ಹೆಸರಿಗಷ್ಟೇ ಟೆಕ್ ಹಬ್; ಕೊರೋನಾ 2ನೇ ಅಲೆ ಆರಂಭವಾಗಿದ್ದರೂ ಆರೋಗ್ಯ ವ್ಯವಸ್ಥೆಗಳಿಲ್ಲ, ಎಲೆಕ್ಟ್ರಾನಿಕ್ ಸಿಟಿ ಜನರ ಸಂಕಷ್ಟ ಕೇಳುವವರಾರು?
ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿಯನ್ನು ರಾಜ್ಯದ ಮಾಹಿತಿ ತಂತ್ರಜ್ಞಾನ ಹಾಗು ವಿದ್ಯುನ್ಮಾನ ಸಂಸ್ಥೆಗಳ ಬೃಹತ್ ತಾಣವೆಂದು ಹೇಳಲಾಗುತ್ತದೆ. ಆದರೆ, ಕೊರೋನಾ 2ನೇ ಆರಂಭವಾಗಿದ್ದರೂ ಕೂಡ ಇಲ್ಲಿ ಸೂಕ್ತ ಆರೋಗ್ಯ ವ್ಯವಸ್ಥೆಗಳಿಲ್ಲ. ಇಲ್ಲಿನ ಜನರು ಸೋಂಕಿಗೊಳಗಾದರೆ ಚಿಕಿತ್ಸೆಗಾಗಿ ಜಿಗಣಿ, ಆನೇಕಲ್ ಅತವಾ ಅತ್ತಿಬೆಲೆಗೆ ಹೋಗಬೇಕಾಗಿದೆ. ಸೋಂಕು ಆತಂಕದಲ್ಲಿರುವ ಇಲ್ಲಿನ ನಿವಾಸಿಗಳು ನಮ್ಮ ಸಂಕಷ್ಟ ಕೇಳುವವರಾರು ಎಂದು ಅಳಲು ತೋಡಿಕೊಂಡಿದ್ದಾರೆ.
ನಾವೀಗ ಕೊರೋನಾ 2ನೇ ಅಲೆಯನ್ನು ಎದುರಿಸುತ್ತಿದ್ದೇವೆ. ನಮಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಲ್ಲ. ಸೋಂಕಿಗೊಳಗಾದರೆ ಚಿಕಿತ್ಸೆ ಪಡೆಯಲು ಜಿಗಣಿ, ಆನೇಕಲ್ ಅತವಾ ಅತ್ತಿಬೆಲೆಗೆ ಹೋಗಬೇಕಾಗಿದೆ ಎಂದು ಸ್ಥಳೀಯ ನಿವಾರಿ ಮಣಿ ರಾಜನ್ ಎಂಬುವರು ಹೇಳಿದ್ದಾರೆ.
ಕೈಗಾರಿಕೋದ್ಯಮ, ಟೆಕ್ ಕಚೇರಿಗಳು ಎಲೆಕ್ಟ್ರಾನಿಕ್ ಸಿಟಿಯಲ್ಲಿದ್ದು, ಈ ಕ್ಷೇತ್ರ ಬಿಬಿಎಂಪಿ ವ್ಯಾಪ್ತಿಗೆ ಬರುತ್ತವೆ. ಆದರೆ, ಇಲ್ಲಿನ ನಿವಾಸಿಗಳು ವೈದ್ಯಕೀಯ ನೆರವು ಪಡೆದುಕೊಳ್ಳಲು ಬೊಮ್ಮನಹಳ್ಳಿ, ಬೆಂಗಳೂರು ದಕ್ಷಿಣ ತಾಲೂಕು ಅಥವಾ ಆನೇಕಲ್'ಗೆ ತೆರಳಬೇಕು. ವೀರಸಂದ್ರ, ಹುಲಿಮಂಗಲ, ದೊಡ್ಡತೋಗುರು, ಕೊನಪ್ಪನ ಅಗ್ರಹಾರದಂತಹ ಗ್ರಾಮದಂತೆ ಇಲ್ಲಿನ ಜನರು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಹೋಗಬೇಕೆಂದರೆ 4-7 ಕಿಮೀ ದೂರ ತೆರಳಬೇಕು.
ಕೊರೋನಾ ಮೊದಲನೇ ಅಲೆ ಆರಂಭವಾದಾಗಲೇ ಸಾಕಷ್ಟು ನಿವಾಸಿಗಳು ಇಲ್ಲೊಂದು ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯುವಂತೆ ಮನವಿ ಮಾಡಿಕೊಂಡಿದ್ದರು. ಆದರೆ, ಯಾವುದೇ ಅಧಿಕಾರಿಗಳು ಇದಕ್ಕೆ ಕಿವಿಕೊಟ್ಟಿಲ್ಲ. ಕಳೆದ ವರ್ಷ ಆನೇಕಲ್ ಬೊಮ್ಮನಹಳ್ಳಿಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದೆವು. ಈ ವರ್ಷ ಕೂಡ ಅದೇ ಪರಿಸ್ಥಿತಿ ಎದುರಾಗಿದೆ. ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ ಎಂದು ಸರ್ಕಾರ ಹಾಗೂ ವೈದ್ಯರೂ ಹೇಳುತ್ತಿದ್ದು, ನಮಗೆ ಸಾಕಷ್ಟು ಆತಂಕ ಶುರುವಾಗಿದೆ ಎಂದು ವೀರಸಂದ್ರ ನಿವಾಸಿ ಮನೀಷ್ ಎಲ್ ಎಂಬುವವರು ಹೇಳಿದ್ದಾರೆ.
