ಪ್ರಾಣಿ ಕಲ್ಯಾಣ ಸಹಾಯವಾಣಿ ಕೇಂದ್ರಕ್ಕೆ ಚಾಲನೆ ನೀಡುವುದಕ್ಕೂ ಮುನ್ನ ಜಾನುವಾರಿಗೆ ಪೂಜೆ ಸಲ್ಲಿಸಿದ ಸಿಎಂ ಯಡಿಯೂರಪ್ಪ ಹಾಗೂ ಸಚಿವ ಪ್ರಭು ಚೌವ್ಹಾಣ್
ಪ್ರಾಣಿ ಕಲ್ಯಾಣ ಸಹಾಯವಾಣಿ ಕೇಂದ್ರಕ್ಕೆ ಚಾಲನೆ ನೀಡುವುದಕ್ಕೂ ಮುನ್ನ ಜಾನುವಾರಿಗೆ ಪೂಜೆ ಸಲ್ಲಿಸಿದ ಸಿಎಂ ಯಡಿಯೂರಪ್ಪ ಹಾಗೂ ಸಚಿವ ಪ್ರಭು ಚೌವ್ಹಾಣ್

ಪ್ರಾಣಿ ಕಲ್ಯಾಣಕ್ಕೂ ಬಂತು ಸಹಾಯವಾಣಿ: ದೇಶದ ಮೊದಲ ಪಶು ಸಹಾಯವಾಣಿಗೆ ಸಿಎಂ ಯಡಿಯೂರಪ್ಪ ಚಾಲನೆ

ಪಶುಸಂಗೋಪನಾ ಇಲಾಖೆಯಿಂದ ಪ್ರಾಣಿ ಕಲ್ಯಾಣ ಸಹಾಯವಾಣಿ ಕೇಂದ್ರ ಆರಂಭಿಸಲಾಗಿದ್ದು, ಹೆಬ್ಬಾಳದ ಪಶುಭವನದಲ್ಲಿ‌ ಬುಧವಾರ ಸಿಎಂ ಬಿ.ಎಸ್‌.ಯಡಿಯೂರಪ್ಪ ಪ್ರಾಣಿ ಕಲ್ಯಾಣ ಸಹಾಯವಾಣಿ ಕೇಂದ್ರ ಉದ್ಘಾಟಿಸಿ ಚಾಲನೆ ನೀಡಿದರು.
Published on

ಬೆಂಗಳೂರು: ಪಶುಸಂಗೋಪನಾ ಇಲಾಖೆಯಿಂದ ಪ್ರಾಣಿ ಕಲ್ಯಾಣ ಸಹಾಯವಾಣಿ ಕೇಂದ್ರ ಆರಂಭಿಸಲಾಗಿದ್ದು, ಹೆಬ್ಬಾಳದ ಪಶುಭವನದಲ್ಲಿ‌ ಬುಧವಾರ ಸಿಎಂ ಬಿ.ಎಸ್‌.ಯಡಿಯೂರಪ್ಪ ಪ್ರಾಣಿ ಕಲ್ಯಾಣ ಸಹಾಯವಾಣಿ ಕೇಂದ್ರ ಉದ್ಘಾಟಿಸಿ ಚಾಲನೆ ನೀಡಿದರು.

ಇಂತಹದೊಂದು ಸಹಾಯವಾಣಿ ಆರಂಭಿಸಿದ ಇಲಾಖೆಯ ಕಾರ್ಯವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಶ್ಲಾಘಿಸಿದ್ದು, ದೇಶದಲ್ಲಿಯೇ ಮೊದಲ ಬಾರಿಗೆ ನಮ್ಮ ರಾಜ್ಯದಲ್ಲಿ ಆರಂಭಗೊಂಡಿರುವ ಸುಸಜ್ಜಿತ ಪ್ರಾಣಿ ಕಲ್ಯಾಣ ಸಹಾಯವಾಣಿ (ವಾರ್ ರೂಮ್) ರೈತರು, ಸಾಕಾಣಿಕೆದಾರರನ್ನು ತಲುಪಲು ಮತ್ತು ಜಾನುವಾರುಗಳ ಆರೋಗ್ಯ ಹಾಗೂ ಉತ್ಪಾದಕತೆ ಹೆಚ್ಚಿಸಲು ಪ್ರಮುಖ ಪಾತ್ರವಹಿಸಲಿದೆ ಎಂದು ಹೇಳಿದರು. 

ಪಶುಸಂಗೋಪನೆಯನ್ನೇ ಬಹಳಷ್ಟು ಜನರು ಆದಾಯದ ಮೂಲಕ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಸಮಸ್ಯೆಗಳು ಉದ್ಭವಿಸಿದಾಗ ಸಹಾಯವಾಣಿಗೆ ಕರೆ ಮಾಡಿ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಿದರು. 

ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಅವರು ಮಾತನಾಡಿ, 8277100200 ಸಹಾಯವಾಣಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ. ಇಲಾಖೆಯಿಂದ ಜಾನುವಾರು ಆರೋಗ್ಯ ಸೇವೆಗಳು ರೈತರ ಮನೆ ಬಾಗಿಲನ್ನು ತಲುಪಲಿವೆ ಎಂದು ತಿಳಿಸಿದರು. 

ಪಶುಸಂಗೋಪನಾ ಇಲಾಖೆಯು ಜಾನುವಾರು ಆರೋಗ್ಯ ಸೇವೆಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸಿದೆ. ಜಾನುವಾರು ಆರೋಗ್ಯ ಕಾಪಾಡುವಲ್ಲಿ ಹೆಚ್ಚು ಶ್ರಮವಹಿಸುತ್ತಿದೆ. ಇದೀಗ ಈ ಸಹಾಯವಾಣಿಯ ಮೂಲಕ ಪಶುಪಾಲಕರಿಗೆ ಮಹತ್ತರ ಕೊಡುಗೆ ನೀಡಿದೆ ಎಂದು ಹೇಳಿದರು. 

ಸಹಾಯವಾಣಿ ಕುರಿತು ಮಾಹಿತಿ ನೀಡಿರುವ ಹೆಬ್ಬಾಳದ ಇನ್ಸ್ಟಿಟ್ಯೂಟ್ ಆಫ್ ಅನಿಮಲ್ ಹೆಲ್ತ್ ಅಂಡ್ ವೆಟರ್ನರಿ ಬಯೋಲಾಜಿಕಲ್ಸ್ ಸಂಸ್ಥೆಯ ನಿರ್ದೇಶಕ ಡಾ.ಬಿ.ಎನ್.ಶಿವರಾಮ್ ಅವರು, ಸಹಾಯವಾಣಿಯಲ್ಲಿ ಒಟ್ಟು 24 ಮಂದಿ ಕಾರ್ಯನಿರ್ವಹಿಸಲಿದ್ದು, ಮೂರು ತಂಡಗಳಾಗಿ 24*7 ರಂತೆ ಕಾರ್ಯನಿರ್ವಹಿಸಲಿದ್ದಾರೆ. ಜನರು ವಾಟ್ಸಾಪ್ ಮೂಲಕವೂ ಮಾಹಿತಿಗಳನ್ನು ನೀಡಬಹುದು. ಮಾಹಿತಿ ಪಡೆದ ಕೂಡಲೇ ಸ್ಥಳಕ್ಕೆ ಪಶುವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿ ಮತ್ತು ವೈದ್ಯಕೀಯ ಸಿಬ್ಬಂದಿಗಳು ತೆರಳಿ ಅಗತ್ಯ ಕ್ರಮಗಳ ಕೈಗೊಳ್ಳಲಿದ್ದಾರೆಂದು ಹೇಳಿದ್ದಾರೆ. 

ಪಕ್ಷಿ ಸೇರಿದಂತೆ ಹಲವು ಪ್ರಾಮಿಗಳಿಗೆ ಸಹಾಯ ಕೇಂದ್ರಗಳಿವೆ. ಆದರೆ, ಇಲಾಖೆ ವತಿಯಿಂದ ಆರಂಭಿಸುತ್ತಿರುವ ಮೊದಲ ಸಹಾಯವಾಣಿ ಇದಾಗಿದೆ. ವೈದ್ಯಕೀಯ ವಾರ್ ರೂಮ್ ನಂತೆಯೇ ಈ ವಾರ್ ರೂಮ್ ಕೂಡ ಕಾರ್ಯನಿರ್ವಹಿಸಲಿದೆ. ಗಾಯಗೊಂಡಿರುವ, ಅನಾರೋಗ್ಯಕ್ಕೀಡಾಗುವ ಪ್ರಾಣಿಗಳಿಗೆ ವೈದ್ಯಕೀಯ ನೆರವು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. 

ಕೇವಲ ಹಸುಗಳಿಗಷ್ಟೇ ಅಲ್ಲ, ಕುರಿ, ಮೇಕೆ, ಮೊಲ, ಹಂದಿ, ಕೋಳಿ ಸೇರಿದಂತೆ ಎಲ್ಲಾ ಪ್ರಾಣಿಗಳ ರಕ್ಷಣೆಗೆ ನೆರವು ನೀಡಲಾಗುತ್ತದೆ. ಪಕ್ಷಿಗಳು, ಹಾವುಗಳು ಹಾಗೂ ಕಾಡುಪ್ರಾಣಿಗಳು, ಬೀದಿ ನಾಯಿಗಳನ್ನು ರಕ್ಷಣೆ ಮಾಡಲು ಬಯಸುವ ನಾಗರೀಕರು ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ಮಾಹಿತಿ ನೀಡಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com