
ಬೆಂಗಳೂರು: ಇತಿಹಾಸ ಪ್ರಸಿದ್ಧ ಬೆಂಗಳೂರು ಕಡಲೇಕಾಯಿ ಪರಿಷೆಗೆ ಕ್ಷಣಗಣನೆ ಆರಂಭವಾಗಿದೆ. ಇದರಲ್ಲಿ ಭಾಗವಹಿಸಲು ವಿವಿಧೆಡೆಗಳಿಂದ ಬಂದಿರುವ ವ್ಯಾಪಾರಿಗಳಲ್ಲಿ ಆಕರ್ಷಕ ಜಾಗಗಳನ್ನು ಹಿಡಿಯಲು ಪೈಪೋಟಿ ಆರಂಭವಾಗಿದೆ.
ನವೆಂಬರ್ 29ರಂದು ಕಾರ್ತಿಕ ಮಾಸದ ಕೊನೆ ಸೋಮವಾರ. ಅಂದು ಶಿವ ದೇಗುಲಗಳಲ್ಲಿ ವಿಶೇಷ ಪೂಜೆ. ಅಂದು ಶಿವನ ವಾಹನ ನಂದಿಗೆ ಬಸವನಗುಡಿಯಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಕಡಲೇಕಾಯಿ ಪ್ರಸಾದವೇ ಪ್ರಮುಖ ಆಕರ್ಷಣೆ. ಜೊತೆಗೆ ಅಂದು ಬೆಂಗಳೂರು ಸುತ್ತಮುತ್ತ ಮಾತ್ರವಲ್ಲದೇ ಹೊರರಾಜ್ಯಗಳ ಗಡಿಪ್ರದೇಶಗಳಲ್ಲಿರುವ ಜಿಲ್ಲೆಗಳ ರೈತರು ಸಹ ತಾವು ಬೆಳೆದ ಕಡಲೇಕಾಯಿಗಳನ್ನು ಹೊತ್ತು ತರುತ್ತಾರೆ.
ಹೀಗೆ ಬಂದವರಲ್ಲಿ ರೈತರಿಂದ ಕಡಲೇಕಾಯಿ ಖರೀದಿಸಿ ತಂದು ಪರಿಷೆಯಲ್ಲಿ ಮಾರಾಟ ಮಾಡುವ ವ್ಯಾಪಾರಿಗಳ ಸಂಖ್ಯೆಯೇ ಅಧಿಕ. ಇವರ ಪಾಲಿಗೆ ಬಸವನಗುಡಿ ರಸ್ತೆಯ ರಾಮಕೃಷ್ಣಾಶ್ರಮ ವೃತ್ತದಿಂದ ಆರಂಭಿಸಿ ದೇವಸ್ಥಾನದವರೆಗಿನ ಸ್ಥಳಗಳು ಅತೀ ಪ್ರಮುಖ. ಇಲ್ಲಿಯೇ ಜನಸಂದಣಿ ಕೇಂದ್ರೀಕೃತವಾಗಿರುತ್ತದೆ. ನಿಗದಿತ ದಿನಕ್ಕೂ ಮೂರುದಿನ ಮೊದಲೇ ಬಂದು ಗುರುತಿಸಿಕೊಂಡ ಜಾಗಗಳಲ್ಲಿ ತಮ್ಮ ಬಿಡಾರ ಹೂಡುತ್ತಾರೆ. ಪರಿಶೆ ಮುಕ್ತಾಯವಾಗುವ ತನಕ ಇಲ್ಲಿಯೇ ವಾಸ.
