ಆಕ್ಸಿಜನ್ ಕೊರತಯಿಂದ 24 ಮಂದಿ ಸಾವು: ಚಾಮರಾಜನಗರ- ಮೈಸೂರು ಡಿಸಿ ನಡುವೆ ಆರೋಪ-ಪ್ರತ್ಯಾರೋಪ!

ಚಾಮರಾಜನಗರ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದಾಗಿ 24 ಮಂದಿ ಸಾವನ್ನಪ್ಪಿದ ಘಟನೆ ಬಳಿಕ ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳ ನಡುವೆ ಜಟಾಪಟಿ ಶುರುವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಮೈಸೂರು: ಚಾಮರಾಜನಗರ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದಾಗಿ 24 ಮಂದಿ ಸಾವನ್ನಪ್ಪಿದ ಘಟನೆ ಬಳಿಕ ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳ ನಡುವೆ ಜಟಾಪಟಿ ಶುರುವಾಗಿದೆ.

ಸೋಮವಾರ ಪ್ರಕಟಣೆ ಹೊರಡಿಸಿದ್ದ ರೋಹಿಣಿ ಸಿಂಧೂರಿಯವರು, ಭಾನುವಾರ ರಾತ್ರಿ 12.30ರವರೆಗೂ ಮೈಸೂರಿನಿಂದ ಚಾಮರಾಜನಗರಕ್ಕೆ ಒಟ್ಟು 250 ಆಕ್ಸಿಜನ್ ಸಿಲಿಂಡರ್ ಕಳುಹಿಸಲಾಗಿದೆ. ಆಕ್ಸಿಜನ್ ಲಿಕ್ವಿಡ್ ಬಳ್ಳಾರಿಯಿಂದ ಚಾಮರಾಜನಗರಕ್ಕೆ ಬರಬೇಕಿತ್ತು. ಅದು ಸರಿಯಾದ ಸಮಯದಲ್ಲಿ ಬಂದಿದೆಯೋ ಇಲ್ಲವೋ ಗೊತ್ತಿಲ್ಲ. ಚಾಮರಾಜನಗರದವರ ಬೇಡಿಕೆಯಂತೆ ಮಾನವೀಯ ದೃಷ್ಟಿಯಿಂದ ಆಕ್ಸಿಜನ್ ಸಿಲಿಂಡರ್ ಕಳುಹಿಸಲಾಗಿದೆ. ಈ ವಿಚಾರದಲ್ಲಿ ಮೈಸೂರು ಜಿಲ್ಲಾ ಆಡಳಿತ ಮಂಡಳಿ ವಿಳಂಬ ಮಾಡಿಲ್ಲ ಎಂದು ಹೇಳಿದ್ದರು. 

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಡಾ.ರವಿಯವರು, ಇದು ಸತ್ಯಕ್ಕೆ ದೂರವಾದ ವಿಚಾರ. ಸಂಜೆ 65 ಸಿಲಿಂಡರ್ ಆಗಮಿಸಿತು. ನಾವು ಸಿಲಿಂಡರ್ ಪೂರೈಸುವಂತೆ ಸಾಕಷ್ಟು ಪ್ರಯತ್ನ ಮಾಡಿದೆವು. ಆದರೆ, ಮೈಸೂರಿನ ಜಿಲ್ಲಾಡಳಿತ ಹಾಗೂ ಸಪ್ಲೈಯರ್ಸ್ ಸಕಾಲದಲ್ಲಿ ಸ್ಪಂದಿಸಲಿಲ್ಲ. ಬಳಿಕ ಮಧ್ಯರಾತ್ರಿ 2 ಗಂಟೆಗೆ 50 ಸಿಲಿಂಡರ್ ಆಗಮಿಸಿತು. ಆದರೆ, ಮೈಸೂರು ಡೀಸಿ 250 ಸಿಲಿಂಡರ್ ಎಂದು ಸುಳ್ಳು ಮಾಹಿತಿ ನೀಡಿದ್ದಾರೆಂದು ತಿಳಿಸಿದರು. 

ಇದೇ ವೇಳೆ ಜಿಲ್ಲಾಸ್ಪತ್ರೆಯಲ್ಲಿ 24 ರೋಗಿಗಳ ಸಾವು ಪ್ರಕರಣಕ್ಕೆ ಮೈಸೂರು ಡಿಸಿ ಅವರೇ ನೇರ ಕಾರಣ ಎಂದು ಆರೋಪಿಸಿದರು. 

