ಮೈಸೂರು: ರಸ್ತೆ ಸಂಪರ್ಕವಿಲ್ಲದೆ ಮಳೆ ನಡುವೆಲೇ ತುಂಬು ಗರ್ಭಿಣಿ ಮಹಿಳೆಯೊಬ್ಬರು ನೋವಿನಲ್ಲೂ 1.5 ಕಿಮೀ ನಡೆದು ಆ್ಯಂಬುಲೆನ್ಸ್ ಏರಿದ ಘಟನೆ ಹೆಚ್.ಡಿ.ಕೋಟೆ ತಾಲೂಕಿನ ಬೊಮ್ಮಾಲಪುರ ಹಾಡಿಯಲ್ಲಿ ನಡೆದಿದೆ.
ನಾಗರಹೊಳೆ ಅಭಯಾರಣ್ಯದಲ್ಲಿರುವ ಬೊಮ್ಮಾಲಪುರ ಹಾಡಿಯಲ್ಲಿ ವಾಹನಗಳ ಓಡಾಟಕ್ಕೆ ಸೂಕ್ತ ರಸ್ತೆ ಸಂಪರ್ಕವಿಲ್ಲದೇ ಕಾಲ್ನಡಿಗೆಯಲ್ಲಿಯೇ ಸಂಚರಿಸಬೇಕಾದ ಅನಿವಾರ್ಯ ಸ್ಥಿತಿಯಿದೆ.
ಈ ಹಾಡಿಯ ನಿವಾಸಿ ರಂಜಿತಾ ಎನ್ನುವವರಿಗೆ ಶುಕ್ರವಾರ ಸಂಜೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ವೇಳೆ ಕುಟುಂಬಸ್ಥರು ಆಶಾ ಕಾರ್ಯಕರ್ತೆ ಮಂಗಳ ಅವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಮಂಗಳವಾ ಅವರು ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿದ್ದಾರೆ. ಆದರೆ, ಮಹಿಳೆ ನೆಲೆಸಿರುವ ಬೊಮ್ಮಾಲಪುರ ಹಾಡಿಯಲ್ಲಿ ವಾಹನಗಳ ಓಡಾಟಕ್ಕೆ ಸೂಕ್ತ ರಸ್ತೆ ಸಂಪರ್ಕವಿಲ್ಲದ ಕಾರಣ ಅನಿವಾರ್ಯವಾಗಿ ನೋವಿನಲ್ಲೇ 1.5 ಕಿಮೀ ನಡೆದುಕೊಂಡು ಬಂದು ಆ್ಯಂಬುಲೆನ್ಸ್ ಏರುವ ಪರಿಸ್ಥಿತಿ ಎದುರಾಗಿದೆ.
ಗ್ರಾಮೀಣ ಬುಡಕಟ್ಟು ಜನಾಂಗದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವಿವೇಕಾನಂದ ಮೆಮೊರಿಯಲ್ ಆಸ್ಪತ್ರೆಯ ಆ್ಯಂಬುಲೆನ್ಸ್ ಸೂಕ್ತ ಸಮಯಕ್ಕೆ ಸ್ಥಳಕ್ಕೆ ಬಂದರೂ, ಸೂಕ್ತ ರಸ್ತೆ ವ್ಯವಸ್ಥೆಗಳಿಲ್ಲದ ಕಾರಣ ಸೂಕ್ತ ಸಮಯಕ್ಕೆ ಮಹಿಳೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಾಧ್ಯವಾಗಿಲ್ಲ.
ಛತ್ರಿ ಹಿಡಿದುಕೊಂಡು ಗರ್ಭಿಣಿ ಮಹಿಳೆಯಿದ್ದ ಸ್ಥಳಕ್ಕೆ ತೆರಳಿದ ಮಂಗಳ ಅವರು ಅವರನ್ನು ಜೊತೆಯಲ್ಲಿ ಕರೆದುಕೊಂಡು ಬಂದು ಆ್ಯಂಬುಲೆನ್ಸ್ ಹತ್ತಿಸಿದ್ದಾರೆ.
ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ಸೇರಿಸಿದ ಪರಿಣಾಮ ಮಹಿಳೆ ಆರೋಗ್ಯಕರವಾದ ಮಗುವಿಗೆ ಜನ್ಮ ನೀಡಲು ಸಾಧ್ಯವಾಯಿತು. ರಾತ್ರಿ ಸಮಯವಾಗಿದ್ದರೆ ಬಹಳ ಕಷ್ಟವಾಗಿ ಹೋಗುತ್ತಿತ್ತು. ರಾತ್ರಿ ಸಮಯದಲ್ಲಿ ಕಾಡು ಪ್ರಾಣಿಗಳ ಓಡಾಟ ಇರುವುದರಿಂದ ಕಷ್ಟವಾಗುತ್ತಿತ್ತು. ಇದೇ ರೀತಿಯ ಪರಿಸ್ಥಿತಿಯನ್ನು ಇಲ್ಲಿನ ಶಾಲೆ ಹಾಗೂ ಅಂಗನವಾಡಿಯ ಮಕ್ಕಳೂ ಎದುರಿಸುತ್ತಿದ್ದಾರೆಂದು ಮಂಗಳಾ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ನಿವಾಸಿ ಕಾಳಪ್ಪ ಅವರು ಮಾತನಾಡಿ, ರಸ್ತೆ ಸಂಪರ್ಕ ಕಲ್ಪಿಸುವುದಾಗಿ ಅಧಿಕಾರಿಗಳು ಹೇಳಿದ್ದರು. ಇದು ನಮಗೆ ಸಂತಸ ತಂದಿತ್ತು. ಇದಕ್ಕಾಗಿ ಅಗತ್ಯವಿರುವ ವಸ್ತುಗಳನ್ನೂ ತರಲಾಗಿತ್ತು. ಆದರೆ, ಅರಣ್ಯಾಧಿಕಾರಿಗಳು ಒಪ್ಪಿಗೆ ನೀಡುತ್ತಿಲ್ಲ. ಮಳೆಗಾಲ ಬಂದಾಗ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿರುತ್ತದೆ ಎಂದು ಹೇಳಿದ್ದಾರೆ.
Advertisement