ಆಸ್ಪತ್ರೆಯಲ್ಲಿ ಬೆಡ್ ಬುಕ್ಕಿಂಗ್ ದಂಧೆ: ಇಬ್ಬರು ವೈದ್ಯರು ಸೇರಿ ಆರು ಮಂದಿ ಬಂಧನ!

ಕೊರೋನಾ ಸಂಕಷ್ಟ ಸಮಯದಲ್ಲಿ ಆಸ್ಪತ್ರೆ ಬೆಡ್ ಗಳನ್ನು ಕಾಳಸಂತೆಯಲ್ಲಿ ಬುಕ್ಕಿಂಗ್ ಮಾಡುತ್ತಿದ್ದ ದಂಧೆಯನ್ನು ಭೇದಿಸಿರುವ ಬೆಂಗಳೂರು ಕೇಂದ್ರ ವಿಭಾಗ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಕೊರೋನಾ ಸಂಕಷ್ಟ ಸಮಯದಲ್ಲಿ ಆಸ್ಪತ್ರೆ ಬೆಡ್ ಗಳನ್ನು ಕಾಳಸಂತೆಯಲ್ಲಿ ಬುಕ್ಕಿಂಗ್ ಮಾಡುತ್ತಿದ್ದ ದಂಧೆಯನ್ನು ಭೇದಿಸಿರುವ ಬೆಂಗಳೂರು ಕೇಂದ್ರ ವಿಭಾಗ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಲಕ್ಷ್ಮಿದೇವಮ್ಮ ಎಂಬ ಕೋವಿಡ್ ಸೋಂಕಿತ ಮಹಿಳೆಯನ್ನು ಖಾಸಗಿ ಆಸ್ಪತ್ರೆಗೆ ಕರೆತರಲಾಗಿತ್ತು, ತೀವ್ರ ಆರೋಗ್ಯ ಸಮಸ್ಯೆ ಹೊಂದಿದ್ದ ಲಕ್ಷ್ಮಿದೇವಮ್ಮಗೆ ಐಸಿಯುನಲ್ಲಿ ಬೆಡ್ ಸಿಗಲಿಲ್ಲ.

ಪರಿಸ್ಥಿತಿಯ ಲಾಭ ಪಡೆದುಕೊಳ್ಳಲು ಮುಂದಾದ ವೆಂಕಟ ಸುಬ್ಬರಾವ್ ಮತ್ತು ಮಂಜುನಾಥ್ ಹಾಗೂ ಮತ್ತೊಂದು ಆಸ್ಪತ್ರೆಯ ಆರೋಗ್ಯ ಮಿತ್ರದಲ್ಲಿ ಕೆಲಸ ಮಾಡುವ ಪುನೀತಾ ಎಂಬುವವರು ಲಕ್ಷ್ಮಿದೇವಮ್ಮ ಪುತ್ರನ ಹತ್ತಿರ ಹಣಕ್ಕೆ ಬೇಡಿಕೆಯಿಟ್ಟರು.

ತಮ್ಮ ತಾಯಿಗೆ ಆದಷ್ಟು ಶೀಘ್ರವೇ ಬೆಡ್ ವ್ಯವಸ್ಥೆ ಮಾಡಲು ಪುತ್ರ ಲಕ್ಷ್ಮೀಶ ಪ್ರತಿಷ್ಟಿತ ಆಸ್ಪತ್ರೆಯಲ್ಲಿ ಬೆಡ್ ಗಾಗಿ ಆರೋಪಿತರು ಬೇಡಿಕೆಯಿಟ್ಟಂತೆ ಗೂಗಲ್ ಪೇ ಮೂಲಕ 50 ಸಾವಿರ ರೂಪಾಯಿ ಹಾಗೂ 70 ಸಾವಿರ ರೂಪಾಯಿ ನಗದು ನೀಡಿದರು.

ಲಕ್ಷ್ಮಿದೇವಮ್ಮಗೆ ಖಾಸಗಿ  ಆಸ್ಪತ್ರೆಯಲ್ಲಿ ಹಣ ನೀಡಿದ ನಂತರ ಬೆಡ್ ಸಿಕ್ಕಿತು, ಆದರೆ ಬದುಕುಳಿಯಲಿಲ್ಲ, ಲಕ್ಷ್ಮೀಶ ಅವರು ನಂತರ ಪೊಲೀಸರಿಗೆ ದೂರು ನೀಡಿದರು. ಅವರು ನೀಡಿದ ದೂರನ್ನು ಆಧರಿಸಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಯಿತು.