ಈ ಭಾಗದಲ್ಲಿ ಜಾಗಗಳು ದೊರೆಯದ ವ್ಯಾಪಾರಿಗಳು ಹನುಮಂತನಗರ, ಗವಿ ಗಂಗಾಧರೇಶಶ್ವರಗಳಿಗೆ ಹೋಗುವ ರಸ್ತೆಗಳಲ್ಲಿ ಕಡಲೇಕಾಯಿ ವ್ಯಾಪಾರಕ್ಕಾಗಿ ಜಾಗಗಳನ್ನು ಗುರುತಿಸಿಕೊಳ್ಳಲು ಶುರು ಮಾಡುತ್ತಾರೆ. ಇನ್ನೂ ತಡವಾಗಿ ಬಂದವರು ರಾಮಕೃಷ್ಣ ಆಶ್ರಮದಿಂದ ಚಾಮರಾಜನಗರ 5ನೇ ಮುಖ್ಯರಸ್ತೆಯೆಡೆಗೆ ಸಾಗುವ ಜಾಗಗಳಲ್ಲಿ ಬಿಡಾರ ಹೂಡುತ್ತಾರೆ.
ಪಾದಚಾರಿ ಮಾರ್ಗಗಳಲ್ಲಿ ಕಡಲೇಕಾಯಿ ವ್ಯಾಪಾರಿಗಳು ಬಿಡಾರ ಹೂಡಿದರೆ ಅದರ ಪಕ್ಕದಲ್ಲಿಯೇ ಜಾತ್ರೆಯಲ್ಲಿ ಮಾರಾಲ್ಪಡುವ ಬೆಂಡು ಬತ್ತಾಸು, ಕಡಲೇಪುರಿ, ಸಿಹಿತಿಂಡಿಗಳ ಜತೆಜತೆಗೆ ಇನ್ನಿತರೆ ಸಾಮಗ್ರಿಗಳ ಮಾರಾಟಗಾರರು ತಮ್ಮ ತಳ್ಳುಗಾಡಿಗಳನ್ನು ನಿಲ್ಲಿಸಿಕೊಳ್ಳಲು ಶುರು ಮಾಡಿದ್ದಾರೆ. ಒಮ್ಮೆ ಇವರು ಜಾಗ ಹಿಡಿದರೆ ಜಾತ್ರೆ ಮುಕ್ತಾಯವಾಗುವ ತನಕ ಅದರ ಸ್ವಾಮ್ಯ ಅವರದೇ ಆಗಿರುತ್ತದೆ. ಈ ಜಾಗಗಳಲ್ಲಿ ಬೇರೆ ವ್ಯಾಪಾರಿಗಳು ಬಂದು ಬಿಡಾರ ಹೂಡುವಂತಿಲ್ಲ.
ಕಳೆದೆರಡು ವರ್ಷ ಕೋವಿಡ್ ಕರಿಛಾಯೆ ಕಾರಣ ಪರಿಷೆ ಸಂಪೂರ್ಣ ಮಂಕಾಗಿತ್ತು. ಈ ಬಾರಿ ಕೋವಿಡ್ ಅಲೆ ಪ್ರಭಾವ ಇಲ್ಲದಿರುವುದರಿಂದ ಕಡಲೇಕಾಯಿ ಮೂಟೆಗಳನ್ನೇ ಹೊತ್ತು ತಂದಿರುವ ವ್ಯಾಪಾರಿಗಳಲ್ಲಿ ಭಾರೀ ನಿರೀಕ್ಷೆ ಇದೆ. ಒಟ್ಟಾರೆ 6 ಲಕ್ಷಕ್ಕೂ ಅಧಿಕ ಮಂದಿ ಸೇರುವ ನಿರೀಕ್ಷೆಯನ್ನು ಅವರು ಇಟ್ಟುಕೊಂಡಿದ್ದಾರೆ. ಹಲವಾರು ವ್ಯಾಪಾರಿಗಳು ಕಡಲೇಕಾಯಿ ಸೇರಿದಂತೆ ವಿವಿಧ ಸಾಮಗ್ರಿಗಳ ವ್ಯಾಪಾರ ಜೋರಾಗಿ ನಡೆಯಲೆಂದು ಹರಕೆಗಳನ್ನೂ ಕಟ್ಟಿಕೊಂಡಿದ್ದಾರೆ.
ವಿಶೇಷ ವರದಿ: ಕುಮಾರ ರೈತ
Advertisement