ಕರ್ನಾಟಕದ ಮಾಲೂರಿನಲ್ಲಿ 'ಕೋವ್ಯಾಕ್ಸಿನ್' ಲಸಿಕೆ ಉತ್ಪಾದನೆ: ಭಾರತ್ ಬಯೋಟೆಕ್ ಗೆ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮೋದನೆ

ಮಾರಕ ಕೊರೋನಾ ವೈರಸ್ ಸೋಂಕಿಗೆ ನೀಡಲಾಗುತ್ತಿರುವ ಕೋವ್ಯಾಕ್ಸಿನ್ ಲಸಿಕೆ ಇನ್ನು ಮುಂದೆ ಕರ್ನಾಟಕದಲ್ಲೇ ಉತ್ಪಾದನೆಯಾಗಲಿದ್ದು, ಈ ಸಂಬಂಧ ಲಸಿಕೆ ಉತ್ಪಾದಿಸುತ್ತಿರುವ ಭಾರತ್ ಬಯೋಟೆಕ್ ಸಂಸ್ಥೆ ಗುರುವಾರ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮೋದನೆ ಪಡೆದಿದೆ.
ಕೋವ್ಯಾಕ್ಸಿನ್
ಕೋವ್ಯಾಕ್ಸಿನ್

ಬೆಂಗಳೂರು: ಮಾರಕ ಕೊರೋನಾ ವೈರಸ್ ಸೋಂಕಿಗೆ ನೀಡಲಾಗುತ್ತಿರುವ ಕೋವ್ಯಾಕ್ಸಿನ್ ಲಸಿಕೆ ಇನ್ನು ಮುಂದೆ ಕರ್ನಾಟಕದಲ್ಲೇ ಉತ್ಪಾದನೆಯಾಗಲಿದ್ದು, ಈ ಸಂಬಂಧ ಲಸಿಕೆ ಉತ್ಪಾದಿಸುತ್ತಿರುವ ಭಾರತ್ ಬಯೋಟೆಕ್ ಸಂಸ್ಥೆ ಗುರುವಾರ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮೋದನೆ ಪಡೆದಿದೆ.

ಈ ಹಿಂದೆಯೇ ಮಾಲಿನ್ಯ ನಿಯಂತ್ರಣ ಮಂಡಳಿಗೆ ಭಾರತ್ ಬಯೋಟೆಕ್ ಈ ಸಂಬಂಧ ಅರ್ಜಿ ಸಲ್ಲಿಕೆ ಮಾಡಿತ್ತಾದರೂ, ತಾಂತ್ರಿಕವಾಗಿ ಆರ್ಜಿ ಊರ್ಜಿತವಾಗಿರಲಿಲ್ಲ. ಹೀಗಾಗಿ ಭಾರತ್ ಬಯೋಟೆಕ್ ಸಂಸ್ಥೆ ಮತ್ತೊಂದು ಹೊಸ ಅರ್ಜಿ ಸಲ್ಲಿಸಿ ಈ ಅನುಮೋದನೆ ಪಡೆದಿದೆ ಎನ್ನಲಾಗಿದೆ. ತುರ್ತು ಸಾಂಕ್ರಾಮಿಕ  ಪರಿಸ್ಥಿತಿಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಶೀಘ್ರವಾಗಿ ಅರ್ಜಿ ವಿಲೇವಾರಿ ಮಾಡುವ ಮೂಲಕ ಭಾರತ್ ಬಯೋಟೆಕ್ ಸಂಸ್ಥೆ ಮನವಿಗೆ ಸ್ಪಂಧಿಸಿದೆ.

