ಸಚಿವ ಸಂಪುಟ​​ ಒಪ್ಪಿಗೆ ಇಲ್ಲದೆಯೆ ಜಿಂದಾಲ್​ಗೆ ಭೂಮಿ ಪರಭಾರೆ: ಸರ್ಕಾರದ ನಿರ್ಧಾರ ಪ್ರಶ್ನಿಸಿದ ಹೈಕೋರ್ಟ್​​

ಜಿಂದಾಲ್ ಸಂಸ್ಥೆಗೆ 3,667 ಎಕರೆ ಜಮೀನು ಪರಭಾರೆ ವಿಚಾರವಾಗಿ ಕ್ಯಾಬಿನೆಟ್ ಒಪ್ಪಿಗೆ ಸಿಗುವವರೆಗೂ ಜಮೀನು ಪರಭಾರೆ ಇಲ್ಲ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪತ್ರದಲ್ಲಿ ಸ್ಪಷ್ಟೀಕರಣ ನೀಡಿದ್ದು, ಸರ್ಕಾರದ ಈ ನಿಲುವಿಗೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಜಿಂದಾಲ್ ಸಂಸ್ಥೆಗೆ 3,667 ಎಕರೆ ಜಮೀನು ಪರಭಾರೆ ವಿಚಾರವಾಗಿ ಕ್ಯಾಬಿನೆಟ್ ಒಪ್ಪಿಗೆ ಸಿಗುವವರೆಗೂ ಜಮೀನು ಪರಭಾರೆ ಇಲ್ಲ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪತ್ರದಲ್ಲಿ ಸ್ಪಷ್ಟೀಕರಣ ನೀಡಿದ್ದು, ಸರ್ಕಾರದ ಈ ನಿಲುವಿಗೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. 

ಜಿಂದಾಲ್ ಸಂಸ್ಥೆಗೆ ಜಮೀನು ಪರಭಾರೆ ಮಾಡುವ ಸರ್ಕಾರದ ಕ್ರಮ ಪ್ರಶ್ನಿಸಿ ಬೆಂಗಳೂರಿನ ಕೆ.ಎ ಪಾಲ್ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯಪೀಠ ವಿಚಾರಣೆ ನಡೆಸಿತು.

 ಈ ವೇಳೆ ಸರ್ಕಾರದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ಸಚಿವ ಸಂಪುಟ ಭೂಮಿ ಮಂಜೂರು ಮಾಡುವ ಸಂಬಂಧ ಅಂತಿಮ ತೀರ್ಮಾನ ಮಾಡಿಲ್ಲ. ಹಾಗೆಯೇ, ಸರ್ಕಾರ ಯಾವುದೇ ತೀರ್ಮಾನವನ್ನೂ ಕೈಗೊಂಡಿಲ್ಲ. ನ್ಯಾಯಾಲಯದ ಆದೇಶದ ನಂತರ ಮುಂದಿನ ತೀರ್ಮಾನ ಕೈಗೊಳ್ಳಲಿದೆ ಎಂದರು.

ಇದಕ್ಕೆ ಆಕ್ಷೇಪಿಸಿದ ಅರ್ಜಿದಾರರ ಪರ ವಕೀಲರು, ಕಳೆದ ವಿಚಾರಣೆ ವೇಳೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಪ್ರಮಾಣಪತ್ರದಲ್ಲಿ ಕ್ಯಾಬಿನೆಟ್ ಒಪ್ಪಿಗೆ ಸಿಗುವವರೆಗೂ ಜಮೀನು ಪರಭಾರೆ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ಭೂಮಿ ನೀಡುವ ಪ್ರಸ್ತಾವ ತಡೆಹಿಡಿಯಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಹೀಗಾಗಿ ಈ ವಿಚಾರಕ್ಕೆ ಸಂಬಂಧಿಸಿದ ಮೂಲ ಕಡತ ಸಲ್ಲಿಸಲು ನಿರ್ದೇಶಿಸಬೇಕು ಎಂದು ಕೋರಿದರು.

