ವರ್ತಕರು, ಗ್ರಾಹಕರಿಗೆ ಸಮಸ್ಯೆಯಾಗಬಾರದು; ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ: ಅಧಿಕಾರಿಗಳಿಗೆ ರಾಕೇಶ್ ಸಿಂಗ್ ಸೂಚನೆ
ಬೆಂಗಳೂರು: ನಗರದ ಕೃಷ್ಣರಾಜ ಮಾರುಕಟ್ಟೆಯ (ಕೆ.ಆರ್.ಮಾರುಕಟ್ಟೆ) ನವೀಕರಣ ಕಾಮಗಾರಿ ಅನುಷ್ಠಾನದ ಸಂದರ್ಭದಲ್ಲಿ ವರ್ತಕರು ಹಾಗೂ ಗ್ರಾಹಕರಿಗೆ ಯಾವುದೇ ರೀತಿ ತೊಂದರೆಯಾಗದಂತೆ ಎಚ್ಚರ ವಹಿಸಬೇಕು. ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಅವರು ಸೋಮವಾರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೆತ್ತಿಕೊಂಡಿರುವ ಕೆ.ಆರ್.ಮಾರುಕಟ್ಟೆಯ ನವೀಕರಣ ಕಾಮಗಾರಿಯಯನ್ನು ಸೋಮವಾರ ಪರೀಶೀಲನೆ ನಡೆಸಿದ ಅವರು, ಬೀದಿ ಬದಿ ವ್ಯಾಪಾರಿಗಳ ಜೊತೆಗೂ ಮಾತನಾಡಿದರು.
ನಿಮಗೆ ಯಾವುದೇ ರೀತಿಯಲ್ಲೂ ತೊಂದರೆಯಾಗುವುದಿಲ್ಲ. ವ್ಯವಸ್ಥಿತವಾದ ಸ್ಥಳದಲ್ಲಿ ವ್ಯಾಪಾರ ಮುಂದುವರಿಸಲು ಅವಕಾಶ ಮಾಡಿಕೊಡಲಾಗುವುದು. ಕಾಮಗಾರಿ ನಡೆಸಲು ಸಹಕರಿಸಬೇಕು. ಆಗ ಮಾತ್ರ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯ’ ಎಂದು ವ್ಯಾಪಾರಿಗಳ ಮನವೊಲಿಸುವ ಪ್ರಯತ್ನ ನಡೆಸಿದರು. ಬಳಿಕ ವ್ಯಾಪಾರಿಗಳು ಕಾಮಗಾರಿಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಬಳಿಕ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು, ಅತಿ ಜನದಟ್ಟಣೆ ಇರುವ ಪ್ರದೇಶದಲ್ಲಿ ಕಾಮಗಾರಿ ಕೈಗೆತ್ತಿಕೊಂಡಾಗ ಸಮಸ್ಯೆಗಳು ಸಹಜ. ಎದುರಾಗುವ ತೊಡಕುಗಳನ್ನು ಇತ್ಯರ್ಥಪಡಿಸಿಕೊಂಡು ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿದ್ದೇವೆ ಎಂದು ಹೇಳಿದರು.
ಇದೇ ವೇಳೆ ಅವೆನ್ಯೂ ರಸ್ತೆಯನ್ನೂ ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿ ಮಾಹಿತಿ ನೀಡಿದ ಗೌರವ್ ಗುಪ್ತಾ ಅವರು, ಸ್ಮಾರ್ಟ್ ಸಿಟಿ ಯೋಜನೆ ಅಡಿ 1.80 ಕಿ.ಮೀ ಉದ್ದದ ಅವೆನ್ಯೂ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ವೈಟ್ ಅಥವಾ ಬ್ಲಾಕ್ ಟಾಪಿಂಗ್ ಕುರಿತು ಮಂಗಳವಾರ ನಿರ್ಧಾರ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಕೆ.ಆರ್.ಮಾರುಕಟ್ಟೆ ಜಂಕ್ಷನ್ ಅಭಿವೃದ್ಧಿ ಕಾಮಗಾರಿ ಶೇ 60 ರಷ್ಟು ಪೂರ್ಣಗೊಂಡಿದೆ ಎಂದು ಹೇಳಿದರು. ಅಲ್ಲದೆ, ಕೆ.ಆರ್.ಮಾರುಕಟ್ಟೆ, ಅವೆನ್ಯೂ ರಸ್ತೆ ಹಾಗೂ ಕೆ.ಆರ್.ಮಾರುಕಟ್ಟೆ ಜಕ್ಷನ್ ನಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಸಾಧ್ಯವಾದಷ್ಟು ಶೀಘ್ರಗತಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