ಕೋಟಾದನುಸಾರ ರೆಮಿಡಿಸಿವಿರ್ ಪೂರೈಸದ ಕಂಪನಿಗಳಿಗೆ ನೋಟಿಸ್- ಅಶ್ವತ್ಥ ನಾರಾಯಣ
ಬೆಂಗಳೂರು: ರೆಮಿಡಿಸಿವಿಆರ್ ಇಂಜೆಕ್ಷನ್ ನ್ನು ಕೋಟಾದನುಸಾರ ಪೂರೈಸದ ಕಂಪೆನಿಗಳಿಗೆ ನೊಟೀಸ್ ನೀಡುವುದಾಗಿ
ರೆಮಿಡಿಸಿವಿರ್ ಇಂಜೆಂಕ್ಷನ್ ಪೂರೈಕೆ ಜವಾಬ್ದಾರಿ ಹೊತ್ತಿರುವ ಡಿಸಿಎಂ ಅಶ್ವತ್ಥ ನಾರಾಯಣ್ ಎಚ್ಚರಿಸಿದ್ದಾರೆ.
ವಿಕಾಸಸೌಧದಲ್ಲಿಂದು ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಶ್ವತ್ಥ ನಾರಾಯಣ್, ರೆಮಿಡಿಸಿವಿರ್ ಇಂಜೆಕ್ಷನ್ 70 ಸಾವಿರ ಡೋಸ್ ಬಾಕಿ ಇದೆ.ಇನ್ನೂ ಬೇಡಿಕೆ ಹೆಚ್ಚುತ್ತಲೇ ಇದೆ. ಮುಂದಿನ 16ನೇ ತಾರೀಖಿನವರೆಗೂ ಬೇಡಿಕೆ ಇದೆ.ಪ್ರತಿ ದಿನ 37 ಸಾವಿರ ಡೋಸ್ ಲಭ್ಯವಾಗಲಿದ್ದು, ಈ ಕೋಟಾಗಳನ್ನು ಬಳಸಿಕೊಳ್ಳಲಾಗುತ್ತದೆ.ಕೋಟಾನುಸಾರ ನಮಗೆ ಕೊಡದೆ ಇದ್ದರೆ ಆ ಕಂಪನಿಗಳಿಗೆ ನೋಟೀಸ್ ಕೊಡುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದರು.
ರಾಜ್ಯಕ್ಕೆ 21ರಿಂದ ಮೇ 9ರವರೆಗೆ 3.02 ಲಕ್ಷ ಡೋಸ್ ರೆಮಿಡಿಸಿವಿರ್ ಇಂಜೆಕ್ಷನ್ ಮಂಜೂರಾಗಿತ್ತು. ಆ ಪೈಕಿ ಇನ್ನೂ 70 ಸಾವಿರ ಇಂಜೆಕ್ಷನ್ ಡೋಸ್ ಬಳಕೆಗೆ ಬಾಕಿ ಇದೆ. ಎಲ್ಲಾ ಜಿಲ್ಲೆಗಳಿಗೂ ಅದನ್ನು ಒದಗಿಸಲಾಗುವುದು, ಮುಂದಿನ ಒಂದು ವಾರಕ್ಕೆ 2.68 ಲಕ್ಷ ಇಂಜೆಕ್ಷನ್ ಡೋಸ್ ಮಂಜೂರಾಗಿದೆ.ದಿನಕ್ಕೆ 37 ಸಾವಿರ ಡೋಸ್ ಲಭಿಸಲಿದೆ. ನಿಗದಿತ ಡೋಸ್ ಗಳನ್ನು ಆಯಾದಿನಕ್ಕೆ ಕಳಹಿಸಲು ಕಂಪನಿಗಳಿಗೆ ನೋಟಿಸ್ ನೀಡಲಾಗುವುದು ಎಂದು ಅವರು ತಿಳಿಸಿದರು.
