ಅಮೇಜಾನ್ ಶಾಪಿಂಗ್ ವೆಬ್ ಸೈಟ್ ನಲ್ಲಿ ಕನ್ನಡ ಧ್ವಜ ಹೋಲುವ ಬಿಕಿನಿ
ಅಮೇಜಾನ್ ಶಾಪಿಂಗ್ ವೆಬ್ ಸೈಟ್ ನಲ್ಲಿ ಕನ್ನಡ ಧ್ವಜ ಹೋಲುವ ಬಿಕಿನಿ

ಮಹಿಳೆಯರ ಒಳ ಉಡುಪಿನಲ್ಲಿ ಕನ್ನಡದ ಬಾವುಟ; ಅಮೆಜಾನ್ ಆನ್ಲೈನ್ ಶಾಪಿಂಗ್‌ನಲ್ಲಿ ಕನ್ನಡಕ್ಕೆ ಅವಮಾನ!

ಗೂಗಲ್ ಆಯಿತು ಇದೀಗ ಅಮೇಝಾನ್ ಆನ್ ಲೈನ್ ಶಾಪಿಂಗ್ ವೆಬ್ ಸೈಟ್‌ನಲ್ಲಿ ಕನ್ನಡ ಧ್ವಜಕ್ಕೆ ಅವಮಾನವಾಗಿರುವ ದೃಶ್ಯ ಕಂಡುಬಂದಿದ್ದು, ಮಹಿಳೆಯರ ಒಳ ಉಡುಪಿನಲ್ಲಿ ಕನ್ನಡದ ಬಾವುಟ ಲಾಂಛನ ಹಾಗೂ ರಾಷ್ಟ್ರಧ್ವಜದ ಅಶೋಕ ಚಕ್ರದ ಚಿತ್ರವನ್ನು ಹಾಕಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಬೆಂಗಳೂರು: ಗೂಗಲ್ ಆಯಿತು ಇದೀಗ ಅಮೇಝಾನ್ ಆನ್ ಲೈನ್ ಶಾಪಿಂಗ್ ವೆಬ್ ಸೈಟ್‌ನಲ್ಲಿ ಕನ್ನಡ ಧ್ವಜಕ್ಕೆ ಅವಮಾನವಾಗಿರುವ ದೃಶ್ಯ ಕಂಡುಬಂದಿದ್ದು, ಮಹಿಳೆಯರ ಒಳ ಉಡುಪಿನಲ್ಲಿ ಕನ್ನಡದ ಬಾವುಟ ಲಾಂಛನ ಹಾಗೂ ರಾಷ್ಟ್ರಧ್ವಜದ ಅಶೋಕ ಚಕ್ರದ ಚಿತ್ರವನ್ನು ಹಾಕಿರುವುದಕ್ಕೆ ತೀವ್ರ ವಿರೋಧ  ವ್ಯಕ್ತವಾಗುತ್ತಿದೆ.

ಗೂಗಲ್ ಸರ್ಚ್ ನಲ್ಲಿ ಕನ್ನಡದ ಕುರಿತ ವಿವಾದದ ಬೆನ್ನಲ್ಲೇ ಅಮೇಜಾನ್ ನಲ್ಲೂ ಕನ್ನಡ ಭಾಷೆ ಮತ್ತು ಲಾಂಛನಕ್ಕೆ ಅಪಮಾನವಾಗುವ ಘಟನೆ ನಡೆದಿದ್ದು, ಅಮೆಜಾನ್ ಕೆನಡಾ ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಕನ್ನಡದ ಬಾವುಟದ ಬಣ್ಣ ಹಾಗೂ ಕರ್ನಾಟಕದ ರಾಜ್ಯ ಲಾಂಛನವನ್ನು ಹೊಂದಿರುವ ಹೆಣ್ಣುಮಕ್ಕಳ ಒಳ  ಉಡುಪನ್ನು ಮಾರಾಟಕ್ಕಿರಿಸಿ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದೆ. ಕೆನಡಾದಲ್ಲಿ ಚಾಲ್ತಿಯಲ್ಲಿರುವ ಅಮೆಜಾನ್  ವೆಬ್‌ಸೈಟ್‌ನಲ್ಲಿ (Amazon.ca) ಕರ್ನಾಟಕ ಬಾವುಟ ಹೋಲುವ ಮತ್ತು ಕರ್ನಾಟಕದ ಲಾಂಛನವಿರುವ ಒಳ ಉಡುಪನ್ನು ಮಾರಾಟಕ್ಕೆ ಪ್ರದರ್ಶಿಸಿತ್ತು.

