ಹವಾಮಾನ ವೈಪರೀತ್ಯ ತಡೆಯಲು ರಾಜ್ಯ ಸರ್ಕಾರಕ್ಕೆ 52 ಲಕ್ಷ ಕೋಟಿ ರೂಪಾಯಿ ಅಗತ್ಯವಿದೆ!

ಹವಾಮಾನ ವೈಪರೀತ್ಯ ತಡೆಯುವ ಪ್ರಯತ್ನಗಳಿಗಾಗಿ 2025 ರ ವೇಳೆಗೆ 20,88,041.23 ಕೋಟಿ ಮತ್ತು 2030 ರ ವೇಳೆಗೆ 52,82,744.32 ಕೋಟಿ ರೂಪಾಯಿಗಳ ಬಜೆಟ್ ಹಂಚಿಕೆ ಅಗತ್ಯವಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಹವಾಮಾನ ವೈಪರೀತ್ಯ ತಡೆಯುವ ಪ್ರಯತ್ನಗಳಿಗಾಗಿ 2025 ರ ವೇಳೆಗೆ 20,88,041.23 ಕೋಟಿ ಮತ್ತು 2030 ರ ವೇಳೆಗೆ 52,82,744.32 ಕೋಟಿ ರೂಪಾಯಿಗಳ ಬಜೆಟ್ ಹಂಚಿಕೆ ಅಗತ್ಯವಿದೆ ಎಂದು ತಿಳಿದುಬಂದಿದೆ.

ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (ಇಎಂಪಿಆರ್'ಐ) ಸಿದ್ಧಪಡಿಸಿದ ಮತ್ತು 2015 ರ ವರದಿಯ ಎರಡನೇ ಆವೃತ್ತಿಯಾದ ಹವಾಮಾನ ಬದಲಾವಣೆಯ ಕರ್ನಾಟಕ ರಾಜ್ಯ ಕ್ರಿಯಾ ಯೋಜನೆ- ಆವೃತ್ತಿ-2 ರ ಕರಡು ಮೂಲಕ ಈ ಮೊತ್ತವನ್ನು ಅಂದಾಜಿಸಲಾಗಿದೆ ಎಂದು ತಿಳಿದುಬಂದಿದೆ.

ಈ ವರದಿಯನ್ನು ಈಗಾಗಲೇ ಕೇಂದ್ರ ಸರ್ಕಾರದ ಮುಂದಿಡಲಾಗಿದ್ದು, ಅನುಮೋದನೆ ಬಳಿಕ ಅನುಷ್ಟಾನಗೊಳಿಸಲು ಸರ್ಕಾರ ಮುಂದಾಗಿದೆ ಎಂದು ವರದಿಗಳು ತಿಳಿಸಿವೆ.

15 ಹವಾಮಾನ ಮಾದರಿಗಳನ್ನು ಬಳಸಿಕೊಂಡು ಈ ವರದಿಯನ್ನು ಸಿದ್ಧಪಡಿಸಲಾಗಿದೆ ಎಂದು ಇಎಂಪಿಆರ್ಐ ಮಹಾನಿರ್ದೇಶಕ ಜಗಮೋಹನ್ ಶರ್ಮಾ ಮಂಗಳವಾರ ಹೇಳಿದ್ದಾರೆ.

ಗ್ಲಾಸ್ಲೋದಲ್ಲಿನ ಹವಾಮಾನ ಶೃಂಗ (ಸಿಒಪಿ26) ಕುರಿತು ಮಾತನಾಡಿರುವ ಶರ್ಮಾ ಅವರು, ರಾಜ್ಯದಲ್ಲಿ ಬೇಸಿಗೆ ಮತ್ತು ಚಳಿಗಾಲದ ವೇಳೆ ತಾಪಮಾನವು 0.5 ರಿಂದ 2.5 ಡಿಗ್ರಿ ಸೆಲ್ಸಿಯಸ್‌ನಷ್ಟು ಬದಲಾಗುತ್ತದೆ. ಮಳೆ ಕೂಡ ಹೆಚ್ಚಾಗುತ್ತವೆ. ಇದರಿಂದ ರಬಿ ಮತ್ತು ಖಾರಿಫ್ ಬೆಳೆಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ತಿಳಿಸಿದ್ದಾರೆ.

"ಹವಾಮಾನ ಬದಲಾವಣೆಯನ್ನು ಎಲ್ಲಾ ಆಯಾಮಗಳಿಂದಲೂ ಪರಿಹರಿಸಬೇಕು, ಹವಾಮಾನ ವೈಪರೀತ್ಯದ ಪರಿಣಾಮ, ಮೌಲ್ಯಮಾಪನ ಮತ್ತು ಪರಿಹಾರ ಕ್ರಮಗಳನ್ನು ಪಂಚಾಯತ್ ಮಟ್ಟದಲ್ಲಿ ರೂಪಿಸಬೇಕು ಎಂದು ವಿಶ್ವಸಂಸ್ಥೆ ಸಮಿತಿಯ ಸದಸ್ಯ ಡಾ.ಎಚ್.ಎನ್.ರವೀಂದ್ರನಾಥ್ ಅವರು ಸಲಹೆ ನೀಡಿದ್ದಾರೆ.