ರಾಜ್ಯ ಸರ್ಕಾರ ಕೋವಿಡ್ ಚಿಕಿತ್ಸೆಗಾಗಿ ಈಗಾಗಲೇ 70 ಸಾವಿರ ಹಾಸಿಗೆಗಳನ್ನು ಮೀಸಲಿಟ್ಟಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ 35 ಸಾವಿರ ಮತ್ತು ಖಾಸಗಿ ಆಸ್ಪತ್ರೆಗಳ ಮೂಲಕ 35 ಸಾವಿರ ಬೆಡ್ ಒದಗಿಸಲಾಗಿದೆ. 50 ಸಾವಿರ ಬೆಡ್ ಗಳು ಆಮ್ಲಜನಕ ಪೂರೈಸುವ ಸಾಮರ್ಥ್ಯ ಹೊಂದಿದ್ದು, 950 ಮೆಟ್ರಿಕ್ ಟನ್ ಆಮ್ಲಜನಕ ಪೂರೈಕೆಯೂ ನಡೆಯುತ್ತಿದೆ. 1200 ಮೆಟ್ರಿಕ್ ಟನ್ ಆಮ್ಲಜನಕ ಸರಬರಾಜಿಗೆ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಸೂಚಿಸಿದ್ದು, ಅಗತ್ಯವಿದ್ದರೆ ಹಾಸಿಗೆ ಸಾಮರ್ಥ್ಯವನ್ನು 10 ರಿಂದ 20 ಸಾವಿರದಷ್ಟು ಹೆಚ್ಚಿಸಲಾಗುವುದು ಎಂದು ಮಾಹಿತಿ ನೀಡಿದರು.
ರಾಜ್ಯದ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಯಾವುದೇ ವೈದ್ಯಕೀಯ ಸೌಲಭ್ಯದ ಕೊರತೆ ಉಂಟಾಗದಂತೆ ನೋಡಿಕೊಳ್ಳುವ ಕಾರ್ಯ ನಡೆಯುತ್ತಿದೆ. ಕೋವಿಡ್ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳನ್ನು ಸೂಕ್ತವಾಗಿ ಬಳಸಿಕೊಳ್ಳುವ ಜತೆ ಟೆಸ್ಟಿಂಗ್ ವೇಗ ಹೆಚ್ಚಿಸುವುದು, ಅಗತ್ಯ ವೈದ್ಯಕೀಯ ಸೌಲಭ್ಯ ಕಲ್ಪಿಸುವುದು ಲಸಿಕೆ ಅಭಿಯಾನ ಸೇರಿ ಕೋವಿಡ್ ನಿರ್ವಹಣೆಗೆ ಎಲ್ಲ ಅಗತ್ಯತೆಗಳನ್ನು ಆದ್ಯತೆ ಮೇರೆಗೆ ಪೂರೈಸುವ ಕಾರ್ಯ ಮಾಡಲಾಗುತ್ತಿದೆ ಎಂದು ಡಿಸಿಎಂ ವಿವರಿಸಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿ ಕುಮಾರ್ ಮಾತನಾಡಿ, ಲಾಕ್ ಡೌನ್ ಯಶಸ್ವಿ ದೃಷ್ಟಿಯಿಂದ ನಾಳೆ ಸಂಜೆ ಏಳರಿಂದ 37 ಸಂಘಟನಾ ಜಿಲ್ಲೆಗಳಲ್ಲಿ ಬಿಜೆಪಿ ಆನ್ ಲೈನ್ ಸಭೆಗಳನ್ನು ಸಂಘಟಿಸಲಿದೆ. ಹೋಮ್ ಐಸೋಲೇಷನ್ ಗೆ ಆದ್ಯತೆ ನೀಡುವಂತೆ ಮನವರಿಕೆ ಮಾಡಲಾಗುವುದು,ಶಿಸ್ತು ಬದ್ಧವಾಗಿ ವ್ಯಾಕ್ಸಿನೇಷನ್ ನೀಡಲು ನೆರವಾಗುವ ಬಗ್ಗೆ ನಾಳೆಯ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