ವಿರೋಧದ ಬೆನ್ನಲ್ಲೇ ಚಿತ್ರ ಮಾತ್ರ ಬದಲಿಸಿದ ಅಮೇಜಾನ್!
ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಕನ್ನಡಾಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಮೆಜಾನ್ ಕಂಪನಿ ವಿರುದ್ಧ ಕಿಡಿಕಾರಿದ್ದಾರೆ. ಅಲ್ಲದೆ ಕ್ರಮ ಕೈಗೊಳ್ಳಲು ಅಮೆಜಾನ್ ಕಂಪನಿಗೆ ಆಗ್ರಹಿಸಿದ್ದಾರೆ. ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಎಚ್ಚೆತ್ತ ಅಮೇಜಾನ್ ಸಂಸ್ಥೆ ವಿವಾದಿತ ಚಿತ್ರವನ್ನು ತೆಗೆದು  ಹಾಕಿದ್ದು, ಕರ್ನಾಟಕದ ಬಾವುಟ ಹಾಗೂ ಲಾಂಛನವನ್ನು ಹೋಲುವ ಮಹಿಳೆಯರ ಒಳ ಉಡುಪಿನ ಚಿತ್ರವನ್ನು ಬದಲಿಸಿದೆ. ಈ ಪುಟದಲ್ಲೀಗ ಬಿಕಿನಿ ಚಿತ್ರವೊಂದನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೂ ಹೆಸರಿನಲ್ಲಿ ಈಗಲೂ 'Flag of Karnataka' ಎಂಬ ಪದ ಉಳಿದಿದೆ. 

ಕಠಿಣ ಕ್ರಮದ ಭರವಸೆ ನೀಡಿದ ಸಚಿವರು
ವಿವಾದ ಬೆಳಕಿಗೆ ಬಂದಿರುವ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಕರ್ನಾಟಕ ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ, ಕೆನಡಾ ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಕನ್ನಡದ ಭಾಷೆ, ಸಂಸ್ಕೃತಿ ಮತ್ತು ಪರಂಪರೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕನ್ನಡ  ನೆಲದ ಶ್ರೇಷ್ಠತೆಯ ಅರಿವಿಲ್ಲದ ವಿದೇಶಿ ಸಂಸ್ಥೆಗಳು ಕನ್ನಡದ ಅಸ್ಮಿತೆಗೆ ಅವಮಾನ ಮಾಡುವಂತಹ ಯಾವುದೇ ಕೆಲಸ ಮಾಡಿದರೂ ಅದನ್ನು ನಾನು ಪ್ರಬಲವಾಗಿ ಖಂಡಿಸುತ್ತೇನೆ ಎಂದಿದ್ದಾರೆ.

'ಇತ್ತೀಚೆಗಷ್ಟೇ ಗೂಗಲ್‍ ಕನ್ನಡವನ್ನು ಅವಮಾನಿಸಿದ್ದು ಮಾಸುವ ಮುನ್ನವೇ ಅಮೇಜಾನ್ ಕಂಪನಿ  ಕನ್ನಡದ ಲಾಂಛನ ಹಾಗೂ ಕನ್ನಡ ಭಾವುಟದ ಬಣ್ಣವನ್ನು ಮಹಿಳೆಯರ ಉಡುಪುಗಳಿಗೆ ಬಳಸಿರುವುದು ಖಂಡನೀಯ. ಪದೇ ಪದೇ ಕನ್ನಡಿಗರ ಸ್ವಾಭಿಮಾನವನ್ನು ಕೆಣಕುವ ಸಾಹಸಕ್ಕೆ ವಿದೇಶಿ ಕಂಪನಿಗಳು ಕೈ ಹಾಕಬಾರದು. ಇದು ಕನ್ನಡಿಗರ ಸ್ವಾಭಿಮಾನದ ಪ್ರಶ್ನೆ. ಇಂತಹ ಕೃತ್ಯಗಳು ಹೆಚ್ಚುತ್ತಿರುವುದನ್ನು ಸಹಿಸಲಾಗುವುದಿಲ್ಲ, ಕೆನಡಾ ದೇಶದ  ಅಮೇಜಾನ್ ಕಂಪನಿ ಕನ್ನಡಿಗರ ಕ್ಷಮೆ ಕೇಳಬೇಕು. ಅಮೇಜಾನ್ ವಿರುದ್ಧ ತಕ್ಷಣವೇ ಕಾನೂನು ಕ್ರಮ ಜರುಗಿಸಲಾಗುವುದು' ಎಂದು ಟ್ವೀಟ್ ಮಾಡಿದ್ದಾರೆ.