ಮೈಸೂರು ಡಿಸಿಯಿಂದಲೇ ನಮಗೆ ಪೂರೈಕೆಯಾಗುವ ಆಕ್ಸಿಜನ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಆಕ್ಸಿಜನ್‌ ಪೂರೈಕೆ ಆಗಿದ್ದರೆ ಅಮೂಲ್ಯ ಜೀವ ಉಳಿಸಬಹುದಿತ್ತು. ರೋಹಿಣಿ ಸಿಂಧೂರಿಯವರೇ ನೀವು ಮೈಸೂರಿಗೆ ಡಿಸಿಯಾಗಿ ಚಾಮರಾಜನಗರ ಆಡಳಿತದಲ್ಲಿ ನೀವು ಮೂಗು ತೂರಿಸಬೇಡಿ. ನೋಡಲ್‌ ಆಫೀಸರ್‌ ಆಗಿ ನಿಮ್ಮನ್ನು ನೇಮಕ ಮಾಡಿಲ್ಲ ಎಂದು ಹೇಳಿದ್ದರು. 

ನಮಗೆ ಬಹಳ ದೊಡ್ಡ ಸಮಸ್ಯೆ ಸಂಕಷ್ಟ ಬಂದಿದ್ದು ಮೈಸೂರಿನಿಂದ ಪೂರೈಕೆ ಆಗಲಿಲ್ಲ. ನನಗೆ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತದೆ ಎಂದು ತಿಳಿದ ತಕ್ಷಣ ಸಚಿವರು, ನೋಡಲ್ ಅಧಿಕಾರಿ ಸಿಎಸ್ ಅವರಿಗೆ ಮಾಹಿತಿ ನೀಡಿದೆ. ಮೈಸೂರು ಜಿಲ್ಲಾಧಿಕಾರಿ ಸುಳ್ಳು ಮಾಹಿತಿ ನೀಡಿ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ನಮ್ಮ ಸಿಲಿಂಡರ್ ಇರುವ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ನಮ್ಮ ಬಳಿ ದಾಖಲೆ ಇದೆ. 

10 ಗಂಟೆಯ ನಂತರ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಹಿಂದಿನ ದಿನದಿಂದ ಆಕ್ಸಿಜನ್ ನೀಡಲು ಮೀನಾಮೇಷ ಎಣಿಸಿದ್ದಾರೆ. ಕೇಳಿದರೆ ಸರಬರಾಜುದಾರರಿಗೆ ಮೈಸೂರು ಡಿಸಿಯಿಂದ ಅನುಮತಿ ಪಡೆಯಬೇಕು ಅಂತಾ ಹೇಳಿದ್ದಾರೆ. ಇದು ನನಗೆ ಅರ್ಥ ಆಗುತ್ತಿಲ್ಲ. ಅವರು ಒಂದು ದೊಡ್ಡ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಅಲ್ಲೇ ಅವರು ಕೆಲಸ ಮಾಡಲಿ. ಈ ಕಡೆ ಯಾಕೆ ತಲೆ ಹಾಕಬೇಕು ? ಇದು ಅವರಿಗೆ ಶೋಭೆ ತರುವುದಿಲ್ಲ ಎಂದು ಅವರು ವಿವರಿಸಿದರು.

