ಮೈಸೂರು: 2021ರ ದಸರಾ ಮಹೋತ್ಸವಕ್ಕೆ 4.22 ಕೋಟಿ ವೆಚ್ಚವಾಗಿದೆ ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಸೋಮವಾರ ಹೇಳಿದ್ದಾರೆ.
ನಾಡಹಬ್ಭ ಮೈಸೂರು ದಸರಾ ಮಹೋತ್ಸವದ ಇತಿಹಾಸದಲ್ಲಿ ಎರಡನೇ ಬಾರಿಗೆ ರಾಜ್ಯ ಸರ್ಕಾರದಿಂದ ಬಿಡುಗಡೆಯಾದ ಅನುದಾನದ ಖರ್ಚುವೆಚ್ಚಗಳ ಸಂಪೂರ್ಣ ಮಾಹಿತಿಯನ್ನು ಅರಮನೆ ಮಂಡಳಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ಮೂಲಕ ಸೋಮಶೇಖರ್ ಅವರು ಬಿಡುಗಡೆ ಮಾಡಿದರು.
ಮೈಸೂರು ದಸರಾಗೆ 4,22,07,679 ರೂ., ಖರ್ಚಾಗಿದೆ. ಶ್ರೀರಂಗಪಟ್ಟಣ, ಚಾಮರಾಜನಗರ ದಸರಾ ಆಚರಣೆಗೆ ತಲಾ 50 ಲಕ್ಷ ರೂ., ಅರಕಲಗೂಡು ದಸರಾಗೆ 20 ಲಕ್ಷ ರೂ. ಬಿಡುಗಡೆ ಮಾಡಿದ್ದು ಒಟ್ಡು 5,42,07,679 ರೂ. ಹಣ ಖರ್ಚಾಗಿದೆ ಎಂದು ವಿವರಿಸಿದರು.
ಮೈಸೂರು ದಸರಾ ಆಮಂತ್ರಣ ಪತ್ರಿಕೆ, ಮುದ್ರಣ ಇತ್ಯಾದಿಗಳಿಗೆ 5,91,960 ರೂ. ಖರ್ಚಾಗಿದ್ದರೆ, ಗಣ್ಯರು ಮತ್ತು ಕಲಾವಿದರ ಸಾರಿಗೆ ವ್ಯವಸ್ಥೆಗೆ 29,16,416 ರೂ. ಖರ್ಚಾಗಿದೆ. ಜಂಬೂಸವಾರಿ ಮೆರವಣಿಗೆಗೆ 37,50,772 ರೂ., ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಕಲಾವಿದರ ಸಂಭಾವನೆಗೆ 1,03,64,272 ರೂ. ಖರ್ಚಾಗಿದೆ. ಸ್ತಬ್ಧ ಚಿತ್ರ ನಿರ್ಮಾಣಕ್ಕೆ 18,85,102 ರೂ., ಆನೆಗಳ ನಿರ್ವಹಣೆಗೆ 50 ಲಕ್ಷ ರೂ., ದಸರಾ ಕಾರ್ಯಕ್ರಮಗಳ ವೇದಿಕೆ ಮತ್ತು ವಿದ್ಯುತ್ ಕಾಮಗಾರಿಗಳ ವ್ಯವಸ್ಥೆಗಾಗಿ 93,80,000 ರೂ., ವೆಬ್ ಕ್ಯಾಸ್ಟಿಂಗ್ ಗೆ 11,09,200 ರೂ. ವೆಚ್ಚವಾಗಿದೆ. ಅರಮನೆಗೆ ಗೌರವ ಸಂಭಾವನೆಯಾಗಿ 40 ಲಕ್ಷ ರೂ., ದೂರದರ್ಶನದಲ್ಲಿ ಜಂಬೂಸವಾರಿ ನೇರಪ್ರಸಾರ ಮಾಡಿದ್ದಕ್ಕೆ 6,22,513 ರೂ., ದಸರಾ ಆನೆಗಳು ಹಾಗೂ ಕಾವಾಡಿಗರ ವಿಮೆಗೆ 24 ಸಾವಿರ ರೂ. ಭರಿಸಲಾಗಿದೆ.
ದಸರಾ ಸಂಬಂಧ ಉಪ ಸಮಿತಿ ಸಭೆಗೆ ಲೇಖನ ಸಾಮಾಗ್ರಿಗೆ 3245 ರೂ., ಉನ್ನತ ಮಟ್ಟದ ಸಮಿತಿ ಸಭೆ ಶಿಷ್ಟಾಚಾರಕ್ಕೆ ಹೋಟೆಲ್ ಮತ್ತು ಇತರೆ ವೆಚ್ಚಗಳಿಗೆ 47250 ರೂ., ದಸರಾ ಸಂಬಂಧ ನಡೆದ ವಿವಿಧ ಸಭೆಗಳಿಗೆ ಕಾಫಿ, ಟೀ, ಸ್ಮ್ಯಾಕ್ಸ್ ಗೆ 40,878 ರೂ., ಬಿಎಸ್ ಎನ್ ಎಲ್ ಗೆ 78,668 ರೂ., ಉನ್ನತ ಮಟ್ಟದ ಸಭೆಗೆ ಮತ್ತು ವಿಶೇಷಾಧಿಕಾರಿಗಳ ಕಚೇರಿಗೆ ಲೇಖನ ಸಾಮಾಗ್ರಿ ಖರೀದಿಗೆ 90,919 ರೂ., ಜಂಬೂ ಸವಾರಿ ನೇರ ವೀಕ್ಷಣೆ ವಿವರಣೆ ಬಿತ್ತರಿಸಲು ಆಕಾಶವಾಣಿಗೆ 67 ಸಾವಿರ ರೂ. ಪಾವತಿಸಲಾಗಿದೆ.
ದಸರಾ ಕಾರ್ಯಕ್ರಮಗಳ ಫೋಟೋ, ವೀಡಿಯೋಗ್ರಾಫಿಗೆ 95 ಸಾವಿರ ರೂ., ಸ್ವಚ್ಛತೆ ನಿರ್ವಹಣೆಗೆ 10, 76,072 ರೂ., ವಾರ್ತಾ ಇಲಾಖೆಗೆ 64,412 ರೂ., ದಸರಾ ರಂಗೋತ್ಸವ ಕಾರ್ಯಕ್ರಮಕ್ಕೆ ಅಂದಾಜು 10 ಲಕ್ಷ ರೂ. ವೆಚ್ಚವಾಗಿದೆ ಎಂದು ಸಚಿವರು ಮಾಹಿತಿ ಬಿಡುಗಡೆ ಮಾಡಿದರು.
ಮೈಸೂರಿನ ಪ್ರವಾಸೋದ್ಯಮ ಸುಧಾರಣೆಗೆ ಕೈಗೊಂಡಿರುವ ಕ್ರಮಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ದಸರಾ ಸಂದರ್ಭದಲ್ಲಿ ಮಾತ್ರವಲ್ಲದೆ 365 ದಿನಗಳಲ್ಲೂ ಪ್ರವಾಸಿಗರನ್ನು ಆಕರ್ಷಿಸಲು ಮೈಸೂರನ್ನು ಪರಿಪೂರ್ಣ ಪ್ರವಾಸಿ ತಾಣವನ್ನಾಗಿ ಮಾಡುವ ಯೋಜನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈಗಾಗಲೇ ಘೋಷಿಸಿದ್ದಾರೆ. ಈ ಸಂಬಂಧ ಶೀಘ್ರವೇ ಸಭೆ ನಡೆಸಲಾಗುವುದು ಎಂದರು.
Advertisement