ಗೌರಿ ಲಂಕೇಶ್ ಹತ್ಯೆ ಪ್ರಕರಣ: ಪ್ರಭಾವಕ್ಕೆ ಒಳಗಾಗದೆ ಆರೋಪಿ ಜಾಮೀನು ಅರ್ಜಿಯನ್ನು ನಿರ್ಧರಿಸಿ- ಸುಪ್ರೀಂ ಕೋರ್ಟ್

ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ಆರೋಪಿಯ ವಿರುದ್ಧ ದಾಖಲಾಗಿದ್ದ ಆರೋಪಗಳನ್ನು ರದ್ದುಗೊಳಿಸಿರುವ ರಾಜ್ಯ ಹೈಕೋರ್ಟ್‌ನ ಆದೇಶ ಪ್ರಶ್ನಿಸಲಾದ ಅರ್ಜಿಯ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್, ಈ ಸಂಬಂಧ ಕರ್ನಾಟಕ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣ: ಪ್ರಭಾವಕ್ಕೆ ಒಳಗಾಗದೆ ಆರೋಪಿ ಜಾಮೀನು ಅರ್ಜಿಯನ್ನು ನಿರ್ಧರಿಸಿ- ಸುಪ್ರೀಂ ಕೋರ್ಟ್

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ಆರೋಪಿಯ ವಿರುದ್ಧ ದಾಖಲಾಗಿದ್ದ ಆರೋಪಗಳನ್ನು ರದ್ದುಗೊಳಿಸಿರುವ ರಾಜ್ಯ ಹೈಕೋರ್ಟ್‌ನ ಆದೇಶ ಪ್ರಶ್ನಿಸಲಾದ ಅರ್ಜಿಯ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್, ಈ ಸಂಬಂಧ ಕರ್ನಾಟಕ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ.

ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಕೆಸಿಒಸಿಎ) ಅಡಿ ಮೋಹನ್‌ ನಾಯಕ್‌ ವಿರುದ್ಧ ದಾಖಲಾಗಿದ್ದ ಆರೋಪಗಳನ್ನು ರದ್ದುಪಡಿಸಿ ರಾಜ್ಯ ಹೈಕೋರ್ಟ್‌ ಏಪ್ರಿಲ್‌ 22ರಂದು ಆದೇಶ ನೀಡಿತ್ತು. 

ಈ ಆದೇಶ ಪ್ರಶ್ನಿಸಿ ಗೌರಿ ಅವರ ಸೋದರಿ ಕವಿತಾ ಲಂಕೇಶ್‌ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ಮಂಗಳವಾರ ನಡೆಸಿದ ನ್ಯಾಯಮೂರ್ತಿ ಎ.ಎಂ. ಖನ್ವಿಲ್ಕರ್‌ ನೇತೃತ್ವದ ಪೀಠವು, ರಾಜ್ಯ ಸರ್ಕಾರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮೂಲದ ಆರೋಪಿ ಮೋಹನ್‌ ನಾಯಕ್‌ಗೆ ನೋಟಿಸ್‌ ನೀಡಿದ್ದು, ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ.

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮೋಹನ್ ನಾಯಕ್ ವಿರುದ್ಧ ದಾಖಲಾಗಿದ್ದ ಕೋಕಾ ಕಾಯ್ದೆಯನ್ನು (ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ) ಸುಪ್ರೀಂಕೋರ್ಟ್ ಮಂಗಳವಾರ ಎತ್ತಿಹಿಡಿದಿದೆ. ಹಾಗೆಯೇ ಮೋಹನ್ ನಾಯಕ್ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಯಾವುದೇ ಪ್ರಭಾವಕ್ಕೆ ಒಳಗಾಗದೆ ನಿರ್ಧರಿಸಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ.

ಈ ಸಂಬಂಧ ಕರ್ನಾಟಕ ಸರಕಾರ ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ಇತರರಿಗೆ ಅದು ನೋಟಿಸ್ ನೀಡಿದೆ. ಮೋಹನ್ ನಾಯಕ್ ಅವರ ಜಾಮೀನು ಅರ್ಜಿಯ ಕುರಿತಾಗಿ ಕರ್ನಾಟಕ ಹೈಕೋರ್ಟ್ ಬುಧವಾರ ಆದೇಶ ಹೊರಡಿಸಲಿದೆ.

ಗೌರಿ ಲಂಕೇಶ್ ಕೊಲೆ ಪ್ರಕರಣದ ಆರೋಪಿಯಾಗಿರುವ ಮೋಹನ್ ನಾಯಕ್ ಮೇಲೆ ಹಾಕಲಾಗಿದ್ದ ಕೋಕಾ ಕಾಯ್ದೆಯನ್ನು ಏಪ್ರಿಲ್ 22ರಂದು ಹೈಕೋರ್ಟ್ ರದ್ದುಗೊಳಿಸಿತ್ತು. ಇದರಿಂದ ಮೋಹನ್ ಹಾಗೂ ಇತರೆ ಆರೋಪಿಗಳಿಗೆ ಜಾಮೀನು ಸುಲಭವಾಗಿ ಸಿಗುವ ಸಾಧ್ಯತೆ ಇತ್ತು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಗೌರಿ ಲಂಕೇಶ್ ಅವರ ಸಹೋದರಿ, ನಿರ್ದೇಶಕಿ ಕವಿತಾ ಲಂಕೇಶ್ ಅವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.

ಕೋಕಾ ಪ್ರಕರಣವನ್ನು ಕೈಬಿಡುವ ಹೈಕೋರ್ಟ್ ಆದೇಶವನ್ನು ಉಲ್ಲೇಖಿಸಿದ್ದ ಕವಿತಾ ಲಂಕೇಶ್ ಪರ ವಕೀಲರಾದ ಹುಫೇಜ ಅಹ್ಮದಿ, ಆದೇಶವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ್ದರೂ ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವ ಅವಕಾಶವಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು.

ಈ ಆರೋಪಿಗಳು ಸಂಘಟಿತ ಅಪರಾಧವನ್ನು ನಡೆಸಿದ್ದರು ಎಂಬುದನ್ನು ಎಸ್‌ಐಟಿ ದಾಖಲಿಸಿದ್ದ ಕೋಕಾ ಪ್ರಕರಣ ಸ್ಪಷ್ಟವಾಗಿ ಸೂಚಿಸುತ್ತದೆ ಎಂದು ಅವರು ವಾದಿಸಿದ್ದರು. ಮೋಹನ್ ನಾಯಕ್, ಅಪರಾಧಿಗಳಿಗೆ ನಿರಂತರ ಆಶ್ರಯ ನೀಡಿದ್ದ ಮತ್ತು ಕೋಕಾ ಕಾಯ್ದೆಯಡಿ ವ್ಯಾಖ್ಯಾನಿಸಿರುವಂತೆ 'ನಿರಂತರ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ' ಎಂದು ಅವರು ಆರೋಪಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com