ ಸಂಬಂಧಪಟ್ಟ ಅಧಿಕಾರಿಗಳ ಮೇಲೆಯೂ ಸಹ ದೂರು ದಾಖಲಿಸುವಂತೆ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಿಗೆ ಆದೇಶಿಸಿದರು. 

ಬೈರಮಂಗಲ ಕೆರೆ: ರೂ.250.00 ಕೋಟಿಗಳ ವೆಚ್ಚದಲ್ಲಿ ಬೈರಮಂಗಲ ಕೆರೆಯನ್ನು ಏತ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಲು ಟೆಂಡರ್‍ ಕರೆಯಲಾಗಿದೆ. ಬಿಡದಿ ಕೈಗಾರಿಕಾ ಪ್ರದೇಶದಿಂದ ಹಾಗೂ ಬೆಂಗಳೂರಿನ ವೃಷಬಾವತಿ ನದಿಯಲ್ಲಿ ಹರಿದು ಬರುವ ನೀರನ್ನು ಮೂರನೇ ಹಂತದಲ್ಲಿ ಸಂಸ್ಕರಣೆ ಮಾಡಿ ಬೈರಮಂಗಲ ಕೆರೆಗೆ ನೀರು ಹರಿಸಲು ಯೋಜನೆ ರೂಪಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಬೆಂಗಳೂರು ನಗರದ ಶೇ.40 ರಷ್ಟು ನೀರು ಈ ಕೆರೆಗೆ ಬರುತ್ತಿದೆ. ಸಣ್ಣ ನೀರಾವರಿ  ಇಲಾಖೆಯ ಜೊತೆಯಲ್ಲಿ ಮಾತನಾಡಿ ಮಳೆ ನೀರು ಹಾಗೂ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಬೇರ್ಪಡಿಸಿ, ಸುತ್ತ-ಮುತ್ತ ಹಳ್ಳಿಗಳಲ್ಲಿರುವ 142 ಕೆರೆಗಳಿಗೆ ನೀರನ್ನು ಹರಿಸಲಾಗುವುದು. ಮುಂದಿನ 1-2 ವರ್ಷಗಳಲ್ಲಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರುವುದಾಗಿ ಬೈರಮಂಗಲ ಕೆರೆ ವೀಕ್ಷಿಸಿದ ನಂತರ ಸಚಿವರು ಹೇಳಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com