ಪೊಲೀಸರು ತನಿಖೆ ಮಾಡಿ ಮೂವರು ಆರೋಪಿಗಳನ್ನು ಬಂಧಿಸಿದರು. ಹೆಚ್ಚಿನ ತನಿಖೆ ನಡೆಯುತ್ತಿದೆ. 

ಮತ್ತೆ ಮೂವರ ಬಂಧನ: ಬೆಡ್ ಹಂಚಿಕೆ ಹಗರಣದ ತನಿಖೆ ನಡೆಸುತ್ತಿರುವ ಪೊಲೀಸರು ಮತ್ತೆ ಮೂವರನ್ನು ಬಂಧಿಸಿದ್ದು ಅವರಲ್ಲಿ ಇಬ್ಬರು ವೈದ್ಯರು ಸೇರಿದ್ದಾರೆ. ಇತರ ನಾಲ್ವರನ್ನು ತನಿಖೆ ನಡೆಸುತ್ತಿದ್ದಾರೆ. ತನಿಖೆ ವೇಳೆ ಖಾಸಗಿ ಆಸ್ಪತ್ರೆಗಳ ಸಿಬ್ಬಂದಿ ಭಾಗಿಯಾಗಿರುವುದು ಪತ್ತೆಯಾಗಿದೆ.

ಜಯನಗರ ಪೊಲೀಸ್ ಠಾಣೆಯಲ್ಲಿ ವಿಪತ್ತು ನಿರ್ವಹಣಾ ಕಾಯ್ದೆಯಡಿ ಎರಡು ಪ್ರಕರಣ ದಾಖಲಾಗಿದೆ. ಎರಡೂ ಕೇಸುಗಳು ಕೇಂದ್ರ ಅಪರಾಧ ವಿಭಾಗಕ್ಕೆ ವರ್ಗಾವಣೆಯಾಗಿದೆ. ನೇತ್ರಾವತಿ ಮತ್ತು ರೋಹಿತ್ ಎಂಬುವವರನ್ನು ಜಯನಗರ ಪೊಲೀಸರು ಬಂಧಿಸಿದರೆ, ಇಬ್ಬರು ವೈದ್ಯರು ಸೇರಿದಂತೆ ನಾಲ್ವರು ಇತರರನ್ನು ನಿನ್ನೆ ಬಂಧಿಸಲಾಗಿದೆ. ಇವರು ಬೊಮ್ಮನಹಳ್ಳಿ ವಲಯ ಕೋವಿಡ್ ವಾರ್ ರೂಂನಲ್ಲಿ ಕೆಲಸ ಮಾಡುತ್ತಿದ್ದವರು.

ಆರೋಪಿಗಳು ಡಾ ಸುರೇಶ್, ಡಾ ರೆಹಾನ್ ಮತ್ತು ಶಶಿಕುಮಾರ್ ಎಂಬುವವರಾಗಿದ್ದಾರೆ. ಉಳಿದವರ ಪತ್ತೆ ಸಿಕ್ಕಿಲ್ಲ. ನೇತ್ರಾವತಿ ಮತ್ತು ರೋಹಿತ್ ಐವರು ರೋಗಿಗಳಿಗೆ ಬೆಡ್ ವ್ಯವಸ್ಥೆ ಮಾಡಿ ಅವರ ಕುಟುಂಬದವರಿಂದ 20 ಸಾವಿರದಿಂದ 40 ಸಾವಿರದವರೆಗೆ ಹಣ ವಸೂಲಿ ಮಾಡಿದ್ದರು. ಹಣವನ್ನು ಅವರ ಬ್ಯಾಂಕ್ ಅಕೌಂಟ್ ಗೆ ಹಾಕಿಸಿಕೊಂಡಿದ್ದಾರೆ. ಈ ಮಧ್ಯೆ ಸಿಸಿಬಿ ಪೊಲೀಸರು ಬೆಂಗಳೂರಿನ ಎಲ್ಲಾ 8 ವಲಯಗಳ ವಾರ್ ರೂಂಗಳಲ್ಲಿ ಶೋಧ ನಡೆಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com