ಮಚ್ಚು ಚಳುವಳಿಯ ಎಚ್ಚರಿಕೆ ನೀಡಿದ ಕರವೇ 
ಅಮೇಜಾನ್ ಕಂಪನಿ ಮಹಿಳೆಯರ ಒಳ ಉಡುಪಿನಲ್ಲಿ ಕನ್ನಡದ ಬಾವುಟ, ಲಾಂಛನ ಹಾಗೂ ರಾಷ್ಟ್ರಧ್ವಜದ ಅಶೋಕ ಚಕ್ರದ ಚಿತ್ರವನ್ನು ಹಾಕಿರುವುದಕ್ಕೆ ಶನಿವಾರ ತೀವ್ರ ವಿರೋಧ ವ್ಯಕ್ತಪಡಿಸಿದ ಕರವೇ ಬೆಂಗಳೂರಿನ ಮೈಸೂರು ವೃತ್ತ ಸೇರಿದಂತೆ ಕೆಲವೆಡೆ ಪ್ರತಿಭಟನೆ ನಡೆಸಿ ಖಂಡಿಸಿದೆ. ಈ ಬಗ್ಗೆ  ಮಾತನಾಡಿರುವ ಕರವೇ ಪ್ರವೀಣ್ ಶೆಟ್ಟಿ ಬಣ, 'ಇತ್ತೀಚೆಗೆ ಗೂಗಲ್ ನಲ್ಲೂ ಹೀಗೆ ಆಗಿತ್ತು. ಈ ಕೂಡಲೇ ಅಮೇಜಾನ್ ಸಂಸ್ಥೆ ಕ್ಷಮೆ ಕೇಳಬೇಕು. ರಾಜ್ಯ ಸರ್ಕಾರ ಕನ್ನಡಿಗರಿಗಾಗಿಯೇ ಒಂದು ಸೈಬರ್ ಕ್ರೈಮ್ ಸೆಲ್ ಶುರು ಮಾಡಬೇಕು. ಇದೇ ರೀತಿ ಕನ್ನಡಿಗರ ಅವಮಾನ ಮಾಡಿದರೆ ಮಸ್ಕಾ ಚಳುವಳಿ ಬಿಟ್ಟು, ಮಚ್ಚು  ಹಿಡಿದು ಚಳುವಳಿ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೇ ಕನ್ನಡಿಗರ ಸ್ವಾಭಿಮಾನದ ಅಲೆಗೆ ಬೆದರಿದ ಗೂಗಲ್, ಕನ್ನಡ ಭಾಷೆಯ ಕುರಿತ ಅವಹೇಳನಕಾರಿ ವಿಷಯ ತೋರಿಸುತ್ತಿದ್ದ ವೆಬ್‌ಸೈಟ್‌ನ ವಿವಾದಾತ್ಮಕ ಪುಟವನ್ನು ತೆರವುಗೊಳಿಸಿತ್ತು. ಅಲ್ಲದೆ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದಿರುವುದಕ್ಕೆ ಕ್ಷಮೆಯಾಚಿಸಿತ್ತು. 
 

Related Stories

No stories found.

Advertisement

X
Kannada Prabha
www.kannadaprabha.com