

ನಂಜನಗೂಡು: ಹರಕೆ ಮುಡಿ ಕೂದಲು ಸಂಬಂಧ ನಂಜನಗೂಡು ಶ್ರೀಕಂಠೇಶ್ವರ ದೇವಾಲಯದ ಪರ ತಿ.ನರಸೀಪುರ ಸಿವಿಲ್ ನ್ಯಾಯಾಲಯ ಐತಿಹಾಸಿಕ ತೀರ್ಪು ಪ್ರಕಟಿಸಿದೆ.
25 ವರ್ಷಗಳಿಂದ ನಡೆಯುತ್ತಿದ್ದ ಹರಕೆ ಮುಡಿ ಕೂದಲು ಪ್ರಕರಣ ವಾದ ವಿವಾದಕ್ಕೆ ಅಂತಿಮ ತೆರೆ ಬಿದ್ದಿದ್ದು ಕೂದಲಿನ ಸಂಪೂರ್ಣ ಹಕ್ಕು ದೇವಾಲಯಕ್ಕೆ ಸೇರಿದ್ದು, ಕೂದಲು ತೆಗೆಯುವ ಕೆಲಸ ಮಾತ್ರ ನಯನಜ ಕ್ಷತ್ರಿಯ ಸಂಘಕ್ಕೆ ಸೇರಿದೆ ಎಂದು ನ್ಯಾಯಾಲಯ ತೀರ್ಪು ನೀಡಿದೆ.
ಏನಿದು ಪ್ರಕರಣ?
ಶ್ರೀಕಂಠೇಶ್ವರ ಸ್ವಾಮಿಯ ಮುಡಿಕಟ್ಟೆಯಲ್ಲಿ ಮುಡಿ ತೆಗೆಯುವ ಕಾರ್ಯದಲ್ಲಿ ತೊಡಗಿರುವ ನಯನಜ ಕ್ಷತ್ರಿಯ ಸಂಘದ ಸದಸ್ಯರು ತಾವು ವಂಶ ಪಾರಂಪರ್ಯ ಹರಕೆ ಮುಡಿ ಸೇವೆಯಲ್ಲಿ ತೊಡಗಿದ್ದೇವೆ. ಹಾಗಾಗಿ ಮುಡಿಕಟ್ಟೆಯ ಸಂಪೂರ್ಣ ಹಕ್ಕು ಸಂಘಕ್ಕೆ ಸೇರಿದೆ ಎನ್ನುವುದಾಗಿ ಪ್ರತಿಪಾದಿಸಿ ಮುಡಿಕಟ್ಟೆಯ ಸಂಪೂರ್ಣ ಆದಾಯವನ್ನು ಸಂಗದ ಸುಪರ್ದಿಗೆ ಪಡೆದಿದ್ದರು. ಇದರಿಂದ ದೇವಾಲಯದ ಬೊಕ್ಕಸಕ್ಕೆ ಲಕ್ಷಾಂತರ ರೂ. ನಷ್ಟವಾಗುತ್ತಿತ್ತು. ಹೀಗಾಗಿ ದೇವಾಲಯ ಆಡಳಿತ ಮುಡಿಸೇವೆಯನ್ನು ದೇವಾಲಯದ ವ್ಯಾಪ್ತಿಗೆ ತರುವ ಸಲುವಾಗಿ ಹೋರಾಟ ನಡೆಸಿತ್ತು. ಈ ಸಂಬಂಧ 25 ವರ್ಷದ ಹಿಂದೆ ಸಂಘ ತಿ. ನರಸೀಪುರ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿತ್ತು. ಇದೀಗ ಸುದೀರ್ಘ ವಾದ ವಿವಾದದ ಬಳಿಕ ಕೋರ್ಟ್ ಅರ್ಜಿದಾರರ ವಾದವನ್ನು ತಳ್ಳಿಹಾಕಿದೆ. ಮುಡಿ ಕೂದಲ ಸಂಪೂರ್ಣ ಹಕ್ಕು ದೇವಾಲಯದ್ದು, ನಂಜನಗೂಡಿನ ಎಲ್ಲಾ ನಯನಜ ಕ್ಷತ್ರಿಯ ಜನಾಂಗದವರೂ ಈ ಕೆಲಸ ಮಾಡಲು ಅರ್ಹರಿದ್ದಾರೆ ಎಂದು ತೀರ್ಪು ಪ್ರಕಟಿಸಿದೆ.