ಟೌನ್‌ಶಿಪ್ ಪ್ರಾಧಿಕಾರದ ಸದಸ್ಯರು ಮಾತನಾಡಿ, ಈ ಪ್ರದೇಶದ ಸುತ್ತಲೂ ಸುಮಾರು 50,000 ಜನರು ವಾಸಿಸುತ್ತಿದ್ದಾರೆ, ಆದರೂ ಇಲ್ಲಿ ನಾಗರಿಕ ಮತ್ತು ವೈದ್ಯಕೀಯ ಮೂಲಸೌಕರ್ಯಗಳ ಕೊರತೆಯಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ನಿವಾಸಿಗಳಿಗೆ ಪರೀಕ್ಷೆ, ಚಿಕಿತ್ಸೆ, ಲಸಿಕೆ, ಆರೋಗ್ಯ ಪರಿಶೀಲನೆಗೆ ಮೂಲಭೂತ ವೈದ್ಯಕೀಯ ನೆರವು ಬೇಕಾಗುತ್ತದೆ. ನಾವು 1912, 108, ಬೊಮ್ಮನಹಳ್ಳಿ ಅಥವಾ ಆನೇಕಲ್ ತಾಲ್ಲೂಕಿನಿಂದ ಸಹಾಯ ಪಡೆಯುತ್ತಿದ್ದೇವೆ. ಆದರೆ ಇವು ಅತ್ಯಂತ ದೂರದಲ್ಲಿವೆ. ಈ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ನಮಗೆ ಆರೋಗ್ಯ ಕೇಂದ್ರದ ಆಅವಶ್ಯಕತೆಯಿದೆ. ಟೌನ್‌ಶಿಪ್ ಒಳಗೆ ಆರೋಗ್ಯ ಕೇಂದ್ರ ಸ್ಥಾಪಿಸುವಂತೆ ಹಲವು ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದೇವೆ, ಆದರೆ ಅದಾವುದೂ ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿ ಸುತ್ತಮುತ್ತಲಿರುವ ಪ್ರದೇಶಗಳು ಯಾವ ವ್ಯಾಪ್ತಿಗೆ ಬರುತ್ತವೆ ಎಂಬುದು ಕೇವಲ ಜನರಲ್ಲಷ್ಟೇ ಅಲ್ಲ, ಅಧಿಕಾರಿಗಳಲ್ಲೂ ಗೊಂದಲಗಳನ್ನು ಸೃಷ್ಟಿಸಿದೆ. ಬಿಬಿಎಂಪಿ ಉಪ ಆಯುಕ್ತರ ಕತೇರಿ ಗ್ರಾಮಗಳು ಬಿಬಿಎಂಪಿ ದಕ್ಷಿಣ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿದರೆ, ಬಿಬಿಎಂಪಿ ಜಂಯಿ ಆಯುಕ್ತರು ಈ ಪ್ರದೇಶವು ಆನೇಕಲ್ ಅಥವಾ ಬೆಂಗಳೂರು ಗ್ರಾಮೀಣ ಜಿಲ್ಲಾ ವ್ಯಾಪ್ತಿಗೆ ಬರುತ್ತದೆ ಎಂದು ಹೇಳುತ್ತಿದ್ದಾರೆ.
ಬೆಂಗಳೂರು ದಕ್ಷಿಣ ಭಾಗದ ತಹಶೀಲ್ದಾರ್ ಶಿವಪ್ಪ ಎಚ್ ಲಮಾನಿ ಅವರು ಮಾತನಾಡಿ, ಕೆಲವು ಗ್ರಾಮಗಳು ಮಾತ್ರ ತಮ್ಮ ವ್ಯಾಪ್ತಿಗೆ ಬರುತ್ತವೆ ಮತ್ತು ಉಳಿದವುಗಳು ನಾಗರಿಕ ಸಂಸ್ಥೆಯ ಅಡಿಯಲ್ಲಿವೆ ಎಂದು ಹೇಳಿದ್ದಾರೆ. ಇನ್ನು ಈ ಬಗ್ಗೆ ಆನೇಕಲ್ ಪಂಚಾಯತ್'ನ ಯಾವುದೇ ಅಧಿಕಾರಿಗಳೂ ಪ್ರತಿಕ್ರಿಯೆ ನೀಡಲು ಸಂಪರ್ಕಕ್ಕೆ ಸಿಕ್ಕಿಲ್ಲ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