ವಿಶೇಷ ಹೂಡಿಕೆ ವಲಯದ ಕುರಿತು ಚರ್ಚಿಸಲು ಗುಜರಾತ್'ಗೆ ಸಚಿವ ಶೆಟ್ಟರ್ ಭೇಟಿ: ರಾಜ್ಯ ಸರ್ಕಾರದ ವಿರುದ್ಧ ಡಿಕೆಶಿ ಕಿಡಿ
ಬೆಂಗಳೂರು: ವಿಶೇಷ ಹೂಡಿಕೆ ವಲಯ ನಿರ್ಮಾಣ ಕುರಿತು ಅಧ್ಯಯನ ನಡೆಸಲು ರಾಜ್ಯದ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ನೇತೃತ್ವದ ತಂಡ ಶುಕ್ರವಾರ ಗುಜರಾತ್ ರಾಜ್ಯಕ್ಕೆ ತೆರಳಿದ್ದು, ಅಲ್ಲಿನ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರನ್ನು ಭೇಟಿಮಾಡಿ ಚರ್ಚೆ ನಡೆಸಿದೆ.
ರಾಜ್ಯದ ನೂತನ ಕೈಗಾರಿಕಾ ನೀತಿಯಲ್ಲಿ ವಿಶೇಷ ಹೂಡಿಕೆ ವಲಯ ನಿರ್ಮಾಣದ ಪ್ರಸ್ತಾವವಿದೆ. ಅದನ್ನು ಅನುಷ್ಠಾನಕ್ಕೆ ತರುವುದಕ್ಕೆ ಪೂರಕವಾಗಿ ಶೆಟ್ಟರ್ ನೇತೃತ್ವದ ತಂದ ಗುಜರಾತ್ ಪ್ರವಾಸ ಕೈಗೊಂಡಿದೆ. ಅಲ್ಲಿನ ಧೋಲೇರಾ ‘ಗಿಫ್ಟ್ ಸಿಟಿ’ ವಿಶೇಷ ಹೂಡಿಕೆ ವಲಯ ಮತ್ತು ಸ್ಮಾರ್ಟ್ ಸಿಟಿಗೂ ಭೇಟಿ ನೀಡಿದೆ.
ರೂಪಾನಿ ಭೇಟಿ ಬಳಿಕ ಮಾತನಾಡಿದ ಶೆಟ್ಟರ್ ಅವರು, ದೇಶದ ಮೊದಲ ವಿಶೇಷ ಹೂಡಿಕೆ ವಲಯವನ್ನು ಗುಜರಾತ್ ನಿರ್ಮಿಸಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲೂ ವಿಶೇಷ ಹೂಡಿಕೆ ವಲಯ ನಿರ್ಮಿಸುವ ಉದ್ದೇಶವಿದೆ. ಅದಕ್ಕೆ ಪೂರಕವಾಗಿ ಮಾಹಿತಿ ಪಡೆಯಲಾಗಿದೆ ಎಂದು ಹೇಳಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಯಾಗಿರುವ ಧೋಲೇರಾ (ಎಸ್ಐಆರ್) ದೇಶದ ಮೊದಲ ವ್ಯವಸ್ಥಿತವಾಗಿ ಯೋಜನೆ ಮಾಡಿ ನಿರ್ಮಿಸಲಾಗುತ್ತಿರುವ ವಿಶೇಷ ಹೂಡಿಕೆ ವಲಯ. ದೇಶದ ಮೊದಲ ಸ್ಮಾರ್ಟ್ ಸಿಟಿ ಎನ್ನುವ ಹೆಗ್ಗಳಿಕೆಯೂ ಇದರದ್ದಾಗಿದೆ. ಈ ವಿಶೇಷ ಹೂಡಿಕೆ ವಲಯ (ಎಸ್ ಐ ಆರ್) ದಿಂದ ಗುಜರಾತ್ ನಲ್ಲಿ ಹೆಚ್ಚಿನ ಹೂಡಿಕೆಯಾಗುತ್ತಿದೆ. ಕರ್ನಾಟಕ ರಾಜ್ಯ ಕೈಗಾರಿಕಾ ನೀತಿಯಲ್ಲಿ ಈಗಾಗಲೇ ಘೋಷಣೆ ಮಾಡಿರುವಂತಹ ವಿಶೇಷ ಹೂಡಿಕೆ ವಲಯ ರಚನೆಗೆ ಮಾಹಿತಿಯನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಹಾಗೂ ಈ ಸಂಬಂಧ ಗುಜರಾತ್ ರಾಜ್ಯ ಹೊರತಂದಿರುವ ನೀತಿ ನಿಯಮಗಳಲ್ಲಿ ಮಾಡಲಾದಂತಹ ಬದಲಾವಣೆಯ ಬಗ್ಗೆ ಗುಜರಾತ್ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿದ್ದೇವೆ.
ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಹಿರಿಯ ಮತ್ತು ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿಯ ಅಧಿಕಾರಿಗಳ ತಂಡದ ಜೊತೆ ದೋಲೇರಾ, ಗಿಫ್ಟ್ ಸಿಟಿ ಸೇರಿದಂತೆ ಹಲವಾರು ಕೈಗಾರಿಕಾ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಕಾರ್ಯವೈಖರಿಯನ್ನು ಗಮನಿಸಿದ್ದೇವೆ. ಅಲ್ಲದೆ, ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರನ್ನು ಭೇಟಿಯಾದ ಸಂಧರ್ಭದಲ್ಲಿ ಗುಜರಾತ್ ರಾಜ್ಯದಲ್ಲಿ ಕೈಗಾರಿಕಾಭಿವೃದ್ದಿಗೆ ಭೂ ಪ್ರದೇಶವನ್ನು ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆಯ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಲಾಯಿತು. ಅಲ್ಲದೆ, ನಮ್ಮ ರಾಜ್ಯದಲ್ಲಿ ಹೊರತಂದಿರುವ ನೀತಿಗಳ ಬಗ್ಗೆಯೂ ತಿಳಿಸಿಕೊಡಲಾಯಿತು. ಮುಂಬರುವ ಫೆಬ್ರವರಿಯಲ್ಲಿ ರಾಜ್ಯದಲ್ಲಿ ವಿಶ್ವ ಹೂಡಿಕೆದಾರರ ಸಭೆ ದಿನಾಂಕ ಘೋಷಣೆಯ ಬಗ್ಗೆಯೂ ಚರ್ಚಿಸಲಾಯಿತು ಎಂದು ಸಚಿವರು ತಿಳಿಸಿದರು.
ಈ ನಡುವೆ ಗುಜರಾತ್ ಅಭಿವೃದ್ಧಿ ಮಾದರಿಯನ್ನು ಕೊಂಡಾಡುತ್ತಿರುವ ರಾಜ್ಯದ ಬಿಜೆಪಿ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಅವರು ತೀವ್ರವಾಗಿ ಕಿಡಿಕಾರಿದ್ದಾರೆ.
ಸಚಿವ ಶೆಟ್ಟರ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಅಧ್ಯಯನಕ್ಕೆ ಗುಜರಾತ್‌ಗೆ ತೆರಳಲು ನಮ್ಮ ಅಭ್ಯಂತರವಿಲ್ಲ. ಗುಜರಾತ್ ಮಾಡೆಲ್ ಎಲ್ಲಿದೆ. ಕೇಂದ್ರ ಸರ್ಕಾರ ಗುಜರಾತ್ ಉದ್ಧಾರ ಮಾಡಲಿ. ಅದನ್ನು ಬೇಡ ಎನ್ನುವುದಿಲ್ಲ. ಆದರೆ, ಲಸಿಕೆ ವಿಚಾರದಲ್ಲೇ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ? ಕರ್ನಾಟಕ ಹಾಗೂ ಗುಜರಾತ್ ರಾಜ್ಯಗಳಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ. ಆದರೆ, ಗುಜರಾತ್ ರಾಜ್ಯಕ್ಕೆ ಮೀಸಲಿಡಲಾಗುತ್ತಿರುವ ಅರ್ಧದಷ್ಟು ಲಸಿಕೆಯೂ ರಾಜ್ಯಕ್ಕೆ ಸಿಗುತ್ತಿಲ್ಲ. ಈ ಬಗ್ಗೆ ಸಿಎಂ ಯಡಿಯೂರಪ್ಪ ಅವರು ಧ್ವನಿ ಎತ್ತಬೇಕೆಂದು ಹೇಳಿದ್ದಾರೆ.
ರಾಜ್ಯದಲ್ಲಿ ಲಾಕ್‌ಡೌನ್, ಸೀಲ್‌ಡೌನ್ ಸಹ ಮಾಡಲಾಯಿತು. ವ್ಯಾಪಾರಿಗಳು, ಉದ್ಯಮಿಗಳ ಪರ ನಾವಿದ್ದೇವೆ ಎಂದು ಬಿಂಬಿಸಿಕೊಂಡಿದ್ದ ಬಿಜೆಪಿಯವರು ತೆರಿಗೆ ಮನ್ನಾ ಏಕೆ ಮಾಡಲಿಲ್ಲ? ನಿರುದ್ಯೋಗ ಸೃಷ್ಟಿಸಿದ್ದೇ ಗುಜರಾತ್ ಮಾಡೆಲ್ಲಾ? ಈ ಬಗ್ಗೆ ಎಲ್ಲ ಸಂಸದರೂ ಮಾತನಾಡಬೇಕು. ಯಾವ ಮಾಡೆಲ್ ಆದರೂ ನೀಡಲಿ. ಆದರೆ ನಮ್ಮ ಜನರಿಗೆ ನ್ಯಾಯ ಒದಗಿಸಲಿ. ಸರಿಯಾಗಿ ಕಾನೂನು ಸುವ್ಯವಸ್ಥೆ ಕಾಪಾಡಲಿ ಎಂದು ಒತ್ತಾಯಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