ಕೋವಿಡ್ ತೊಲಗಲು ಗ್ರಾಮ ಪ್ರದಕ್ಷಿಣೆಗೆ ಬಿಟ್ಟಿದ್ದ 'ದೇವರ' ಕುದುರೆ ಸಾವು: ಅಂತ್ಯಕ್ರಿಯೆಯಲ್ಲಿ ನೂರಾರು ಮಂದಿ ಭಾಗಿ!

ಕೊರೊನಾ ತೊಲಗಲೆಂದು ಸಂಚಾರ ಮಾಡಲು ಬಿಟ್ಟಿದ್ದ ಗೋಕಾಕ್ ತಾಲೂಕಿನ ಮರಡಿ ಮಠದ ದೇವರ ಕುದುರೆ ಮೃತಪಟ್ಟಿದೆ.
ಮರಡಿಮಠದ ಪ್ರದೇಶದಲ್ಲಿ ಮುನ್ನೆಚ್ಚರಿಕೆ ಕ್ರಮದ ಭಾಗವಾಗಿ ಪೊಲೀಸ್ ಬಂದೋಬಸ್ತ್
ಮರಡಿಮಠದ ಪ್ರದೇಶದಲ್ಲಿ ಮುನ್ನೆಚ್ಚರಿಕೆ ಕ್ರಮದ ಭಾಗವಾಗಿ ಪೊಲೀಸ್ ಬಂದೋಬಸ್ತ್

ಬೆಳಗಾವಿ: ಕೊರೊನಾ ತೊಲಗಲೆಂದು ಸಂಚಾರ ಮಾಡಲು ಬಿಟ್ಟಿದ್ದ ಗೋಕಾಕ್ ತಾಲೂಕಿನ ಮರಡಿ ಮಠದ ದೇವರ ಕುದುರೆ ಮೃತಪಟ್ಟಿದ್ದು, ಮೃತಪಟ್ಟಿರುವ ಕುದುರೆಯ ಅಂತ್ಯ ಸಂಸ್ಕಾರದಲ್ಲಿ ನೂರಾರು ಮಂದಿ ಭಾಗವಹಿಸಿದ್ದು ಕೊರೋನಾ ನಡುವೆ ಈಗ ಮತ್ತೊಂದು ಆತಂಕಕ್ಕೆ ಕಾರಣವಾಗಿದೆ. 

ಕೋವಿಡ್-19 ನಿಯಮಗಳನ್ನು ಉಲ್ಲಂಘಿಸಿ, ನೂರಾರು ಮಂದಿ ಭಾಗಿಯಾಗಿದ್ದರು. ಪರಿಣಾಮ ಅಧಿಕಾರಿಗಳು ಗ್ರಾಮವನ್ನು ಸೀಲ್ ಮಾಡಿದ್ದು, 15 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. 

ಮರಡಿಮಠದ ಪವಾಡೇಶ್ವರ ಶ್ರೀಗಳ ಮಾರ್ಗದರ್ಶನದಲ್ಲಿ ಕುದುರೆ ಕೋವಿಡ್-19 ತೊಲಗಿಸುತ್ತದೆ. ಗ್ರಾಮಸ್ಥರನ್ನು ರಕ್ಷಿಸುತ್ತದೆ ಎಂಬ ನಂಬಿಕೆಯೊಂದಿಗೆ ಮಠದ ಕುದುರೆಯನ್ನು ಬುಧವಾರದಂದು ಗ್ರಾಮದಲ್ಲಿ ಅಡ್ಡಾಡಲು ಬಿಟ್ಟಿದ್ದರು. 

ದಶಕಗಳ ಹಿಂದೆ ಗ್ರಾಮದಲ್ಲಿ ಮಲೇರಿಯಾ ಹಾಗೂ ಕಾಲರ, ಪ್ಲೇಗ್ ಬಂದಿದ್ದಾಗ ಈ ಕುದುರೆ ಹೇಗೆ ಗ್ರಾಮಸ್ಥರನ್ನು ರಕ್ಷಿಸಿತ್ತು ಎಂಬುದರ ಬಗ್ಗೆ ಕಥೆ ಕೇಳಿದ್ದ ಗ್ರಾಮಸ್ಥರು ಈ ಬಾರಿಯೂ ಅಂಥಹದ್ದೇ ಪವಾಡ ನಡೆಯುತ್ತದೆ ಎಂದು ಗ್ರಾಮಸ್ಥರು ನಂಬಿದ್ದರು.

ಇದೇ ಕುದುರೆಯನ್ನು ಕೋವಿಡ್-19 ಮೊದಲ ಅಲೆಯಲ್ಲಿಯೂ ಗ್ರಾಮದಲ್ಲಿ ಅಡ್ಡಾಡಲು ಬಿಟ್ಟಿದ್ದರು. ಈಗ ಎರಡನೇ ಅಲೆ ಹೆಚ್ಚಾದಾಗಲೂ ಮರಡಿಮಠದಲ್ಲಿ ಸ್ವಾಮಿಜಿಗಳು ಹಾಗೂ ಗ್ರಾಮಸ್ಥರು ಸಭೆ ಸೇರಿ ಕುದುರೆಯನ್ನು ಅಡ್ಡಾಡಲು ಬಿಡಲು ನಿರ್ಧರಿಸಿದ್ದರು.

ಪೂಜೆ ಸಲ್ಲಿಸಿ ಬುಧವಾರದಂದು ರಾತ್ರಿ ಕಾಡಸಿದ್ಧೇಶ್ವರ ಸ್ವಾಮಿ ಅವರ ಕುದುರೆಯನ್ನು ಗ್ರಾಮ ಪ್ರದಕ್ಷಿಣೆಗೆ ಬಿಡಲಾಗಿತ್ತು. ಇದಾದ ಬಳಿಕ 5 ಸೋಮವಾರಗಳು ಹಾಗೂ ಶುಕ್ರವಾರಗಳು ಕಾಡಸಿದ್ದೇಶ್ವರ ಸ್ವಾಮಿಯನ್ನು ಪ್ರಾರ್ಥಿಸಲು ಧಾರ್ಮಿಕ ಸಂಘಟನೆಗಳು ಗ್ರಾಮಸ್ಥರಿಗೆ ಕರೆ ನೀಡಿದ್ದವು

ಭಾನುವಾರದಂದು ಕುದುರೆ ಸಾವನ್ನಪ್ಪಿದ್ದು, ದೈವ ಕುದುರೆಯ ಅಂತ್ಯಸಂಸ್ಕಾರದಲ್ಲಿ ನೂರಾರು ಮಂದಿ ಭಾಗಿಯಾಗಿರುವುದು ಈಗ ಮತ್ತೊಂದು ತಲೆಬಿಸಿ ಮೂಡಿಸಿದೆ. 

ಘಟನೆ ಬಳಿಕ ಗೋಕಾಕ್ ನ ತಹಶೀಲ್ದಾರ್ ಪ್ರಕಾಶ್ ಹೊಳೆಪ್ಪಗೋಳ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಇತ್ತೀಚಿನ ಮಾಹಿತಿಯ ಪ್ರಕಾರ ಮರಡಿಮಠಕ್ಕೆ ಭಕ್ತಾದಿಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.ಮರಡಿಮಠದ ಪ್ರದೇಶದಲ್ಲಿರುವ ನೂರಾರು ಮನೆಗಳನ್ನೂ ಸೀಲ್ ಮಾಡಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com