ಶಿಕ್ಷಕರನ್ನು ಕೊರೋನಾ ಕರ್ತವ್ಯದಿಂದ ಮುಕ್ತಗೊಳಿಸಿ: ಸರ್ಕಾರಕ್ಕೆ ಶಿಕ್ಷಣ ಇಲಾಖೆ ಪತ್ರ

ನೂತನ ಶೈಕ್ಷಣಿಕ ವರ್ಷ ಜುಲೈ 1 ರಿಂದ ಆರಂಭವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಈಗಾಗಲೇ ಕೊರೋನಾ ಕರ್ತವ್ಯಕ್ಕೆ ನಿಯೋಜಿಸಲಾಗಿರುವ ಶಿಕ್ಷಕರ ಕೈಬಿಡುವಂತೆ ಸರ್ಕಾರಕ್ಕೆ ಶಿಕ್ಷಣ ಇಲಾಖೆ ಪತ್ರ ಬರೆದಿದೆ ಎಂದು ತಿಳಿದುಬಂದಿದೆ. 
ಕೋವಿಡ್ ಕರ್ತವ್ಯದಲ್ಲಿರುವ ಶಿಕ್ಷಕರು
ಕೋವಿಡ್ ಕರ್ತವ್ಯದಲ್ಲಿರುವ ಶಿಕ್ಷಕರು

ಬೆಂಗಳೂರು: ನೂತನ ಶೈಕ್ಷಣಿಕ ವರ್ಷ ಜುಲೈ 1 ರಿಂದ ಆರಂಭವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಈಗಾಗಲೇ ಕೊರೋನಾ ಕರ್ತವ್ಯಕ್ಕೆ ನಿಯೋಜಿಸಲಾಗಿರುವ ಶಿಕ್ಷಕರ ಕೈಬಿಡುವಂತೆ ಸರ್ಕಾರಕ್ಕೆ ಶಿಕ್ಷಣ ಇಲಾಖೆ ಪತ್ರ ಬರೆದಿದೆ ಎಂದು ತಿಳಿದುಬಂದಿದೆ. 

ಈ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತ ಹಾಗೂ ಜಿಲ್ಲಾಧಿಕಾರಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ವಿ. ಅನ್ಬುಕುಮಾರ್‌ ಪತ್ರ ಬರೆದಿದ್ದು, 2021-22ನೇ ಸಾಲಿನ ಶೈಕ್ಷಣಿಕ ಚಟುವಟಿಕೆ ಆರಂಭವಾಗಿರುವುದರಿಂದ ಕೋವಿಡ್‌ ನಿಯಂತ್ರಣದ ಕರ್ತವ್ಯಕ್ಕೆ ನಿಯೋಜಿಸಲಾಗಿರುವ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರು, ಮುಖ್ಯ ಶಿಕ್ಷಕರು ಮತ್ತು ಸಿಬ್ಬಂದಿಯನ್ನು ಕರ್ತವ್ಯದಿಂದ ತಕ್ಷಣ ಬಿಡುಗಡೆ ಮಾಡಬೇಕೆಂದು ತಿಳಿಸಿದ್ದಾರೆ. 

ಜೂನ್ 15ರಿಂದ 2021-22ನೇ ಸಾಲಿನ ಶೈಕ್ಷಣಿಕ ವರ್ಷದ ದಾಖಲಾತಿ ಪ್ರಕ್ರಿಯೆ ಆರಂಭವಾಗಿದ್ದು, ಶಾಲೆಗಳಿಗೆ ಶಿಕ್ಷಕರು ತೆರಳಬೇಕಿದೆ. ಆದರೆ, ಬಹುತೇಕ ಶಿಕ್ಷಕರು ಕೋವಿಡ್‌ ಕರ್ತವ್ಯದಲ್ಲಿ ನಿರತರಾಗಿರುವುದರಿಂದ ಶಾಲೆಗೆ ಹೋಗುವುದು ಕಷ್ಟವಾಗಿದೆ. ಪ್ರಸ್ತುತ ಸನ್ನಿವೇಶದಲ್ಲಿ ನೇರ ತರಗತಿಗಳು ಆರಂಭ ಆಗದೇ ಇದ್ದರೂ, ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಆನ್‌ಲೈನ್‌, ಆಪ್‌ಲೈನ್‌, ದೂರದರ್ಶನ, ಬಾನುಲಿ, ಸ್ಮಾರ್ಟ್ ಫೋನ್, ಲ್ಯಾಪ್‌ಟಾಪ್‌ನಂಥ ಪರ್ಯಾಯ ಮಾರ್ಗಗಳ ಮೂಲಕ ಮಕ್ಕಳ ಕಲಿಕೆಯಲ್ಲಿ ನಿರಂತರತೆಯನ್ನು ಕಾಯ್ದುಕೊಳ್ಳಲು ಶಿಕ್ಷಕರು ಕಾರ್ಯನಿರ್ವಹಿಸುವುದು ಅನಿವಾರ್ಯವಾಗಿದೆ ಎಂದು ಪತ್ರದಲ್ಲಿ ಅವರು ವಿವರಿಸಿದ್ದಾರೆ.

ಎಸ್ಎಸ್ಎಲ್'ಸಿ ವಾರ್ಷಿಕ ಪರೀಕ್ಷೆಗಳನ್ನು ಜುಲೈ ಮೂರನೇ ವಾರದಲ್ಲಿ ನಡೆಸಬೇಕಾಗಿದೆ. ಅಲ್ಲದೆ, ಕೋವಿಡ್‌ ಕಾರಣದಿಂದ ಈ ಬಾರಿ ಪರೀಕ್ಷಾ ಕೇಂದ್ರಗಳನ್ನು ಹೆಚ್ಚಿಸಬೇಕಿದೆ. ಈ ಕೆಲಸಗಳಿಗೆ ಶಿಕ್ಷಕರು, ಮುಖ್ಯ ಶಿಕ್ಷಕರು ಮತ್ತು ಸಿಬ್ಬಂದಿಯ ಸೇವೆ ಅಗತ್ಯವಾಗಿದೆ’ ಎಂದೂ ಪತ್ರದಲ್ಲಿ ತಿಳಿಸಿದ್ದಾರೆ.

ಶಿಕ್ಷಣ ಇಲಾಖೆಯ ಈ ನಿರ್ಧಾರವನ್ನು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸ್ವಾಗತಿಸಿದೆ. 

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಚಂದ್ರಶೇಖರ್ ನುಗ್ಲಿ ಅವರು ಮಾತನಾಡಿ, ಬೆಂಗಳೂರಿನಲ್ಲಿ 20,000 ಶಿಕ್ಷಕರಿದ್ದು, ಇದರಲ್ಲಿ 10,000 ಶಿಕ್ಷಕರು ಬೆಂಗಳೂರು ಹೊರವಲಯದಲ್ಲಿ ಕೊರೋನಾ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದೀಗ ಶಿಕ್ಷಕರನ್ನು ಕೊರೋನಾ ಕರ್ತವ್ಯದಿಂದ ಕೈಬಿಡುವಂತೆ ಶಿಕ್ಷಣ ಇಲಾಖೆ ಸರ್ಕಾರಕ್ಕೆ ಪತ್ರ ಬರೆದಿರುವುದು ಉತ್ತಮವಾದ ಬೆಳವಣಿಗೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com