ಹವಾಮಾನ ವೈಪರೀತ್ಯ ತಡೆಯುವ, ಪರಿಹರಿಸುವ ಯೋಜನೆಗಳಿಗೆ ಹಣವನ್ನು ನೀಡಲಾಗುವುದು ಎಂದು ಈಗಾಗಲೇ ವಿಶ್ವಬ್ಯಾಂಕ್ ಹೇಳಿರುವುದರಿಂದ, ಕರ್ನಾಟಕ ಮತ್ತು ಭಾರತ ಅಂತಹ ಯೋಜನೆಗಳನ್ನು ಸಿದ್ಧಪಡಿಸಲು ಪ್ರಾರಂಭಿಸಬೇಕು. ಆಗ ಮಾತ್ರ ಸಮಸ್ಯೆಗಳ ಪರಿಹರಿಸಲು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹಣ ಸಿಕ್ಕಂತಾಗುತ್ತದೆ ಎಂದು ತಿಳಿಸಿದ್ದಾರೆ.

ರಾಜ್ಯ ಸರ್ಕಾರ ಕಾರ್ಯಗತಗೊಳಿಸುವ ಸಣ್ಣ ಯೋಜನೆಗಳು ಪರಿಸರದ ಮೇಲೆ ಪರಿಣಾಮ ಬೀರಲಿದ್ದು, ಸೌರಶಕ್ತಿಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದರೂ ಶೇ.80ರಷ್ಟು ಪ್ಯಾನೆಲ್ ಗಳು ಚೀನಾದಲ್ಲಿ ತಯಾರಾಗಿರುತ್ತವೆ ಎಂಬುದು ಸಾಕಷ್ಟು ಜನರಿಗೆ ತಿಳಿದಿಲ್ಲ. ಅವುಗಳನ್ನು ಭಾರತದಲ್ಲಿ ತಯಾರಿಸಿದರೆ ಸಾಕಷ್ಟು ಬದಲಾವಣೆಗಳನ್ನು ಕಾಣಬಹುದು ಎಂದಿದ್ದಾರೆ.

ಹವಾಮಾನ ಶೃಂಗ (ಸಿಒಪಿ26) ಭಾರತವು ದ್ವೀಪ ರಾಷ್ಟ್ರಗಳಿಗೆ ನೆರವು ನೀಡಲು ಬದ್ಧವಾಗಿದೆ ಎಂದು ಹೇಳಿದೆ. ಕರ್ನಾಟಕದಲ್ಲಿ 94 ದ್ವೀಪಗಳು ಮತ್ತು ಕರಾವಳಿ ಪ್ರದೇಶಗಳು ಈಗಾಗಲೇ ಮಣ್ಣಿನ ಸವೆತಕ್ಕೆ ಸಾಕ್ಷಿಯಾಗುತ್ತಿವೆ ಮತ್ತು ಅದರ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿಲ್ಲ ಎಂದು ತಜ್ಞರು ಮಾಹಿತಿ ನೀಡಿದ್ದಾರೆ.

ಈ ಕುರಿತು ಶರ್ಮಾ ಮಾತನಾಡಿ, ಹವಾಮಾನ ಬದಲಾದಂತೆ ಬೆಳೆ ಬೆಳೆಯುವ ಮಾದರಿ ಮತ್ತು ಪ್ರಕಾರ ಬದಲಾಗುತ್ತದೆ. ಒಣ ಪ್ರದೇಶಗಳು ಮತ್ತು ಉತ್ತರ ಕರ್ನಾಟಕದ ಪ್ರದೇಶಗಳಲ್ಲಿ ಹೆಚ್ಚು ಮಳೆ ಕಂಡುಬರುತ್ತದೆ, ಅಲ್ಲಿನ ಮಣ್ಣು ಕಡಿಮೆ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಕೆಲವರು ಇದು ಒಳ್ಳೆಯದು ಎಂದು ಹೇಳಿದರೆ, ಸಮತೋಲಿತ ಪರಿಸರ ಮತ್ತು ಆರ್ಥಿಕ ಅಭಿವೃದ್ಧಿಗೆ ಇದು ಕಾಳಜಿಯ ವಿಷಯವಾಗಿದೆ ಎಂದು ಕೆಲವರು ಹೇಳಿದ್ದಾರೆಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com