ಪ್ರಸ್ತುತ ಸಾಂಕ್ರಾಮಿಕ ಪರಿಸ್ಥಿತಿಯನ್ನು ಅವಲೋಕಿಸಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಭಾರತ್ ಬಯೋಟೆಕ್ ಸಂಸ್ಥೆಯ ಅರ್ಜಿಯನ್ನು ಶ್ರೀಘಗತಿಯಲ್ಲಿ ವಿಲೇವಾರಿ ಮಾಡಿ ಮಾಲೂರು ಲಸಿಕೆ ತಯಾರಿಕಾ ಘಟಕ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಮಾಲೂರಿನಲ್ಲಿ ಪ್ರಸ್ತುತ ಪ್ರಾಣಿಗಳ ಕಾಲು-ಬಾಯಿ ರೋಗದ ಲಸಿಕೆ ತಯಾರಿಸಲಾಗುತ್ತಿದ್ದು, ಇದೀಗ ಇಲ್ಲಿ ಕ್ಯೋವ್ಯಾಕ್ಸಿನ್ ಲಸಿಕೆಯನ್ನು ತಯಾರಿಸಲಾಗುತ್ತದೆ. ಈಗಾಗಲೇ ಭಾರತ್ ಬಯೋಟೆಕ್ ಸಂಸ್ಥೆ ಭಾರತ್ ಬಯೋವೆಟ್ ಸಂಸ್ಥೆಯ ಸಹಭಾಗಿತ್ವದಲ್ಲಿ ಕ್ಯಾವ್ಯಾಕ್ಸಿನ್ ಲಸಿಕೆಯನ್ನು ತಯಾರಿಸುತ್ತಿದೆ.

ಮೊದಲ ಅರ್ಜಿ ಹಿಂಪಡೆದ ಭಾರತ್ ಬಯೋಟೆಕ್
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಲಭ್ಯವಾದ ಮಾಹಿತಿ ಅನ್ವಯ ಈ ಹಿಂದೆ ಭಾರತ್ ಬಯೋಟೆಕ್ ಸಂಸ್ಥೆ ತನ್ನ ಮೊದಲ ಅರ್ಜಿ ಅಂದರೆ ಮೇ 21, 2021 ರಂದು ಸಲ್ಲಿಸಿರುವ ಅರ್ಜಿಯಲ್ಲಿ ಕೋವ್ಯಾಕ್ಸಿನ್ ಲಸಿಕೆ ಉತ್ಪಾದನೆಗೆ ಪ್ರತ್ಯೇಕ ಜಾಗದಲ್ಲಿ ಘಟಕ ಸ್ಥಾಪನೆ ಮಾಡುವುದಾಗಿ ಹೇಳಿತ್ತು. ಆದರೆ ಪ್ರಸ್ತುತ  ಸಾಂಕ್ರಾಮಿಕ ಸಂದರ್ಭದಲ್ಲಿ ಹೊಸದಾಗಿ ಘಟಕ ಸ್ಥಾಪನೆಗೆ ಸಮಯ ಹಿಡಿಯುತ್ತದೆ ಎಂಬ ಕಾರಣದಿಂದಾಗಿ ಭಾರತ್ ಬಯೋಟೆಕ್ ಸಂಸ್ಥೆ ತನ್ನ ಯೋಜನೆ ಬದಲಿಸಿ ಈಗಾಗಲೇ ಮಾಲೂರಿನಲ್ಲಿ ಅಸ್ಥಿತ್ವದಲ್ಲಿರುವ ಲಸಿಕೆ ತಯಾರಿಕಾ ಘಟಕದಲ್ಲೇ ಲಸಿಕೆ ತಯಾರಿಕೆಗೆ ಅನುಮತಿ ಕೇಳಿತ್ತು. ಆದರೆ ಈ ಬಗ್ಗೆ ಆಕ್ಷೇಪ  ವ್ಯಕ್ತಪಡಿಸಿದ್ದ ಮಾಲಿನ್ಯ ನಿಯಂತ್ರಣ ಮಂಡಳಿ ಇದು ಫಾರ್ಮಾ ಉದ್ಯಮವಾಗಿದ್ದು, ‘ಕೆಂಪು ವರ್ಗ’ (ಹೆಚ್ಚು ಮಾಲಿನ್ಯಕಾರಕ ವರ್ಗ)ದ ಅಡಿಯಲ್ಲಿ ಬರುತ್ತದೆ ಎಂದು ಹೇಳಿತ್ತು.