ಹೇಳಿಕೆಗೆ ಪ್ರತಿಕ್ರಿಯಿಸಿದ ಪೀಠ, ಇತ್ತ ಸಚಿವ ಸಂಪುಟದಲ್ಲಿ ಯಾವುದೇ ಅಂತಿಮ ತೀರ್ಮಾನವಾಗಿಲ್ಲ ಎನ್ನುತ್ತೀರಿ, ಅತ್ತ ಭೂಮಿ ಪರಭಾರೆ ಬಗ್ಗೆಯೂ ಮಾತನಾಡುತ್ತೀರಿ. ಪರಭಾರೆ ವಿಚಾರದಲ್ಲಿ ಸರ್ಕಾರದ ನಿಲುವು ಪಾರದರ್ಶಕವಾಗಿರಬೇಕು. ಆದರೆ, ಸರ್ಕಾರದ ನಿರ್ಧಾರ ಅಸ್ಪಷ್ಟ, ಆಘಾತಕಾರಿಯಾಗಿದೆ. ಹೀಗಾಗಿ ಸಚಿವ ಸಂಪುಟದ ಸಮ್ಮತಿಯಿಲ್ಲದೇ, ಸರ್ಕಾರಿ ಆದೇಶದ ಮೂಲಕ ಜಮೀನು ಪರಭಾರೆ ಮಾಡಬಹುದೇ? ಎಂಬ ಬಗ್ಗೆ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಬೇಕು ಎಂದು ಸೂಚಿಸಿ, ವಿಚಾರಣೆಯನ್ನು ಜುಲೈ 16ಕ್ಕೆ ಮುಂದೂಡಿತು.

ವಿಜಯನಗರ ಜಿಲ್ಲೆಯ ಸಂಡೂರು ತಾಲೂಕಿನಲ್ಲಿ ಸುಮಾರು 3,667 ಎಕರೆ ಭೂಮಿಯನ್ನು ಸರ್ಕಾರ ಜಿಂದಾಲ್ ಸಂಸ್ಥೆಗೆ ಪರಭಾರೆ ಮಾಡಿದೆ. 2019ರಲ್ಲಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರ ಜಮೀನು ಪರಭಾರೆ ಮಾಡಲು ಮುಂದಾಗಿದ್ದಾಗ ವಿರೋಧ ಪಕ್ಷದಲ್ಲಿದ್ದ ಯಡಿಯೂರಪ್ಪ ನಿರ್ಧಾರವನ್ನು ವಿರೋಧಿಸಿದ್ದರು. ಆದರೆ, ಇದೀಗ ಯಡಿಯೂರಪ್ಪ ಸರ್ಕಾರವೇ ಖಾಸಗಿ ಸಂಸ್ಥೆಗೆ ಜಮೀನು ನೀಡಲು ಮುಂದಾಗಿದೆ ಎಂದು ಅಜಿರ್ದಾರರು ಆರೋಪಿಸಿದ್ದಾರೆ.ಅಲ್ಲದೆ, ಜಮೀನು ಪರಭಾರೆ ಕುರಿತು 2021ರ ಏಪ್ರಿಲ್ 26ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟದಲ್ಲಿ ಕೈಗೊಂಡ ನಿರ್ಧಾರ ರದ್ದುಪಡಿಸಬೇಕು. ಜಮೀನು ಪರಭಾರೆ ನಿರ್ಧಾರದ ಬಗ್ಗೆ ತನಿಖೆ ನಡೆಸಲು ಹೈಕೋರ್ಟ್ ಮೇಲುಸ್ತುವಾರಿಯಲ್ಲಿ ಸ್ವತಂತ್ರ ಸಂಸ್ಥೆಯೊಂದನ್ನು ನೇಮಿಸಬೇಕು. ಆ ಸಂಸ್ಥೆಯಿಂದ ವರದಿ ತರಿಸಿಕೊಳ್ಳಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com