ಜುಲೈನಲ್ಲಿ ಎಸ್ಎಸ್ಎಲ್'ಸಿ ಪರೀಕ್ಷೆ: ಸಿದ್ಧತೆ ಆರಂಭಿಸಿದ ಅಧಿಕಾರಿಗಳು

ಕೊರೋನಾ ಸಾಂಕ್ರಾಮಿಕ ರೋಗದ ಆತಂಕದ ನಡುವಲ್ಲೇ ಜುಲೈ ಮೂರನೇ ವಾರದಲ್ಲಿ ಎಸ್ಎಸ್ಎಲ್'ಸಿ ಪರೀಕ್ಷೆ ಆರಂಭಿಸುವುದಾಗಿ ಹೇಳಿರುವ ರಾಜ್ಯ ಶಿಕ್ಷಣ ಇಲಾಖೆಯು, ಇದಕ್ಕಾಗಿ ಸಿದ್ಧತೆಗಳನ್ನು ಆರಂಭಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಕೊರೋನಾ ಸಾಂಕ್ರಾಮಿಕ ರೋಗದ ಆತಂಕದ ನಡುವಲ್ಲೇ ಜುಲೈ ಮೂರನೇ ವಾರದಲ್ಲಿ ಎಸ್ಎಸ್ಎಲ್'ಸಿ ಪರೀಕ್ಷೆ ಆರಂಭಿಸುವುದಾಗಿ ಹೇಳಿರುವ ರಾಜ್ಯ ಶಿಕ್ಷಣ ಇಲಾಖೆಯು, ಇದಕ್ಕಾಗಿ ಸಿದ್ಧತೆಗಳನ್ನು ಆರಂಭಿಸಿದೆ. 

ನಿನ್ನೆಯಷ್ಟೇ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ಎಸ್ಎಸ್ಎಲ್'ಸಿ ಪರೀಕ್ಷಾ ಪೂರ್ವ ಸಿದ್ಧತೆ ಬಗ್ಗೆ ರಾಜ್ಯದ ಎಲ್ಲಾ 34 ಶೈಕ್ಷಣಿಕ ಜಿಲ್ಲೆಗಳ ಜಿಲ್ಲಾ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಮಾತುಕತೆ ನಡೆಸಿದರು. 

ಈ ವೇಳೆ ಅಧಿಕಾರಿಗಳಿಗೆ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲು, ವಿದ್ಯಾರ್ಥಿಗಳು ಹಾಗೂ ಪೋಷಕರ ವಿಶ್ವಾಸ ಗಳಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.

ವಾರದೊಳಗೆ ಆಯಾ ಬಿಇಓ ಕಚೇರಿಗಳ ಮೂಲಕ ಮಾದರಿ ಪ್ರಶ್ನೆ ಪತ್ರಿಕೆಗಳು ಶಾಲೆಗಳಿಗೆ ತಲುಪಲಿವೆ. ಮಕ್ಕಳಿಗೆ ಓಎಂಆರ್ ಶೀಟ್ ರೂಪದಲ್ಲಿರುವ ಪ್ರಶ್ನೆ ಪತ್ರಿಕೆಗಳಿಗೆ ಹೇಗೆ ಉತ್ತರಿಸಬೇಕೆಂದು ಶಿಕ್ಷಕರು ಸಲಹೆ ನೀಡಬೇಕು ಎಂದರು. 

ಪರೀಕ್ಷೆಯಲ್ಲಿ ಪ್ರತಿ ವಿಷಯಕ್ಕೆ 40 ಅಂಕದ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಪ್ರತೀ ಪ್ರಶ್ನೆಗೂ ಪ್ರಶ್ನೆ ಪತ್ರಿಕೆಯಲ್ಲೇ ನಾಲ್ಕು ಉತ್ತರಗಳನ್ನೂ ನೀಡಲಾಗಿರುತ್ತದೆ. ಅದರಲ್ಲಿ ಸರಿಯಾದ ಉತ್ತರ ಗುರುತು ಮಾಡಬೇಕು. ಪ್ರಶ್ನೆಗಳು ನೇರ ಮತ್ತು ಸುಲಭವಾಗಿರುವುದರಿಂದ ಮಕ್ಕಳಿಗೆ ಹೆಚ್ಚಿನ ಗೊಂದಲಗಳಾಗುವುದಿಲ್ಲ ಎಂದು ತಿಳಿಸಿದರು. 

ಮಕ್ಕಳ ಮುಂದಿನ ವ್ಯಾಸಾಂಗಕ್ಕೆ ಎಸ್ಎಸ್ಎಲ್'ಸಿ ಪರೀಕ್ಷೆ ದಿಕ್ಸೂಚಿಯಾಗಲಿರುವ ಕಾರಣ ಕೋವಿಡ್ ತಹಬದಿಗೆ ಬಂದ ಬಳಿಕವಷ್ಟೇ ಕೇವಲ ಎರಡು ದಿನ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಈ ಬಾಗಿ ಬದಲಾಗಿರುವ ಪರೀಕ್ಷಾ ಪದ್ಧತಿ ಕುರಿತು ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸ ನಮ್ಮ ಅಧಿಕಾರಿಗಳು ಹಾಗೂ ಶಿಕ್ಷಕರು ಮಾಡಬೇಕು. ಸಾಧ್ಯವಾದರೆ ಶಾಲೆಗಳು ಆರಂಭಗೊಂಡ ಬಳಿಕ ನಿತ್ಯ ನಾಲ್ಕೈದು ಮಕ್ಕಳನ್ನು ಶಾಲೆಗೆ ಕರೆಸಿಕೊಂಡು ಆತ್ಮವಿಶ್ವಾಸ ತುಂಬಿ ಎಂದು ಸಲಹೆ ನೀಡಿದರು. 

ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ಶಿಕ್ಷಣಾಧಿಕಾರಿಗಳು ಹಾಗೂ ಶಿಕ್ಷಕರು ಮಕ್ಕಳನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರೆ. ಈ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ಮಾಡಲಾಗುತ್ತಿದೆ. ಕಳೆದ ವರ್ಷಕ್ಕಿಂತಲೂ ಈ ವರ್ಷ ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪರೀಕ್ಷಾ ಕೊಠಡಿಗೆ ಬರುವ ಶಿಕ್ಷಕರಿಗೆ 2 ಡೋಸ್ ಲಸಿಕೆ ಪಡೆಯುವುದನ್ನು ಕಡ್ಡಾಯ ಮಾಡಲಾಗಿದೆ. ಲಸಿಕೆ ಕುರಿತು ಈಗಾಗಲೇ ಆರೋಗ್ಯ ಇಲಾಖೆಯೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com