ಹೀಗಾಗಿ ತಜ್ಞರ ಅಭಿಪ್ರಾಯದ ಮೇರೆಗೆ ಮೊದಲ ಅರ್ಜಿಯನ್ನು ಹಿಂಪಡೆದು ಭಾರತ್ ಬಯೋಟೆಕ್ ಸಂಸ್ಥೆ ಮತ್ತೆ ಹೊಸದಾಗಿ ಅರ್ಜಿ ಸಲ್ಲಿಸಿತ್ತು. ಈ ಸಂಬಂಧ ಭಾರತ್ ಬಯೋವೆಟ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ಈಗಾಗಲೇ ಮಾಲೂರಿನಲ್ಲಿ ಅಸ್ಥಿತ್ವದಲ್ಲಿರುವ ಘಟಕದಲ್ಲಿ ಲಸಿಕೆ ತಯಾರಿಸಲು ಅನುಮತಿ  ಕೋರಿತ್ತು. ಹೀಗಾಗಿ ಇದು ಕಿತ್ತಳೆ ವರ್ಗಕ್ಕೆ (ಮಧ್ಯಮ ಮಾಲಿನ್ಯಕಾರಕ) ಬರುವುದರಿಂದ ಮಾಲಿನ್ಯ ನಿಯಂತ್ರಣ ಮಂಡಳಿ ಅರ್ಜಿಯನ್ನೇ ಶೀಘ್ರಗತಿಯಲ್ಲಿ ವಿಲೇವಾರಿ ಮಾಡಿ ಅನುಮೋದನೆ ನೀಡಿದೆ ಎಂದು ತಿಳಿದುಬಂದಿದೆ.

ಇತ್ತೀಚೆಗಷ್ಟೇ ಮಾಲಿನ್ಯ ನಿಯಂತ್ರಣ ಮಂಡಳಿ ಸ್ಪುಟ್ನಿಕ್ ವಿ ಲಸಿಕೆ ತಯಾರಿಕೆಗೆ ಅನುಮತಿ ನೀಡಿದ್ದು, ಬೆಂಗಳೂರು ಹೊರ ವಲಯದ ಬೊಮ್ಮಸಂದ್ರದ ಜಿಗಣಿಯಲ್ಲಿ ಘಟಕ ಸ್ಥಾಪನೆಗೆ ಅರ್ಜಿ ಸಲ್ಲಿಸಲಾಗಿತ್ತು. ಕೆಂಪು ವರ್ಗದ ಅಡಿಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಈ ಅರ್ಜಿಯನ್ನು ವಿಲೇವಾರಿ ಮಾಡಿತ್ತು.

ರಾಷ್ಟ್ರೀಯ ಹಿತಾಸಕ್ತಿಯಿಂದಾಗಿ ಯೋಜನೆ ಬದಲಾವಣೆ: ಭಾರತ್ ಬಯೋಟೆಕ್
ಇನ್ನು ಮರು ಅರ್ಜಿ ಸಲ್ಲಿಕೆ ಮತ್ತು ಯೋದನೆ ಬದಲಾವಣೆ ಕುರಿತು ಸ್ಪಷ್ಟನೆ ನೀಡಿರುವ ಭಾರತ್ ಬಯೋಟೆಕ್ ಸಂಸ್ಥೆ ರಾಷ್ಟ್ರೀಯ ಹಿತಾಸಕ್ತಿಯಿಂದಾಗಿ ಯೋಜನೆ ಬದಲಾವಣೆ ಮಾಡಿರುವುದಾಗಿ ಹೇಳಿದೆ. ಈ ಬಗ್ಗೆ ಭಾರತ್ ಬಯೋಟೆಕ್ ಮೂಲಗಳು ನೀಡಿರುವ ಮಾಹಿತಿಯಂತೆ ಮೊದಲ ಅರ್ಜಿಯಲ್ಲಿರುವ ಅಂಶಗಳು  ಮಾಲಿನ್ಯ ಮಂಡಳಿ ಕೆಂಪುವರ್ಗಕ್ಕೆ ಬರುತ್ತವೆ. ಇದು ಅರ್ಜಿ ವಿಲೇವಾರಿಯಲ್ಲಿ ತಡವಾಗುತ್ತದೆ. ಪ್ರಸ್ತುತ ಸಂದರ್ಭದಲ್ಲಿ ಲಸಿಕೆ ಉತ್ಪಾದನೆ ಅತ್ಯಂತ ಪ್ರಮುಖವಾಗಿದ್ದು, ಇದೇ ಕಾರಣಕ್ಕೆ ಯೋಜನೆಯನ್ನು ಬದಲಿಸಿ ತಾವು ಕಾಲುಬಾಯಿ ರೋಗಕ್ಕೆ ಲಸಿಕೆ ನಿರ್ಮಾಣ ಮಾಡುತ್ತಿರುವ ಭಾರತ್ ಬಯೋವೆಟ್  ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ಅಲ್ಲಿಯೇ ಲಸಿಕೆ ತಯಾರಿಸಲು ನಿರ್ಧರಿಸಿದೆವು. ಈ ಸಂಬಂಧ ಒಪ್ಪಂದ ಕೂಡ ಏರ್ಪಟ್ಟಿದೆ ಎಂದು ಮಾಹಿತಿ ನೀಡಿದೆ.