ನಮಗೆ ಆಕ್ಸಿಜನ್ ಸರಬರಾಜು ಆಗುವಲ್ಲಿ ವ್ಯತ್ಯಯವಾಗಿದೆ. ಇದು ಆಗದೇ ಇದ್ದಿದ್ದರೆ ಅಮೂಲ್ಯ ಜೀವನಗಳನ್ನು ಉಳಿಸಬಹುದಿತ್ತು. ನಮಗೆ ಆಕ್ಸಿಜನ್ ಸರಬಾರಾಜು ಮಾಡುವವರು ನಮ್ಮ ಹತ್ತಿರಬರುವ ಮುನ್ನ ನೀವು ಮೈಸೂರು ಡಿಸಿ ಅನುಮತಿ ಪಡೆದು ಬನ್ನಿ ಅಂತ ಹೇಳಿದ್ದರು. ಮೈಸೂರು ಜಿಲ್ಲಾಧಿಕಾರಿ ಆಕ್ಸಿಜನ್ ಸರಬರಾಜು ಮಾಡುವವರಿಗೆ ನಿರ್ದೇಶನ ನೀಡಿದ್ದರು. ಅವರ ನಿರ್ದೇಶನದಿಂದಲೇ ನಮಗೆ ಅಂದು ಸಮಸ್ಯೆಯಾಗಿತ್ತು. ಇಲ್ಲವಾದರೆ ಅಮೂಲ್ಯ ಜೀವಗಳನ್ನು ಉಳಿಸಬಹುದಾಗಿತ್ತು ಎಂದು ಚಾಮರಾಜನಗರ ಡಿಸಿ ಎಂ.ಆರ್.ರವಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿನಿತ್ಯ ನಮ್ಮ ವಾಹನ ಮೈಸೂರಿಗೆ ಹೋಗಿ ಗಂಟೆಗಟ್ಟಲೆ ಕಾಯೋದು, ಅವರು ಕೊಟ್ಟಾಗ ತೆಗೆದುಕೊಂಡು ಬರುವುದು ಆಗುತಿತ್ತು. ಅವರು ಅನುಮತಿ ನೀಡಿದರೆ ಹೇಳಿದರೆ ನಮ್ಮ ಜಿಲ್ಲೆಗೆ ಕಳುಹಿಸುವುದು ಯಾವ ನ್ಯಾಯ ? ಇವರಿಗೆ ಈ ಅಧಿಕಾರ ಕೊಟ್ಟವರು ಯಾರು? ಇವರನ್ನು ನೋಡಲ್ ಅಧಿಕಾರಿಯಾಗಿ ಯಾರು ಮಾಡಿಲ್ಲ. ಸುತ್ತಮುತ್ತಲಿನ ಜಿಲ್ಲೆಗಳ ಉಸ್ತುವಾರಿ ಸಹಾ ಇವರನ್ನು ಮಾಡಿಲ್ಲ. ಈ ಸಮಸ್ಯೆ ಬಗ್ಗೆ ನಾನು ಸಿಎಸ್ ಅವರಿಗೆ ಹೇಳಿದ್ದೆ. ಜಿಲ್ಲಾ ಉಸ್ತುವಾರಿ ಸಚಿವರು ಮೂಲಕವೂ ಹೇಳಿದ್ದೆ. ಅವರೇ ಈ ರೀತಿ ಮಾಡದಂತೆ ನಿರ್ದೇಶನ ನೀಡುತ್ತೇನೆ ಅಂತಾ ಹೇಳಿದ್ದರು. ಖುದ್ದು ಸಿಎಂ ಸಹಾ ಮೈಸೂರು ಡಿಸಿಗೆ ನಿರ್ದೇಶನ ನೀಡಿದ್ದರು. ಸಿಎಂ ಹೇಳಿದ್ದರು ಏಕೆ ರೋಹಿಣಿ ಸಿಂಧೂರಿ ನಮ್ಮ ಜಿಲ್ಲೆ ಬಗ್ಗೆ ಈ ರೀತಿ ಮಾಡಿದರು ಗೊತ್ತಿಲ್ಲ. ಘಟನೆ ದಿನ ಜಿಲ್ಲೆಯಲ್ಲಿ ಕೋವಿಡ್‌ನಿಂದ ಒಟ್ಟು 27 ಸಾವುಗಳಾಗಿವೆ. ಸಿದ್ದರಾಮಯ್ಯ ಅವರು ಹೇಳಿದ ಎಲ್ಲಾ ಆಕ್ಸಿಜನ್ ಸಾವು ಹೇಳಿಕೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಚಾಮರಾಜನಗರ ಡಿಸಿ ಎಂ.ಆರ್.ರವಿ ತಿಳಿಸಿದರು.

ಈ ನಡುವೆ ಚಾಮರಾಜನಗರ ಜಿಲ್ಲಾ ಉಸ್ತವಾರಿ ಸಚಿವ ಸುರೇಶ್ ಕುಮಾರ್ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದು, ಘಟನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. 

ಇನ್ನು ಘಟನೆ ಸಂಬಂಧ ಹೇಳಿಕೆ ನೀಡಲು ರೋಹಿಣಿ ಸಿಂಧೂರಿಯವರು ನಿರಾಕರಿಸಿದ್ದಾರೆ. ಈಗಾಗಲೇ ಘಟನೆ ಸಂಬಂಧ ಸರ್ಕಾರ ತನಿಖೆಗೆ ಆದೇಶಿಸಿದೆ. ಆಕ್ಸಿಜನ್ ಪೂರೈಕೆ ಮಾಡುವಲ್ಲಿ ನನ್ನಿಂದ ಯಾವುದೇ ರೀತಿಯ ತಪ್ಪಾಗಲೀ, ವಿಳಂಬವಾಗಲೀ ಆಗಿಲ್ಲ ಎಂದು ಹೇಳಿದ್ದಾರೆ. 

ಘಟನೆ ಸಂಭವಿಸಿದ ಮೂರು ದಿನಗಳ ಬಳಿಕ ಜಿಲ್ಲಾಯಲ್ಲಿ ಪರಿಸ್ಥಿತಿ ಸಾಮಾನ್ಯಕ್ಕೆ ತಿರುಗಿದ್ದು, ಆಸ್ಪತ್ರೆಯಲ್ಲಿ ಸೋಂಕಿತರಿಗೆ ಸೂಕ್ತ ರೀತಿಯ ಚಿಕಿತ್ಸೆ, ಆಕ್ಸಿಜನ್ ಲಭ್ಯವಾಗುತ್ತಿವೆ ಎಂದು ತಿಳಿದುಬಂದಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com