17 ದಶಲಕ್ಷ ಬಾಟಲ್ ಲಸಿಕೆ ಉತ್ಪಾದನೆಗೆ ಕೆಎಸ್‌ಪಿಸಿಬಿ ಅನುಮತಿ
ಇನ್ನು ಭಾರತ್ ಬಯೋವೆಟ್ ಸಂಸ್ಥೆ 50 ದಶಲಕ್ಷ ಬಾಟಲ್ ಲಸಿಕೆ ಉತ್ಪಾದನೆಗೆ ಅನುಮತಿ ಕೋರಿತ್ತು. ಆದರೆ ಕೆಎಸ್‌ಪಿಸಿಬಿ 17 ದಶಲಕ್ಷ ಬಾಟಲ್ ಲಸಿಕೆ ಉತ್ಪಾದನೆಗೆ ಅನುಮತಿ ನೀಡಿದೆ. ಕೆಬಿಎಸ್‌ಪಿಸಿಬಿ ಎಲ್ಲಾ ಪರಿಸರ ಮಾನದಂಡಗಳನ್ನು ಪಾಲಿಸಲಾಗುವುದು ಎಂಬ ಷರತ್ತಿನ ಮೇಲೆ ಅನುಮತಿ ನೀಡಿದ್ದು, ಔಷಧ ಉತ್ಪಾದನೆಯು ಈ ಸಾಮರ್ಥ್ಯವನ್ನು ಮೀರಬಾರದು. ಎಂಬ ಷರತ್ತಿನ ಮೇರೆಗೆ 2026 ರ ಜೂನ್ 30 ರವರೆಗೆ ಉತ್ಪಾದನೆಗೆ ಅನುಮತಿ ನೀಡಲಾಗಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದೇ ವಿಚಾರವಾಗಿ ಸ್ಪಷ್ಟನೆ ನೀಡಿರುವ ಕೆಎಸ್‌ಪಿಸಿಬಿ ಅಧ್ಯಕ್ಷ ಬ್ರಿಜೇಶ್ ಕುಮಾರ್ ಅವರು, ಸಂಸ್ಥೆಯ ಪರಿಷ್ಕೃತ ಅರ್ಜಿಯನ್ನು ಕೋಲಾರದ ಪ್ರಾದೇಶಿಕ ಕಚೇರಿಗೆ ಸಲ್ಲಿಸಲಾಗಿತ್ತು. ಇದು ಬುಧವಾರ ಬೆಂಗಳೂರಿನ ಪ್ರಧಾನ ಕಚೇರಿಗೆ ಬಂದಿದ್ದು, ಗುರುವಾರ ಸಹಿ ಹಾಕಲಾಯಿತು ಎಂದು ಹೇಳಿದ್ದಾರೆ. ಅಲ್ಲದೆ ಘಟಕಕ್ಕೆ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com